ಉಡುಪಿ ಜಿಲ್ಲೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದ ಬಿಜೆಪಿ

Spread the love

ಉಡುಪಿ ಜಿಲ್ಲೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದ ಬಿಜೆಪಿ

ಉಡುಪಿ: ಉಡುಪಿ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದೆ. ಉಡುಪಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ಮಧ್ಯೆ ತುರುಸಿನ ಸ್ಪರ್ಧೆ ಬಿಟ್ಟರೆ, ಉಳಿದ ನಾಲ್ಕೂ ಕ್ಷೇತ್ರಗಳಲ್ಲೂ ಫಲಿತಾಂಶ ಬಹುತೇಕ ಒನ್ ಸೈಡೆಡ್ ಆಗಿತ್ತು.ಕುಂದಾಪುರ ಕ್ಷೇತ್ರದಲ್ಲಂತೂ ಬಿಜೆಪಿಯ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಐವತ್ತು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು ದಾಖಲೆ ಬರೆದಿದ್ದಾರೆ.

ಕಳೆದ ಬಾರಿ ಏಕೈಕ ಸ್ಥಾನ ಪಡೆದಿದ್ದ ಬಿಜೆಪಿ ಈ ಬಾರಿ ಪುಟಿದೆದ್ದು ನಿಂತಿದ್ದು ,ಎಲ್ಲ ಐದೂ ಸ್ಥಾನಗಳನ್ನು ಬಾಚಿಕೊಂಡಿದೆ. ಉಡುಪಿ ಜಿಲ್ಲೆ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಎಲ್ಲ ಕ್ಷೇತ್ರವನ್ನು ಗೆದ್ದುಕೊಂಡು ಬೀಗಿರುವ ಕಮಲ ಪಕ್ಷ ಹೊಸ ಇತಿಹಾಸ ನಿರ್ಮಿಸಿದೆ. ಬೆಳಿಗ್ಗೆ ಮತ ಎಣಿಕೆ ಪ್ರಾರಂಭವಾದಾಗ ನಿಧಾನಗತಿಯಲ್ಲಿ ಲೀಡ್ ಪಡೆಯತೊಡಗಿದ ಬಿಜೆಪಿ ಅಭ್ಯರ್ಥಿಗಳು ತಮ್ಮ ಲೀಡನ್ನು ಸಾವಿರಗಳಲ್ಲಿ ಹೆಚ್ಚಿಸುತ್ತಾ ಹೋದರು.ಮುಖ್ಯವಾಗಿ ಮೀನುಗಾರಿಕೆ ಮತ್ತು ಯುವಜನ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್‌ರನ್ನು ಬಿಜೆಪಿಯ ರಘುಪತಿ ಭಟ್ ಸೋಲಿಸುವ ಮೂಲಕ ಮತ್ತೆ ರಾಜಕೀಯವಾಗಿ ಪುನರ್ಜನ್ಮ ಪಡೆದಿದ್ದಾರೆ.

ರಾಜ್ಯದಲ್ಲೇ ಅತಿ ಹೆಚ್ಚು ಅಂತರದಲ್ಲಿ ಗೆಲ್ಲುತ್ತೇನೆ ಅಂತ ಬೀಗುತ್ತಿದ್ದ ಪ್ರಮೋದ್ ಮಧ್ವರಾಜ್ ತೀವ್ರ ಮುಖಭಂಗ ಅನುಭವಿಸುವಂತಾಯಿತು. ಇನ್ನು ಕಳೆದ ಬಾರಿ ಬಿಜೆಪಿಯಿಂದ ಬಂಡಾಯ ಎದ್ದು ಪಕ್ಷೇತರವಾಗಿ ಸ್ಪರ್ಧಿಸಿದ್ದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ,ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ದಾಖಲೆಯ ಅಂತರದಿಂದ ಗೆದ್ದು ಬಂದಿದ್ದಾರೆ.

ಇನ್ನು ಕಾರ್ಕಳ ಕ್ಷೇತ್ರದಲ್ಲಿ ಹಾಲಿ ಶಾಸಕ ಸುನಿಲ್ ಕುಮಾರ್ ಕಾಂಗ್ರೆಸ್‌ನ ಗೋಪಾಲ್ ಭಂಡಾರಿಯವರನ್ನು ಸೋಲಿಸಿ ನಗೆ ಬೀರಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿದ್ದ ಗೋಪಾಲ್ ಭಂಡಾರಿಯವರನ್ನು ಬಿಜೆಪಿಯ ಸುಕುಮಾರ್ ಶೆಟ್ಟಿ ಮಣಿಸಿದ್ದಾರೆ. ಅಚ್ಚರಿ ಎಂಬಂತೆ ಮಾಜಿ ಸಚಿವ ವಿನಯಕುಮಾರ್ ಸೊರಕೆ ಸೋತಿದ್ದಾರೆ.ಇಲ್ಲಿ ಬಿಜೆಪಿ ನಿಷ್ಠ ಲಾಲಾಜಿ ಮೆಂಡನ್ ಸೊರಕೆಯವರನ್ನು ಸೋಲಿಸಿದ್ದಾರೆ.

ಒಟ್ಟಾರೆ ಈ ಮೊದಲು ಜಿಲ್ಲೆಯ ಐದು ಸ್ಥಾನಗಳ ಪೈಕಿ ಬಿಜೆಪಿ ನಾಲ್ಕರಲ್ಲಿ ಗೆಲುವಿನ ಸಾಧನೆ ಮಾಡಿತ್ತು. ಆದ್ರೆ ಈ ಬಾರಿ ಐದಕ್ಕೆ ಐದೂ ಸ್ಥಾನಗಳನ್ನು ಗೆಲ್ಲುವ ಮೂಲಕ ಕಮಲ ಪಕ್ಷ ಹೊಸ ಇತಿಹಾಸ ನಿರ್ಮಾಣ ಮಾಡಿದೆ.


Spread the love