ಉಡುಪಿ ನಗರಕ್ಕೆ ಕುಡಿಯುವ ನೀರು ಸರಬರಾಜಿಗೆ ಅಗತ್ಯ ಕ್ರಮ – ಜಿಲ್ಲಾಧಿಕಾರಿ ಹೆಬ್ಸಿಬಾ ರಾಣಿ
ಉಡುಪಿ: ಉಡುಪಿ ನಗರಸಭೆಗೆ ಕುಡಿಯುವ ನೀರು ಪೂರೈಸುವ ಬಜೆ ಅಣೆಕಟ್ಟಿನಲ್ಲಿ ನೀರು ಸಂಪೂರ್ಣ ಖಾಲಿಯಗಿರುವುದರಿಂದ ಬಜೆ ಅಣೆಕಟ್ಟು ಮತ್ತು ಶೀರೂರು ಅಣೆಕಟ್ಟಿನ ನಡುವೆ ಇರುವ ದೊಡ್ಡ ಹೊಂಡಗಳಲ್ಲಿ ಶೇಖರಣೆಗೊಂಡಿರುವ ನೀರನ್ನು ಡ್ರೆಡ್ಜಿಂಗ್ ಮುಖಾಂತರ ಜಾಕ್ವೆಲ್ಗೆ ಹಾಯಿಸಿಕೊಂಡು ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಈ ಹಿಂದೆ ಮೂರು ದಿವಸಗಳಿಗೊಮ್ಮೆ ನೀರು ಸರಬರಾಜು ಮಾಡುವಷ್ಟು ಪ್ರಮಾಣದಲ್ಲಿ ನೀರು ದೊರಕುತ್ತಿಲ್ಲವಾದ್ದರಿಂದ, ನಗರವನ್ನು ಆರು ವಿಭಾಗಗಳಾಗಿ ವಿಂಗಡಿಸಿ ಒಂದು ದಿವಸಕ್ಕೆ ಒಂದು ವಿಭಾಗಕ್ಕೆ ನೀರನ್ನು ಸರಬರಾಜು ಮಾಡಲಾಗುತ್ತಿದೆ.
ಉಡುಪಿ ನಗರಸಭೆಯ ಮೂವತ್ತೈದು ವಾರ್ಡ್ಗಳಿಗೆ ಕುಡಿಯುವ ನೀರಿನ ಸಂಬಂಧವಾಗಿ ಮೂವತ್ತೈದು ಜನ ಸಿಬ್ಬಂಧಿಗಳನ್ನು ನೋಡಲ್ ಸಿಬ್ಬಂಧಿಯಾಗಿ ನೇಮಿಸಿದ್ದು, ಸಾರ್ವಜನಿಕರು ಕುಡಿಯುವ ನೀರಿನ ಸಂಬಂಧ ದೂರುಗಳನ್ನು ಸದ್ರಿ ನೋಡಲ್ ಸಿಬ್ಬಂಧಿಯವರಿಗೆ ತಿಳಿಸಬಹುದು. ನೋಡಲ್ ಸಿಬ್ಬಂಧಿಯವರು ಸಾರ್ವಜನಿಕ ದೂರವಾಣಿ ಕರೆಗಳನ್ನು ಸ್ವೀಕರಿಸಿ ಅತೀ ಅಗತ್ಯವಾದ್ದಲ್ಲಿ ಟ್ಯಾಂಕರ್ ಮುಖಾಂತರ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಿದ್ದಾರೆ.
