ಉಡುಪಿ ಜಿಲ್ಲೆಯಲ್ಲಿ ಬೇಕರಿ, ಸ್ವೀಟ್ಸ್ ಅಂಗಡಿಗಳು ಕಡ್ಡಾಯವಾಗಿ ಶುಚಿತ್ವ ಪಾಲಿಸಿ – ಡಿಸಿ ಜಗದೀಶ್
ಉಡುಪಿ : ಉಡುಪಿ ಜಿಲ್ಲೆಯಲ್ಲಿರುವ ಬೇಕರಿ, ಸ್ವೀಟ್ಸ್ ಅಂಗಡಿಗಳು ಶುಚಿತ್ವವನ್ನು ಕಡ್ಡಾಯವಾಗಿ ಪಾಲಿಸುವುದರೊಂದಿಗೆ ಬೇಕರಿಯಲ್ಲಿ ಸಾಮಾಜಿಕ ಅಂತರವನ್ನು (Social Distance) ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಕೋವಿಡ್ -2019 (ಕೊರೋನಾ ವೈರಸ್ ಕಾಯಿಲೆ) ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸಿ.ಆರ್.ಪಿ.ಸಿ. ಸೆಕ್ಷನ್ 144(3) ರಂತೆ ನಿರ್ಬಂಧ ವಿಧಿಸಿ ಆದೇಶವನ್ನು ಹೊರಡಿಸಲಾಗಿದ್ದು, ಅದರಂತೆ ಜನರು ಹೊರಗಡೆ ಸಂಚರಿಸುವುದನ್ನು ನಿರ್ಬಂಧಿಸಲಾಗಿದೆ. ಮುಂದುವರಿದಂತೆ ರೋಗಿಗಳಿಗೆ ವಯೋ ವೃದ್ದರಿಗೆ / ಮಕ್ಕಳಿಗೆ /ಸಾರ್ವಜನಿಕರಿಗೆ ಸೇವನೆಗೆ ಅಗತ್ಯವಿರುವ ಬೇಕರಿ ಉತ್ಪನ್ನಗಳು /ಬಿಸ್ಕಟ್ / ಕಾಂಡಿಮೆಂಟ್ಸ್ಗಳನ್ನು ಮಾರಾಟ ಮಾಡುವ ಬೇಕರಿ/ಸ್ವೀಟ್ಸ್ ಅಂಗಡಿಗಳನ್ನು ಹಾಗೂ ಸದರಿ ವಸ್ತುಗಳನ್ನು ಉತ್ಪಾದಿಸುವ ಘಟಕಗಳನ್ನು ತೆರೆಯಲು ಹಾಗೂ ಈ ಉತ್ಪಾದನೆಗಳನ್ನು ಪೂರೈಕ ಮಾಡಲು ಸರ್ಕಾರವು ಕೆಲವೊಂದು ನಿಬಂಧನೆಗಳನ್ನು ಪಾಲಿಸುವಂತೆ ತಿಳಿಸಿ ವಿನಾಯಿತಿಯನ್ನು ನೀಡಿ ಆದೇಶವನ್ನು ಹೊರಡಿಸಿರುತ್ತದೆ.
ಅದರಂತೆ , ಉಡುಪಿ ಜಿಲ್ಲೆಯಲ್ಲಿ ಸದರಿ ಅಂಗಡಿಗಳು ತೆರೆದಿರುತ್ತದೆ. ಆದರೆ ಹೆಚ್ಚಿನ ಬೇಕರಿ / ಸ್ವೀಟ್ ಅಂಗಡಿ ಮಾಲಿಕರು ಸರಕಾರ ವಿಧಿಸಿರುವ ಯಾವುದೇ ಷರತ್ತು ಪಾಲಿಸಿರುವುದು ಕಂಡುಬರುತ್ತಿಲ್ಲ. ಅಂಗಡಿಗಳಲ್ಲಿ ಶುಚಿತ್ವ ಇಲ್ಲದಿರುವುದು, ಜನರು ಸರತಿ ಸಾಲಿನಲ್ಲಿ ನಿಲ್ಲಲು ಯಾವುದೇ ಗುರುತು ಹಾಕಿರುವುದಿಲ್ಲ. ಗ್ರಾಹಕರು ಗುಂಪು ಕೂಡಿ – ಸಾಮಾಗ್ರಿಗಳನ್ನು ಖರೀದಿಸುವುದು, ಅಂಗಡಿಯ ಒಳಗೆ ನಾಲ್ಕೈದು ಮಂದಿ ಮಾರಾಟಗಾರರು ಯಾವುದೇ ಗ್ಲೌಸ್ (Glouse) ಧರಿಸದೇ ಯಾವುದೇ ಮುಂಜಾಗೃತಾ ಕ್ರಮ ವಹಿಸದಿರುವುದು ಕಂಡುಬಂದಿರುತ್ತದೆ. ಇದು ಸರ್ಕಾರದ ಅನುಮತಿಯ ಸಂಪೂರ್ಣ ಉಲ್ಲಂಘನೆಯಾಗಿರುತ್ತದೆ, ಅಲ್ಲದೆ, ಪ್ರಜ್ಞಾವಂತ ನಾಗರೀಕರು ತಲೆತಗ್ಗಿಸುವಂತೆ ಮಾಡಿದಂತಾಗಿದೆ.
