ಉಡುಪಿ ಜಿಲ್ಲೆಯಲ್ಲಿ ‘ಲಾಕ್ ಡೌನ್’ ಬದಲು 14 ದಿನ ಎಲ್ಲಾ ಗಡಿಗಳು ‘ಸೀಲ್ ಡೌನ್’
ಉಡುಪಿ: ಕೋವಿಡ್-19 ಹೆಚ್ಚಳ ಹಿನ್ನಲೆಯಲ್ಲಿ ಮುಂದಿನ14 ದಿನಗಳ ವರೆಗೆ ಉಡುಪಿ ಜಿಲ್ಲೆಯ ಎಲ್ಲಾ ಗಡಿಗಳನ್ನು ಸೀಲ್ ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಗಳ ಸಭೆ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗಿದ್ದು ಈ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಉಡುಪಿ ಜಿಲ್ಲಾ ಗಡಿಭಾಗದಿಂದ ಹೊರಗೆ ಹೋಗುವವರಿಗೆ ಮತ್ತು ಒಳಗೆ ಬರುವವರಿಗೆ ಬುಧವಾರ ರಾತ್ರಿ 8:00 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರದ ಹಿಂದಿನ ಆದೇಶದಂತೆ ಭಾನುವಾರ ಸಂಪೂರ್ಣ ಲಾಕ್ಡೌನ್ ಯಥಾಸ್ಥಿತಿ ಮುಂದುವರೆಯುತ್ತದೆ ಎಂದು ಮಾಹಿತಿ ತಿಳಿಸಿದೆ
ಈ ಸಂದರ್ಭದಲ್ಲಿ ಕಾರ್ಕಳ ಶಾಸಕರಾದ ಸುನೀಲ್ ಕುಮಾರ್, ಬೈಂದೂರು ಶಾಸಕರಾದ ಸುಕುಮಾರ್ ಶೆಟ್ಟಿ, ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್, ಕುಂದಾಪುರ ಶಾಸಕರಾದ ಶ್ರೀನಿವಾಸ್ ಶೆಟ್ಟಿ ಮತ್ತು ಜಿಲ್ಲಾಧಿಕಾರಿಗಳ ಜಿ ಜಗದೀಶ್, ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರೀತಿ ಗೆಲ್ಹೋತ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಎನ್. ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ ಪ್ರಭು, ಸಹಾಯಕ ಆಯುಕ್ತರಾದ ಕೆ. ರಾಜು, ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಸುಧೀರ್ ಚಂದ್ರ ಸೂಡ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿಗಳಾದ ಪ್ರಶಾಂತ್ ಭಟ್, ಜಿಲ್ಲಾ ಸರ್ಜನ್ ಮಧುಸೂದನ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಗಳು ಸಭೆಯ ನಿರ್ಧಾರದ ಬಗ್ಗೆ ಇನ್ನಷ್ಟೇ ಅಧಿಕೃತ ಆದೇಶವನ್ನು ಹೊರಡಿಸಬೇಕಾಗಿದೆ.
Very good