ಉಡುಪಿ: ಯಾರು ಸನ್ಮಾನಕ್ಕೆ ಅರ್ಹರೋ ಅವರಿಗೆ ಸನ್ಮಾನ ಮಾಡಬೇಕು. ಆದ್ದರಿಂದಲೇ ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನ ಮಾಡಲಾಗಿದೆ ಎಂದು ಪರ್ಯಾಯ ಶ್ರೀ ಕಾಣಿಯೂರು ಮಠ ಶ್ರೀಕೃಷ್ಣ ಮಠ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.
ನರಸಿಂಹ ಜಯಂತಿಯ ಅಂಗವಾಗಿ ಶನಿವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ `ನೃಸಿಂಹಾನುಗ್ರಹ’ ಹಾಗೂ `ಶ್ರೀ ವಿದ್ಯಾಸಮುದ್ರ ಪ್ರಶಸ್ತಿ’ ನೀಡಿ ಅವರು ಮಾತನಾಡಿದರು.
ದೇಶದ ಋಷಿ ಪರಂಪರೆಯಿಂದ ಬಂದ ಕಾರಣ ದೇಶದಲ್ಲಿ ಬುದ್ದಿವಂತಿಕೆ ಹೆಚ್ಚಿದೆ. ಹಣಕ್ಕಿಂತ ನಾವು ಬುದ್ದಿವಂತಿಕೆಯಲ್ಲಿ ಮುಂದಿದ್ದೇವೆ. ಆದ್ದರಿಂದಲೇ ಮಂಗಳಯಾನವನ್ನು ನಾವು ಅತ್ಯಂತ ಕಡಿಮೆ ವೆಚ್ಚದಲ್ಲಿ ಯಶಸ್ವಿಯಾಗಿ ಮಾಡಿದ್ದೇವೆ ಎಂದರು.
ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಬಾಹ್ಯಾಕಾಶ ವಿಜ್ಞಾನಿ ಡಾ. ಕೆ. ರಾಧಾಕೃಷ್ಣನ್, ಹಾಗೂ ಚೆನ್ನೈನ ಉದ್ಯಮಿ ಕೆ. ರಾಮ್ಪ್ರಸಾದ್ ಭಟ್ ಅವರಿಗೆ `ಶ್ರೀ ನೃಸಿಂಹಾನುಗ್ರಹ ಪ್ರಶಸ್ತಿ’ ಹಾಗೂ ಪಾಜಕ ಕ್ಷೇತ್ರದ ಅರ್ಚಕ ಮಾಧವ ಉಪಾಧ್ಯಾಯ ಅವರಿಗೆ ` ಶ್ರೀ ವಿದ್ಯಾಸಮುದ್ರ ಪ್ರಶಸ್ತಿ’ಯನ್ನು ಪರ್ಯಾಯ ಸ್ವಾಮೀಜಿ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ವಿಜಯ ಸಂಕೇಶ್ವರ, ಅಷ್ಠ ಮಠಗಳ ಯತಿಗಳ ಆಶೀರ್ವಾದ ತನ್ನ ಹಾಗೂ ತನ್ನ ಸಂಸ್ಥೆಯ ಮೇಲಿದೆ. ಯಶಸ್ಸಿನ ಮೆಟ್ಟಿಲೇರಲು ಭಗವಂತ ಹಾಗೂ ಶ್ರೀಗಳ ಆಶೀರ್ವಾದವೇ ಕಾರಣ. ಪ್ರಶಸ್ತಿ ಜವಾಬ್ದಾರಿಯನ್ನು ಇಮ್ಮಡಿಗೊಳಿಸಿದೆ. ಉದ್ಯಮ ಹಾಗೂ ಸಮಾಜ ಸೇವೆಯಲ್ಲಿ ಇನ್ನೂ ಹೆಚ್ಚು ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದೆ ಎಂದರು.
ಬಾಹ್ಯಾಕಾಶ ವಿಜ್ಞಾನಿ ಡಾ. ಕೆ. ರಾಧಾಕೃಷ್ಣನ್ ಮಾತನಾಡಿ, ಪ್ರಶಸ್ತಿ ತನಗೂ ಹಾಗೂ ತಮ್ಮ ಇಸ್ರೋ ಕುಟುಂಬಸ್ಥರಿಗೆ ಸಂದಿದೆ. ದೇಶ ತಾಂತ್ರಿಕವಾಗಿ ಮುಂದುವರಿದಿದ್ದು, ಸಂಸ್ಥೆ ತನ್ನ ಪ್ರಯತ್ನದ ಮೂಲಕ ಸಾಧನೆ ಮಾಡುತ್ತಿದೆ. ಹಿನ್ನಡೆಯಿಂದ ಕಲಿಯುತ್ತೇವೆ, ಮುನ್ನಡೆಯಿಂದ ಹೆಮ್ಮೆ ಪಟ್ಟುಕೊಳ್ಳುತ್ತೇವೆ ಎಂದು ಹೇಳಿದರು.
ಪಾಜಕ ಕ್ಷೇತ್ರದ ಅರ್ಚಕ ಮಾಧವ ಉಪಾಧ್ಯಾಯ, ಮಠದ ದಿವಾನರಾದ ರಘುಪತಿ ಆಚಾರ್ಯ ಉಪಸ್ಥಿತರಿದ್ದರು.
ವಿದ್ವಾನ್ ಮಧ್ವೇಶ ಆಚಾರ್ಯ ಸ್ವಾಗತಿಸಿ, ವೇಣುಗೋಪಾಲ ರಾವ್ ಕಾರ್ಯಕ್ರಮ ನಿರೂಪಿಸಿದರು.