ಈ ಹಿನ್ನಲೆಯಲ್ಲಿ , ಉಡುಪಿ ಜಿಲ್ಲೆಯಲ್ಲಿರುವ ಬೇಕರಿ, ಸ್ವೀಟ್ಸ್ ಅಂಗಡಿಗಳು ಬೆಳಿಗ್ಗೆ 7:00 ರಿಂದ 11:00ರವರೆಗೆ.ಕಾರ್ಯಾಚರಿಸತಕ್ಕದ್ದು. ಬೇಕರಿಯಲ್ಲಿ ಸಾಮಾಜಿಕ ಅಂತರವನ್ನು (Social Distance) ಕಡ್ಡಾಯವಾಗಿ ಪಾಲಿಸತಕ್ಕದ್ದು, ಅಲ್ಲದೆ, ಈ ಕಳಗಿನ ಷರತ್ತುಗಳನ್ನು ಪಾಲಿಸತಕ್ಕದ್ದು.•
ಬೇಕರಿಗಳಲ್ಲಿ/ ಉತ್ಪಾದನಾ ಘಟಕಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಆರೋಗ್ಯವು ಉತ್ತಮ ಸ್ಥಿತಿಯಲ್ಲಿರಬೇಕಾಗಿರುತ್ತದೆ. ಯಾವುದೇ ರೋಗ ರುಜಿನ ಇರಬಾರದು. ವೈಯಕ್ತಿಕ ಶುಚಿತ್ವದೊಂದಿಗೆ ದೇಹದ ಬೆವರು ಮುಂತಾದ ಮಾನವ ತ್ಯಾಜ್ಯಗಳು ಆಹಾರ ಪದಾರ್ಥದಲ್ಲಿ ಬೆರಸದಂತೆ ಎಚ್ಚರಿಕೆ ವಹಿಸತಕ್ಕದ್ದು.
ಸ್ವೀಟ್ಸ್ ಅಂಗಡಿ ಬೇಕರಿಗಳ ಮಳಿಗೆಯಲ್ಲಿ ಶುಚಿತ್ವವನ್ನು ಕಾಪಾಡಬೇಕಾಗಿರುತ್ತದೆ. ಬೇಕರಿ ವಠಾರವು ಶುಚಿಯಾಗಿರಬೇಕು. ಸ್ವೀಟ್ಸ್ ಅಂಗಡಿ/ ಬೇಕರಿಗಳಲ್ಲಿ ಗ್ರಾಹಕರ ನಡುವ ಸಾಮಾಜಿಕ ಅಂತರವನ್ನು ಕಾಪಾಡಲು 5 ಅಡಿಗಳ ಅಂತರದಲ್ಲಿ ಗುರುತುಗಳನ್ನು (Mark) ಹಾಕತಕ್ಕದ್ದು. ಸದ್ರಿ ಗುರುತುಗಳ (Mark) ಸರತಿ ಸಾಲಿನಲ್ಲಿ ಗ್ರಾಹಕರು ನಿಂತು ಖರೀದಿಸತಕ್ಕದ್ದು.
ಗ್ರಾಹಕರಿಗೆ ಯಾವುದೇ ರೀತಿಯಲ್ಲಿ ಕುಳಿತುಕೊಂಡು ತಿನ್ನಲು ಅವಕಾಶವಿಲ್ಲ. ಗ್ರಾಹಕರಿಗೆ ಪಾರ್ಸಲ್ (Parcel ಕೊಂಡೊಯ್ಯಲು ಮಾತ್ರ ಅನುಮತಿ ನೀಡಲಾಗಿದೆ. Sanitizer ನೊಂದಿಗೆ ಅಂಗಡಿ ಮಾಲೀಕರು/ ಕಾರ್ಮಿಕರು ಕಡ್ಡಾಯವಾಗಿ ಮಾಸ್ಕ್ ಧರಿಸತಕ್ಕದ್ದು, ಈ ಪೈಕಿ ಯಾವುದೇ ಷರತ್ತು ಉಲ್ಲಂಘಿಸಿದ್ದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದರೊಂದಿಗೆ ಸದ್ರಿ ಘಟಕಗಳ ಲೈಸನ್ಸ್ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.