ಉಡುಪಿ: ಸಾಂಪ್ರದಾಯಿಕ ನಾಡದೋಣಿ ಮೂಲಕ ಸಮುದ್ರದಲ್ಲಿ ಸಾಂಪ್ರದಾಯಿಕ ನಾಡದೋಣಿ ಮೂಲಕ ಮೀನುಗಾರಿಕೆಯಲ್ಲಿ ನಿರತವಾಗಿದ್ದ ದೋಣಿಯೊಂದು ಮಗುಚಿ ಬಿದ್ದು ಒಬ್ಬ ಸಾವನ್ನಪ್ಪಿದ ಹಾಗೂ ಇನ್ನೊಬ್ಬ ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಮಲ್ಪೆ ಪಡುಕರೆ ಶಾಂತಿನಗರ ಬಳಿ ಶನಿವಾರ ಬೆಳಗ್ಗೆ ನಡೆದಿದೆ.
ದುರ್ಘಟನೆಯಲ್ಲಿ ಮಲ್ಪೆ ಬಾಪುತೋಟದ ನಿವಾಸಿ ರವಿ ಕೋಟ್ಯಾನ್ (35) ಮತಪಟ್ಟಿದ್ದು, ಮಲ್ಪೆ ಪಡುಕರೆ ನಿವಾಸಿ ಶಿವಾನಂದ ಕೋಟ್ಯಾನ್ (26) ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಮತ್ತೊಬ್ಬ ಪಡುಕರೆ ನಿವಾಸಿ ವಿಜಿತ್ ಎಂಬವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಶನಿವಾರ ಬೆಳಗ್ಗೆ 55 ಮಂದಿ ಮೀನುಗಾರರನ್ನು ಹೊಂದಿದ್ದ ಪಡುಕರೆ ಸುಂದರ ಎಂಬವರ ಕೈರಂಪಣಿ ನಾಡದೋಣಿ ಮೀನುಗಾರರ ತಂಡವು ತಮ್ಮ ಕಸುಬಿನಲ್ಲಿ ನಿರಂತರಾಗಿದ್ದರು. ಅವರಲ್ಲಿ ದೋಣಿ ಮೂಲಕ ಬಲೆ ಬಿಡಲು 9 ಮಂದಿ ಮೀನುಗಾರರು ತೆರಳಿದ್ದರು. ಉಳಿದ 46 ಮಂದಿ ಬಲೆಯ ಹಗ್ಗವನ್ನು ಹಿಡಿದುಕೊಂಡು ಸಮುದ್ರತೀರದಲ್ಲಿ ನಿಂತಿದ್ದರು. ಸುಮಾರು 2 ಮಾರು ಆಳ ದೂರದ ಸಮುದ್ರದಲ್ಲಿ ಬಲೆ ಬಿಟ್ಟು ಹಿಂದಿರುಗುವಾಗ ಸಮುದ್ರದ ಅಲೆಯೊಂದು ದೋಣಿಗೆ ಬಡಿದ ಹಿನ್ನೆಲೆಯಲ್ಲಿ ದೋಣಿ ಮಗುಚಿ ಬಿದ್ದಿದೆ. ದೋಣಿಯಲ್ಲಿರುವ 9 ಮಂದಿ ಮೀನುಗಾರರೂ ನೀರಿಗೆ ಬಿದ್ದಿದ್ದು, ಈಜು ಬಾರದ ರವಿ ಕೋಟ್ಯಾನ್, ಶಿವಾನಂದ ಕೋಟ್ಯಾನ್, ವಿಜಿತ್ ನೀರಿನಲ್ಲಿ ಮುಳುಗಿದರು. ಇನ್ನುಳಿದ ಮೀನುಗಾರರು ಹಗ್ಗದ ಸಹಾಯದಿಂದ ರವಿ ಕೋಟ್ಯಾನ್ ಹಾಗೂ ವಿಜಿತ್ ಅವರನ್ನು ಮೇಲಕ್ಕೆ ಎಳೆತಂದು ಆಸ್ಪತ್ರೆಗೆ ದಾಖಲಿಸಿದ್ದರೂ, ರವಿ ಕೋಟ್ಯಾನ್ ಆಸ್ಪತ್ರೆಯಲ್ಲಿ ಮತಪಟ್ಟಿದ್ದಾರೆ.
ರವೀಂದ್ರ ಕೋಟ್ಯಾನ್ (35) ಅವರ ನಿವಾಸಕ್ಕೆ ಭೇಟಿ ನೀಡಿದ ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್, ಮತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮತರ ಕುಟುಂಬಕ್ಕೆ ಇಲಾಖೆಯಿಂದ ದೊರೆಯಬಹುದಾದ ಗರಿಷ್ಠ ಪ್ರಮಾಣದ ಪರಿಹಾರದ ಮೊತ್ತವನ್ನು ಅತ್ಯಂತ ಶೀಘ್ರದಲ್ಲಿ ಬಿಡುಗಡೆಗೊಳಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಪ್ರಮೋದ್ ಮಧ್ವರಾಜ್, ನಗರಸಭೆಯ ಅಧ್ಯಕ್ಷ ಪಿ.ಯುವರಾಜ್, ದ.ಕನ್ನಡ ಮೊಗವೀರ ಮಹಾಜನ ಸಭಾ ದ ಕೇಶವ ಕುಂದರ್, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.