ಉಡುಪಿ ಜಿಲ್ಲೆಯ ಕಡಲ್ಕೊರೆತ ಪ್ರದೇಶಗಳಿಗೆ ಕಂದಾಯ ಸಚಿವ ಅಶೋಕ್ ಭೇಟಿ

Spread the love

ಉಡುಪಿ ಜಿಲ್ಲೆಯ ಕಡಲ್ಕೊರೆತ ಪ್ರದೇಶಗಳಿಗೆ ಕಂದಾಯ ಸಚಿವ ಅಶೋಕ್ ಭೇಟಿ

ಉಡುಪಿ:  ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅರಬ್ಬಿ ಸಮುದ್ರ ಪ್ರಕ್ಷ್ಯುಬ್ಧವಾಗಿದ್ದು ಭಾರಿ ಪ್ರಮಾಣದ ಕಡಲ್ಕೊರೆತ ಸಂಭವಿಸಿದ ಪ್ರದೇಶಗಳಿಗೆ ಶುಕ್ರವಾರದಂದು ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕೊಡಗು ಹೊರತುಪಡಿಸಿದರೆ ಉಳಿದ ಜಿಲ್ಲೆಗಳಲ್ಲಿ ಸಾಮಾನ್ಯ ಸ್ಥಿತಿ ಇದ್ದು ರಾಜ್ಯದಲ್ಲಿ ಮಳೆ ಮತ್ತು ನೆರೆಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕೊಡಗಿನಲ್ಲಿ ಅರ್ಚಕರು ಮನೆ ಖಾಲಿ ಮಾಡದ ಕಾರಣ  ಸಮಸ್ಯೆಯಾಗಿದ್ದು, ಕೊಡಗಿಗೂ ನಾನು ಬೇಟಿ ಮಾಡುತ್ತೇನೆ.

ಸದ್ಯ ತಾನು ಉಡುಪಿ-ಮಂಗಳೂರು ಕಾರವಾರ ಪ್ರವಾಸದಲ್ಲಿದ್ದು, ಅಧಿಕಾರಿಗಳನ್ನು ಅಲರ್ಟ್ ಮಾಡುವ ಉದ್ದೇಶದಿಂದ ಈ ಪ್ರವಾಸ ಕೈಗೊಂಡಿದ್ದೇನೆ. ಈ ಪರಿಸ್ಥಿತಿಯಲ್ಲಿ  ಯಾವುದೇ ಅಧಿಕಾರಿಗಳು ರಜೆ ತೆಗೆದುಕೊಳ್ಳದೆ ಕೆಲಸ ಮಾಡಬೇಕು. ಮಳೆ ಪ್ರವಾಹದ ಸಮಯದಲ್ಲಿ ಕಂದಾಯ, ಪೊಲೀಸ್ ಇಲಾಖೆಯ ಜವಾಬ್ದಾರಿ ತುಂಬಾ ಹೆಚ್ಚಿದ್ದು, ಕಳೆದ ಬಾರಿ ಯಾದಂತೆ ಯಾವುದೇ ಅನಾಹುತ ಆಗಬಾರದು. ಕಳೆದ ಬಾರಿ ನಮ್ಮ ಸರ್ಕಾರ ಆಗಸ್ಟೇ ಅಧಿಕಾರಕ್ಕೆ ಬಂದಿತ್ತು ಆ ಸಮಯದಲ್ಲಿ  ಹಿಂದಿನ ಸರಕಾರ ಯಾವುದೇ ತಯಾರಿ ಮಾಡಿರಲಿಲ್ಲ ಆದರೆ ಈ ಬಾರಿ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದೇವೆ.

ಕಳೆದ ಒಂದು ತಿಂಗಳಿನಿಂ ದ ಸನ್ನದ್ದ ಸ್ಥಿತಿಯಲ್ಲಿದ್ದು, ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಜಿಲ್ಲಾಡಳಿತ ಕೇಳಿದಷ್ಟು ಹಣವನ್ನು ನೀಡಿದ್ದೇವೆ, ಬೋಟು, ಕಟ್ಟಿಂಗ್ ಮಿಷನ್ ಲೈಟ್ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಅಗ್ನಿಶಾಮಕದಳಕ್ಕೆ ಪ್ರತ್ಯೇಕವಾಗಿ 20 ಕೋಟಿ ಬಿಡುಗಡೆ ಮಾಡಲಾಗಿದೆ. ಪೊಲೀಸು ಅಗ್ನಿಶಾಮಕದಳ ಕಂದಾಯ ಇಲಾಖೆ ಜಂಟಿಯಾಗಿ ಕೆಲಸ ಮಾಡುತ್ತೇವೆ. ಕಳೆದ ಬಾರಿಯ ರೀತಿಯಲ್ಲಿ ಯಾವುದೇ ಅನಾಹುತ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಉಡುಪಿಯ ಪಡುಬಿದ್ರಿ ಬೀಚ್ ನಲ್ಲಿ ಭಾರಿ ಪ್ರಮಾಣದ ‌ಕಡಲು‌ಕೊರೆತ ಆಗಿದ್ದು, ಕಡಲ್ಕೊರೆತಕ್ಕೆ  ಪ್ರವಾಸೋದ್ಯಮದ ಕೇಂದ್ರ ಕೊಚ್ಚಿಹೋಗಿದೆ. ಈ ಭಾಗದಲ್ಲಿ ಸಾಕಷ್ಟು ಮನೆಗಳು ಕೂಡ ಇದ್ದು, ಶಾಶ್ವತ ತಡೆಗೋಡೆ ನಿರ್ಮಿಸಲು ಅಂದಾಜು ಕಾರ್ಯಯೋಜನೆ  ಮಾಡಲು ಹೇಳಿದ್ದೇನೆ. ಅಂದಾಜು ಪಟ್ಟಿ ಕೊಟ್ಟ ಕೂಡಲೇ  ಹಣ ರಿಲೀಸ್ ಮಾಡ್ತೀವಿ. ಕೇಂದ್ರ ಸರ್ಕಾರದ ಎನ್.ಡಿ.ಆರ್.ಎಫ್ ಹಣ 300 ಕೋಟಿ ರೂಪಾಯಿ ಇದ್ದು, ಪಡುಬಿದ್ರಿಯ ಪ್ರವಾಸೋದ್ಯಮ ಕೇಂದ್ರವನ್ನು ತೆರವು ಮಾಡಿ ತಡೆಗೋಡೆ ಕಟ್ಟಲಾಗುವುದು. ಉಡುಪಿ ಜಿಲ್ಲೆಯ ಮಳೆ ಪರಿಹಾರ ನಿಧಿಗೆ ಐದು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದ್ದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಈಗಾಗಲೇ ಮೂರುವರೆ ಕೋಟಿ  ಹಣ  ಇದೆ ಎಂದರು.

ಈ ವೇಳೆ ದಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶಱ ಡಿವೈಎಸ್ಪಿ ಜೈಶಂಕರ್, ಸಿಪಿಐ ಮಹೇಶ್ ಪ್ರಸಾದ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love