ಉಡುಪಿ ಜಿಲ್ಲೆಯಲ್ಲಿ ಪೊಲೀಸರಿಗೆ ಕೊರೋನಾ ಪಾಸಿಟಿವ್ ; ಮೂರು ಠಾಣೆಗಳಲ್ಲಿ ಸಾರ್ವಜನಿಕರ ಸೇವೆಗೆ ಪರ್ಯಾಯ ವ್ಯವಸ್ಥೆ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಭಾನುವಾರ ಮೂವರು ಪೊಲೀಸರಿಗೆ ಕೊರೋನಾ ಸೋಂಕು ದೃಢವಾದ ಹಿನ್ನಲೆಯಲ್ಲಿ ಮೂರು ಠಾಣೆಗಳ ದೈನಂದಿನ ಕಾರ್ಯನಿರ್ವಹಣೆಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ತಿಳಿಸಿದ್ದಾರೆ.
ಈ ಕುರಿತು ಮ್ಯಾಂಗಲೊರಿಯನ್ ಜೊತೆ ಮಾತನಾಡಿ ಮೂವರು ಪೊಲೀಸರಿಗೆ ಕೋರೊನಾ ಪಾಸಿಟಿವ್ ಬಂದಿರುವ ಹಿನ್ನಲೆಯಲ್ಲಿ ಅಜೆಕಾರು, ಕಾರ್ಕಳ ಮತ್ತು ಬ್ರಹ್ಮಾವರ ಪೊಲೀಸ್ ಠಾಣೆಗಳನ್ನು ಸ್ಯಾನಿಟೈಜ್ ಮಾಡುವ ಉದ್ದೇಶದಿಂದ ಕ್ಲೋಸ್ ಡೌನ್ ಮಾಡಲಾಗಿದ್ದು, ಈ ಮೂರು ಠಾಣೆಗಳ ದೈನಂದಿನ ಕಾರ್ಯನಿರ್ವಹಣೆಗೆ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ.
ಅದರಂತೆ ಅಜೆಕಾರಿನ ಠಾಣೆಯು ಪಕ್ಕದ ಅಂಗನವಾಡಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಕಾರ್ಕಳ ಠಾಣೆಯ ಕೆಲಸಕಾರ್ಯವನ್ನು ಪುರಸಭೆ ಕಟ್ಟಡಕ್ಕೆ ಶಿಫ್ಟ್ ಮಾಡಲಾಗಿದೆ ಅಲ್ಲದೆ ಬ್ರಹ್ಮಾವರ ಠಾಣೆಯು ಈಗ ಇರುವ ಠಾಣೆಯ ಹಿಂದಿನ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ. ಆದ್ದರಿಂದ ದೈನಂದಿನ ಕೆಲಸಗಳು ಯಥಾಪ್ರಕಾರ ನಡೆಯಲಿದ್ದು ಜನರಿಗೆ ಅಗತ್ಯ ಪೊಲೀಸ್ ಸೇವೆಗೆ ಬೇಕಾದ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಮೂವರು ಪೊಲೀಸರಿಗೆ ಸೋಂಕು ಕಂಡು ಬಂದಿರುವ ಹಿನ್ನಲೆಯಲ್ಲಿ ಮೂರು ಠಾಣೆಗಳ ಪೊಲೀಸರನ್ನು ಕ್ವಾರಂಟೈನ್ ಮಾಡಬೇಕಾಗಿದ್ದು ಸಾರ್ವಜನಿಕರ ಸೇವೆಗೆ ಜಿಲ್ಲೆಯ ಬೇರೆ ಉಪವಿಭಾಗಗಳ ಪೊಲೀಸರ ಸೇವೆಯನ್ನು ಬಳಸಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸೋಂಕು ದೃಢಗೊಂಡ ಪೊಲೀಸರ ಪ್ರಾಥಮಿಕ ಮತ್ತು ಸೆಕೆಂಡರಿ ಸಂಪರ್ಕ ಟ್ರೇಸ್ ಮಾಡಲಾಗುತ್ತಿದ್ದು ಮೂವರು ಪೊಲೀಸರನ್ನು ಉಡುಪಿಯ ಟಿ ಎಮ್ ಎ ಪೈ ಕೋವಿಡ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.