ಉಡುಪಿ: ಪರಿಷತ್ ಚುನಾವಣೆ – ಕಾಂಗ್ರೆಸ್ ಟಿಕೇಟ್ ಗೊಂದಲ- ಜೆಪಿ ಹೆಗ್ಡೆ ಪಕ್ಷೇತರರಾಗಿ ಸ್ಪರ್ಧೆ?

Spread the love

ಉಡುಪಿ: ಡಿಸೆಂಬರ್ 27ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ದಕ ಮತ್ತು ಉಡುಪಿ ಜಿಲ್ಲೆಯಿಂದ ಬಿಜೆಪಿ ಹಾಲಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರನ್ನು ಕಣಕ್ಕಿಳಿಸಿದರೆ, ರಾಜ್ಯದ ಆಡಳಿತ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡುವುದರಲ್ಲಿ ಇನ್ನೂ ಗೊಂದಲದಲ್ಲಿದೆ. ಹಾಲಿ ಸದಸ್ಯ ಪ್ರತಾಪ್‍ಚಂದ್ರ ಶೆಟ್ಟಿ ತಾನು ಮರು ಸ್ಪರ್ಧೆ ಮಾಡುವುದಿಲ್ಲ ಎಂದು ಮುಂಚಿತವಾಗಿ ಘೋಷಣೆ ಮಾಡಿಕೊಂಡರು ಪಕ್ಷ ಮತ್ತೆ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸುತ್ತಿದೆ. ಇದಕ್ಕೆ ಕರಾವಳಿಯ ಹೈಕಮಾಂಡ್ ಆಗಿರುವ ಆಸ್ಕರ್ ಫೆರ್ನಾಂಡಿಸ್ ಅವರ ಬೆಂಬಲವೇ ಕಾರಣ ಎನ್ನುವುದು ಚರ್ಚೆಯ ವಿಷಯವಾಗಿದೆ. ಈ ನಡುವೆ ಮಾಜಿ ಸಂಸದ ಕೆ ಜಯಪ್ರಕಾಶ್ ಹೆಗ್ಡೆ ಅವರೂ ಕೂಡ ತಾನೂ ಚುನಾವಣೆಗೆ ನಿಲ್ಲಲು ಆಕಾಂಕ್ಷಿ ಎಂದು ತಮ್ಮ ಅರ್ಜಿಯನ್ನು ಕೆಪಿಸಿಸಿಗೆ ಸಲ್ಲಿಸದ್ದಾರೆ.

