ಉಡುಪಿ: ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಯ ಪ್ರಯುಕ್ತ ಗ್ರಾಮ ಮಟ್ಟದಲ್ಲಿ ಕಾರ್ಯಕರ್ತರ ಸಭೆಯನ್ನು ಕರೆದು ಆಕಾಂಕ್ಷಿಗಳನ್ನು ಗುರುತಿಸುವ ಕೆಲಸ ಶೀಘ್ರದಲ್ಲೇ ನಡೆಯಬೇಕು. ಈಗಾಗಲೇ ವೀಕ್ಷಕರನ್ನು ನೇಮಿಸಲಾಗಿದ್ದು, ಒಮ್ಮತದ ಅಭ್ಯರ್ಥಿಯನ್ನು ಗುರುತಿಸುವಲ್ಲಿ ಕಾರ್ಯೋನ್ಮುಖರಾಗಬೇಕೆಂದು ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣಾ ವೀಕ್ಷಕರ ಮತ್ತು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಶಾಸಕರಾದ ಪ್ರಮೋದ್ ಮಧ್ವರಾಜ್ ರವರು ಕರೆ ನೀಡಿದರು.
ಈಗಾಗಲೇ ಬಿಹಾರ್‍ನ ವಿಧಾನಸಭೆ, ಮಧ್ಯಪ್ರದೇಶ, ಗುಜರಾತ್, ವಾರಣಾಸಿ, ಛತ್ತೀಸ್‍ಘಡ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದ್ದು, ಮೋದಿ ಹವಾ ಮರೆಯಾಗುತ್ತಿರುವುದಕ್ಕೆ ಸಾಕ್ಷಿ. ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ 1,380 ಕೋಟಿ ರೂಪಾಯಿ ಅನುದಾನವನ್ನು ಕ್ಷೇತ್ರಕ್ಕೆ ವಿನಿಯೋಗಿಸಿದ್ದು, ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿ ಕಾಣುತ್ತಿದ್ದು, ಈ ಹಿನ್ನೆಲೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದರಲ್ಲಿ ಸಂಶಯವಿಲ್ಲ ಎಂದು ಶಾಸಕರು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕೆರೆ, ಜಿಲ್ಲಾ ಪಂಚಾಯತ್ ಸದಸ್ಯರಾದ ದಿವಾಕರ ಕುಂದರ್, ಮಾಜಿ ನಗರಸಭಾ ಉಪಾಧ್ಯಕ್ಷರಾದ ಕುಶಲ್ ಶೆಟ್ಟಿ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿಯ ಮಾನದಂಡ ಹಾಗೂ ಒಮ್ಮತದ ಆಯ್ಕೆಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಯುವರಾಜ್, ಅಮೃತಾ ಕೃಷ್ಣಮೂರ್ತಿ, ಕೇಶವ ಕೋಟ್ಯಾನ್, ಮುರಳಿ ಶೆಟ್ಟಿ, ಬಿ. ನರಸಿಂಹಮೂರ್ತಿ, ದಿನೇಶ್ ಪುತ್ರನ್, ಪ್ರಕಾಶ್ ಕೊಡವೂರು, ಮನೋಜ್ ಕರ್ಕೇರಾ, ಸುಜಯ ಪೂಜಾರಿ, ಪ್ರಶಾಂತ್ ಪೂಜಾರಿ, ಮೀನಾಕ್ಷಿ ಮಾಧವ ಬನ್ನಂಜೆ, ಪ್ರಖ್ಯಾತ್ ಶೆಟ್ಟಿ, ಕೀರ್ತಿ ಶೆಟ್ಟಿ, ಸೆಲಿನ್ ಕರ್ಕಡ, ಯತೀಶ್ ಕರ್ಕೇರಾ ಪೃಥ್ವಿರಾಜ್ ಶೆಟ್ಟಿ, ಶೋಭಾ ಪೂಜಾರಿ, ಶಶಿರಾಜ್ ಕುಂದರ್, ರಾಹುಲ್ ಡಿ. ಶೆಟ್ಟಿ, ರಮೇಶ್ ಕಾಂಚನ್, ಗಣೇಶ್ ನೆರ್ಗಿ, ನಾರಾಯಣ ಕುಂದರ್, ಶಾಂತರಾಮ ಸಾಲ್ವಾಂಕರ್, ಬಿ.ಪಿ. ರಮೇಶ್ ಪೂಜಾರಿ, ಸುರೇಶ್ ಶೆಟ್ಟಿ ಬನ್ನಂಜೆ, ಜಯಾನಂದ, ಸುನಿಲ್ ಕಪ್ಪೆಟ್ಟು, ಲಕ್ಷಣ, ಜಾನ್ ಮಣಿಪಾಲ್ ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಜನಾರ್ದನ ಭಂಡಾರ್ಕರ್ ಕಾರ್ಯಕ್ರಮ ನಿರೂಪಿಸಿ, ವಕ್ತಾರ ಭಾಸ್ಕರ್ ರಾವ್ ಕಿದಿಯೂರು ವಂದಿಸಿದರು.