ಉಡುಪಿ: ಧರ್ಮಪ್ರಾಂತ್ಯದ ಮೂರು ಪ್ರಮುಖ ಯೋಜನೆಗಳಿಗೆ ಶಿಲನ್ಯಾಸ

Spread the love

ಉಡುಪಿ: ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಮೂರನೇ ವರ್ಷಾಚರಣೆ ಹಾಗೂ ಧರ್ಮಾಧ್ಯಕ್ಷರ ಪೀಠಾರೋಹಣದ ಯಶಸ್ವಿ ಮೂರು ವರುಷಗಳ ಸಂದರ್ಭದಲ್ಲಿ ಧರ್ಮಪ್ರಾಂತ್ಯದ ಅಗತ್ಯ ಮೂರು ಯೋಜನೆಗಳಾದ ಪಾಲನಾ ಕೇಂದ್ರ, ನಿವೃತ್ತ ಯಾಜಕರ ನಿವಾಸ ಮತ್ತು ಗುರು ತರಬೇತಿ ಮಠದ ಶಂಕುಸ್ಥಾಪನೆಯ ಕಾರ್ಯಕ್ರಮ ಗುರುವಾರ ಧರ್ಮಪ್ರಾಂತ್ಯದ ಸ್ಥಳವಾದ ಕಿನ್ನಿಮೂಲ್ಕಿಯಲ್ಲಿ ಜರುಗಿತು.

ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಪಾಲನಾ ಕೇಂದ್ರ, ನಿವೃತ್ತ ಯಾಜಕರ ನಿವಾಸ ಮತ್ತು ಗುರು ತರಬೇತಿ ಮಠದ ಅಡಿಗಲ್ಲುಗಳನ್ನು ಆಶೀರ್ವಚಿಸಿದರು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ನಿವೃತ್ತ ಯಾಜಕರ ನಿವಾಸ, ಧರ್ಮಾಧ್ಯಕ್ಷರು ಪಾಲನಾ ಕೇಂದ್ರ, ಹಾಗೂ ಧರ್ಮಪ್ರಾಂತ್ಯದ ಪಾಲನಾ ಸಮಿತಿಯ ಕಾರ್ಯದರ್ಶಿ ಆಲ್ಫೋನ್ಸ್ ಡಿ’ಕೊಸ್ತಾ ಗುರು ತರಬೇತಿ ಮಠಕ್ಕೆ ಸಾಂಕೇತಿಕವಾಗಿ ಶಂಕುಸ್ಥಾಪನೆ ನೆರವೇರಿಸಿದರು.

DSC_0377 DSC_0380 DSC_0383 DSC_0391 DSC_0370 DSC_0393 DSC_0401

ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ಸಮಾಜದಲ್ಲಿ ವಿದ್ಯೆ, ಆರೋಗ್ಯ, ಕ್ಷೇತ್ರಗಳ ಮೂಲಕ ಬೆಳಕು ಚೆಲ್ಲುವ ಕೆಲಸವನ್ನು ಧರ್ಮಪ್ರಾಂತ್ಯ ಮಾಡುತ್ತಿದ್ದು, ನಿವೃತ್ತ ಯಾಜಕರು ತಮ್ಮ ಜೀವನವನ್ನು ಸಮಾಜಕ್ಕಾಗಿ ಮುಡಿಪಾಗಿಟ್ಟುಕೊಂಡು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಾರೆ ಇವರ ಸೇವೆ ನಿಜಕ್ಕೂ ಅಭಿನಂದನಾರ್ಹ. ಉಡುಪಿ ಧರ್ಮಪ್ರಾಂತ್ಯವಾದ ಬಳಿಕ ಧರ್ಮಪ್ರಾಂತ್ಯದ ಎಲ್ಲಾ ಜನರ ಏಳಿಗೆಗಾಗಿ ಹಲವಾರು ಪ್ರಗತಿಪರ ಹೆಜ್ಜೆಗಳನ್ನು ಧರ್ಮಾಧ್ಯಕ್ಷರು ಹಾಕಿದ್ದು ತಮ್ಮ ಸಹಕಾರವನ್ನು ನೀಡಲು ಸದಾ ಸಿದ್ದನಿರುವುದಾಗಿ ಹೇಳಿದರು. ಸರಕಾದ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಇಲಾಖೆಯಿಂದ ಕ್ರಿಶ್ಚಿಯನ್ ಸಮುದಾಯದ ಚರ್ಚುಗಳ ಜೀರ್ಣೋದ್ಧಾರಕ್ಕೆ, ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನ ನೀಡುವ ವ್ಯವಸ್ಥೆಯಿದ್ದು, ಧರ್ಮಪ್ರಾಂತ್ಯದ ವತಿಯಿಂದ ಇದಕ್ಕೆ ಸಂಬಂಧಪಟ್ಟ ವಿಸ್ತøತ ವರದಿ ತಯಾರಿಸಿ ನೀಡಿದರೆ ಮುಖ್ಯಮಂತ್ರಿಗಳ ಬಳಿ ನಿಯೋಗ ಕೊಂಡೊಯ್ದು ಗರಿಷ್ಠ ಅನುದಾನ ಒದಗಿಸಲು ಜಿಲ್ಲಾ ಉಸ್ತುವಾರಿ ಸಚಿವನಾಗಿ ಪ್ರಯತ್ನ ಮಾಡುತ್ತೇನೆ ಎಂದರು.

ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ, ಮನುಷ್ಯನಿಗೆ ಹೇಗೆ ಮೂಲಭೂತ ಸೌಕರ್ಯಗಳ ಅವಶ್ಯಕತೆಯಿದ್ದು, ಅಂತೆಯೇ ಒಂದು ಧರ್ಮಪ್ರಾಂತ್ಯದ ಏಳಿಗೆಯಾಗಬೇಕಾದಲ್ಲಿ ಅದಕ್ಕೆ ಕೂಡ ಅದರ ಮೂಲಭೂತ ಸೌಕರ್ಯಗಳ ಪೋರೈಕೆ ಆಗಬೇಕಾಗಿದೆ ಅವುಗಳು ಇಲ್ಲದೆ ಹೋದಲ್ಲಿ ಒಂದು ಧರ್ಮಪ್ರಾಂತ್ಯ ಅಭಿವೃದ್ಧಿ ಹೊಂದಲು ಅಸಾಧ್ಯವಾಗಿದೆ. ಧರ್ಮಪ್ರಾಂತ್ಯದ ಉಗಮವಾಗಿ ಮೂರು ವರ್ಷಗಳು ಸಂದರೂ ಯಾವುದೇ ಕಟ್ಟಡ ನಿರ್ಮಾಣಕ್ಕೆ ತಾನು ಇದು ವರೆಗೆ ಮನಸ್ಸು ಮಾಡಿರಲಿಲ್ಲ ಬದಲಾಗಿ ಮೊದಲು ಮನಸ್ಸುಗಳನ್ನು, ಜನರನ್ನು ಒಗ್ಗಟ್ಟಿನಿಂದ ಇರುವಂತೆ ತನ್ನಪ್ರಥಮ ಪ್ರಯತ್ನವನ್ನು ಮಾಡಿದ್ದೇನೆ. ಶ್ರೀಸಾಮನ್ಯ ಜನರ ಒತ್ತಾಸೆಗೆ ಕಟ್ಟುಬಿದ್ದು ಯೋಜನೆಗಳನ್ನು ಆರಂಭಿಸಲು ಚಿಂತಿಸಿಲಾಗಿದ್ದು, ಧರ್ಮಪ್ರಾಂತ್ಯದ ಜನರ ಸಹಕಾರ ಉತ್ತಮ ಸಹಕಾರ ನೀಡಿದ್ದಾರೆ ಮುಂದೆಯೂ ನೀಡಲಿದ್ದಾರೆ ಎಂದರು. ಅಲ್ಲದೆ ಯೋಜನೆಗಳನ್ನು ಹಂತ ಹಂತವಾಗಿ ಜನರ ಆರ್ಥಿಕ ಸಹಕಾರದ ಮೇಲೆ ಹೊಂದಿಕೊಂಡು ಪೂರ್ಣಗೊಳಿಸಲಾಗುವುದು ಎಂದರು.

ಕಾರ್ಯಕ್ರಮಕ್ಕೆ ಮುನ್ನ ದಿವ್ಯಜ್ಯೋತಿ ಇದರ ನಿರ್ದೇಶಕ ವಂ ಸ್ಟೀಫನ್ ಡಿ’ಸೋಜಾ ಇವರ ನೇತೃತ್ವದಲ್ಲಿ ಪ್ರಾರ್ಥನಾ ವಿಧಿ ಜರುಗಿತು. ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಬ್ಯಾಪ್ಟಿಸ್ಟ್ ಮಿನೇಜಸ್ ಸ್ವಾಗತಿಸಿ, ಆಲ್ಫೋನ್ಸ್ ಡಿಕೋಸ್ತಾ ವಂದಿಸಿದರು. ಧರ್ಮಪ್ರಾಂತ್ಯದ ಪಿ ಆರ್ ಒ ವಂ ಡೆನಿಸ್ ಡೆಸಾ ಕಾರ್ಯಕ್ರಮ ನಿರೂಪಸಿದರು.


Spread the love