ಸಾರ್ವಜಿನಿಕರಿಗೆ ಪಡಿತರ ಪದ್ದತಿಯಲ್ಲಿ ನೀರು ವಿತರಣೆ ಮಾಡುತ್ತಿರುವುದರಿಂದ ಒಂದು ಮನೆಗೆ ಒಂದು ಸಾವಿರ ಲೀಟರ್ ನೀರನ್ನು ಸರಬರಾಜು ಮಾಡಲಾಗುವುದು. ಸಾರ್ವಜನಿಕರು ಟ್ಯಾಂಕರ್ನಲ್ಲಿ ನೀರು ಪೂರೈಕೆ ಮಾಡಲು ಬಂದ ಟ್ಯಾಂಕರ್ ಟ್ರಿಪ್ ಶೀಟ್ನ ವಿವರವನ್ನು ಭರ್ತಿ ಮಾಡಿ ಕಡ್ಡಾಯವಾಗಿ ಸಹಿ ಮಾಡಬೇಕು. ಉಡುಪಿ ನಗರಸಭಾ ವ್ಯಾಪ್ತಿಯಲ್ಲಿರುವ ಹಳೆಯ ಬೋರ್ ವೆಲ್ ಹಾಗೂ ತೆರದ ಬಾವಿಗಳ ಪುನಶ್ಚೇತನ ಮತ್ತು ಮಣ್ಣಪಳ್ಳ ಕೆರೆಯಲ್ಲಿ ತುಂಬಿರಬಹುದಾದ ಹೂಳನ್ನು ತೆಗೆಸುವುದಕ್ಕೆ ಪ್ರಸ್ತಾವನೆ ತಯಾರಿಸಿ ಕ್ರಮ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಜೆಯಲ್ಲಿರುವ ಕುಡಿಯುವ ನೀರಿನ ಡ್ಯಾಂನಲ್ಲಿ ಶೇಖರಣಾಗೊಂಡಿರುವ ಹೂಳು ತೆಗೆಯಲು ಸಿದ್ಧ ಪಡಿಸಿ ಟೆಂಡರ್ ಕರೆಯಲು ಸೂಚಿಸಲಾಗಿದೆ. ನಗರಸಭಾ ವ್ಯಾಪ್ತಿಯಲ್ಲಿನ ಮಳೆ ನೀರು ಹರಿಯುವ ದೊಡ್ಡ ತೋಡುಗಳ (ರಾಜಕಾಲುವೆ) ಹೂಳು ತೆಗೆಯುವ ಬಗ್ಗೆ ಸರ್ವೇ ನಡೆಸಿ ಅಂದಾಜು ಪಟ್ಟಿ ತಯಾರಿಸಿ ಟೆಂಡರ್ ಕರೆಯಲು ಸೂಚಿಸಲಾಗಿದೆ. ಬಜೆ ಡ್ಯಾಂನಲ್ಲಿನ ಗೇಟುಗಳ ತುರ್ತು ನಿರ್ವಹಣಾ ಕಾರ್ಯವನ್ನು ಕೈಗೆತ್ತಿಕೊಳ್ಳಲು ನಿರ್ದೇಶಿಸಲಾಗಿದೆ.
ಉಡುಪಿ ನಗರಕ್ಕೆ ಕುಡಿಯುವ ನೀರಿನ ಅಭಾವ ನೀಗಿಸಲು ಬಿಡುಗಡೆಯಾದ ಸರ್ಕಾರದಿಂದ ಬಿಡುಗಡೆಯಾಗಿರುವ ಮೊತ್ತ ರೂ. 25 ಲಕ್ಷ ಹಾಗೂ ಕಳೆದ ವರ್ಷದ ಉಳಿಕೆ ಅನುದಾನದಲ್ಲಿ ತುರ್ತು ಕ್ರಮ ಕೈಗೊಳ್ಳಲು ಕಾರ್ಯಪಡೆ ಸೂಚಿಸಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುಮೋದನೆ ನೀಡಲಾಗಿದೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಮನೆಗಳಿಗೆ ನಗರಸಭೆಯ ವಿತರಣಾ ಜಾಲದಿಂದ ನೀರು ಪೂರೈಕೆಯಾದ ದಿನದಿಂದ ಮೂರು ದಿವಸದ ನಂತರ ಟ್ಯಾಂಕರ್ ಮುಖಾಂತರ ನೀರು ಸರಬರಾಜು ಮಾಡಲಾಗುವುದು. ಸಾರ್ವಜನಿಕರು ಕುಡಿಯುವ ನೀರಿನ ಅಭಾವ ತೀವ್ರವಾಗಿರುವುದರಿಂದ ನೀರನ್ನು ದುರುಪಯೋಗ ಪಡಿಸಿಕೊಳ್ಳದೇ ನಗರಸಭೆಯೊಂದಿಗೆ ಸಹಕರಿಸಲು ಉಡುಪಿ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.