ಉಡುಪಿ ಜಿಲ್ಲೆಯಾದ್ಯಂತ ಸರಕಾರದ ಹೆಸರು ದುರುಪಯೋಗಪಡಿಸಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳನ್ನು ನಡೆಸಲು ಆಸ್ಪದ ನೀಡುವುದಿಲ್ಲ- ಕೃಷ್ಣ ಶೆಟ್ಟಿ ಬಜಗೋಳಿ
ಉಡುಪಿ: ಶಾಸಕರ ಹೆಸರನ್ನು ಬಳಿಸಿಕೊಂಡು ಅಥವಾ ಕಾಂಗ್ರೆಸ್ ಸರಕಾರದ ಹೆಸರು ದುರುಪಯೋಗ ಪಡಿಸಿಕೊಂಡು ಉಡುಪಿ ಜಿಲ್ಲೆಯಾದ್ಯಂತ ಅಕ್ರಮ ಚಟುವಟಿಕೆಗಳು ,ಅಕ್ರಮ ಗಣಿಗಾರಿಕೆ , ಅಕ್ರಮ ಮರಳು ದಂಧೆ ಮಾಡುವವರ ವಿರುದ್ಧ ಸಂಬಂದಪಟ್ಟ ಇಲಾಖೆಯವರು ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕು. ಸೂಕ್ತ ಪರವಾನಗಿ ಇಲ್ಲದೇ ಸರ್ಕಾರದ ರಾಯಧನಕ್ಕೆ ಧಕ್ಕೆ ಉಂಟು ಮಾಡುವಂತಹ ಅಕ್ರಮ ದಂಧೆಗಳಲ್ಲಿ ಭಾಗಿಯಾಗುತ್ತಿದ್ದಲ್ಲಿ ಅಂತವರ ವಿರುದ್ದ ಸಂಬಂಧ ಪಟ್ಟ ಇಲಾಖೆಗಳು ಯಾವುದೇ ಮುಲಾಜಿಲ್ಲದೇ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ನೂತನ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಬಜಗೋಳಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಯುವ ಕಾಂಗ್ರೆಸ್ ಸಮಿತಿಯು ಉಡುಪಿ ಜಿಲ್ಲೆಯಾದ್ಯಂತ ಯುವ ಸಮುದಾಯವನ್ನು ಸಂಘಟಿಸಿ ಒಗ್ಗಟ್ಟಿನಿಂದ ಸಾಮಾಜಿಕ ಕಳಕಳಿಯುಳ್ಳ ಸಮಾಜಮುಖಿ ಕಾರ್ಯಗಳು, ಧಾರ್ಮಿಕ ಕಾರ್ಯಕ್ರಮಗಳು, ಯುವ ಸಮುದಾಯಕ್ಕೆ ಉದ್ಯೊಗ ಸೃಷ್ಟಿಯ ಕುರಿತು ಚಿಂತನೆ, ಸಮಾಜದ ಕಟ್ಟಕಡೆಯ ಹಾಗೂ ಶೋಷಿತರ ದ್ವನಿಯಾಗುತ್ತದೆಯೇ ವಿನಹ ಅಕ್ರಮ ದಂಧೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ.
ಮುಂಬರುವ ದಿನಗಳಲ್ಲಿ ಜಿಲ್ಲೆಯಾದ್ಯಂತ ಯುವ ಕಾಂಗ್ರೆಸ್ ಸಮಿತಿಯು ಅಕ್ರಮ ಚಟುವಟಿಕೆಗಳನ್ನು ಹದ್ದುಬಸ್ತಿಗೆ ತರಲು ಶ್ರಮಿಸುತ್ತದೆ. ಯಾವುದೇ ಕಾರಣಕ್ಕೂ ಯಾರಿಂದನೂ ಕಾಂಗ್ರೆಸ್ ಸರಕಾರಕ್ಕೆ ಕೆಟ್ಟ ಹೆಸರು ತರಲು ಅವಕಾಶ ನೀಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕೃಷ್ಣ ಶೆಟ್ಟಿ ಬಜಗೋಳಿಯವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.