Desktop

ಮೂರನೇ ಬಾರಿ ವಿಧಾನ ಪರಿಷತ್ತಿಗೆ ಸ್ಪರ್ಧಿಸಲು ಚಿಂತನೆ ನಡೆಸಿರುವ ಪ್ರತಾಪ್ ಚಂದ್ರ ಶೆಟ್ಟಿಯವರಿಗೆ ಆಸ್ಕರ್ ಬೆಂಬಲ ಬಿಟ್ಟರೆ ಬೇರಾರು ಕೂಡ ಬೆಂಬಲಿಸುತ್ತಿಲ್ಲ ಎಂಬ ಗಾಳಿಸುದ್ದಿಗಳು ಹರಡುತ್ತಿವೆ. ಅವರ ಆಯ್ಕೆಯನ್ನು ಸ್ವಪಕ್ಷಿಯರೇ ವಿರೋಧಿಸುತ್ತಿದ್ದು, ಈ ಬಾರಿ ಜಯಪ್ರಕಾಶ್ ಹೆಗ್ಡೆಯವರಿಗೆ ಅವಕಾಶ ನೀಡಬೇಕು ಎಂಬ ಕೂಗು ಕೇಳಿಬಂದಿದೆ. ಜಯಪ್ರಕಾಶ್ ಹೆಗ್ಡೆಯವರ ಪರ ಯುವ ಪಡೆ ಹೆಚ್ಚಿನ ಒಲವು ಹೊಂದಿದ್ದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಅವರ ಪರ ಬ್ಯಾಟಿಂಗ್ ಆರಂಭಿಸಿದೆ. ಅಲ್ಲದೆ ಪ್ರತಾಪ್ ಚಂದ್ರ ಶೆಟ್ಟಿಯವರು ತಾನು ಸ್ಪರ್ಧೆ ಮಾಡುವುದಿಲ್ಲ ಎಂದು ನವೆಂಬರ್ 1 ರಂದು ಸ್ಥಳಿಯ ಸಂಸ್ಥೆಗಳ ಸದಸ್ಯರಿಗೆ ಪತ್ರ ಬರೆದು ಕಳೆದ 6 ವರ್ಷಗಳಲ್ಲಿ ತನಗೆ ನೀಡಿದ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿ ತಾನು ಮುಂದಿನ ದಿನಗಳಲ್ಲಿ ಪರಿಷತ್ತಿನ ಚುನಾವಣೆಯಲ್ಲಿ ಸ್ಪರ್ದಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು ಆದರೆ ಈ ಮಧ್ಯೆ ಮತ್ತೆ ಅವರು ಸ್ಪರ್ಧಿಸಲು ಆಸಕ್ತಿ ತೋರಿರುವುದು ಸ್ವ ಪಕ್ಷಿಯರಿಗೆ ಮುಜುಗರಕ್ಕಿಡು ಮಾಡಿದೆ. ಶಾಸಕರಾಗಿ ವಿಧಾನಪರಿಷತ್ ಸದಸ್ಯರಾಗಿ ಕಳೆದ 35 ವರುಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪ್ರತಾಪ್‍ಚಂದ್ರ ಶೆಟ್ಟಿ ಅವರಿಗೆ ಮತ್ತೆ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಉಡುಪಿ ಮತ್ತು ಕುಂದಾಪುರ ತಾಲೂಕು ಕಾಂಗ್ರೆಸ್ ಕಾರ್ಯಕರ್ತರ ಹೆಸರಿನಲ್ಲಿ ಕೆಪಿಸಿಸಿ ಅಧ್ಯಕ್ಷರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಸೇರಿದಂತೆ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಇದಕ್ಕೆ ಪ್ರಮುಖ ಕಾರಣ ಪ್ರತಾಪ್ ಚಂದ್ರ ಶೆಟ್ಟಿ ಅವರ ಮನೆ ಇರುವ ವಾರ್ಡುಗಳಲ್ಲಿ ನಿರಂತರ 20 ವರುಷಗಳಿಂದ ಬಿಜೆಪಿ ಬೆಂಬಲಿತರು ಗೆಲ್ಲುತ್ತಿದ್ದು, ತಾಲೂಕು ಹಾಗೂ ಜಿಲ್ಲಾ ಪಂಚಾಯತುಗಳಲ್ಲಿ, ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಗಳು ಸತತವಾಗಿ ಗೆಲ್ಲುತ್ತಾ ಬಂದಿದ್ದಾರೆ. ತಾಲೂಕಿನಲ್ಲಿ ಪಕ್ಷ ಸಂಘಟನೆಗೆ ಪ್ರತಾಪ್ ಚಂದ್ರ ಶೆಟ್ಟಿಯವರು ಬಿಡುತ್ತಿಲ್ಲ ಅಲ್ಲದೆ ವೈಯುಕ್ತಿಕವಾಗಿ ಅವರು ಕೂಡ ಎನೂ ಮಾಡುತ್ತಿಲ್ಲ ಎನ್ನುವುದು ಕಾರ್ಯಕರ್ತರ ಆರೋಪ ಅಲ್ಲದೆ ವಿಧಾನ ಪರಿಷತ್ ಸದಸ್ಯರಾಗಿ ಆಡಳಿತ ಪಕ್ಷದ ವಿರುದ್ದವೇ ವಾರಾಹಿ ವಿಷಯದಲ್ಲಿ ದಿನಗಟ್ಟಲೇ ಪ್ರತಿಭಟನೇ ಮಾಡಿ ಸರಕಾರವನ್ನು ಮುಜುಗರಕ್ಕೆ ತಳ್ಳಿದ್ದು ಪಕ್ಷದ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣ. ಉಡುಪಿ ಹಾಗೂ ದಕ ಕನ್ನಡ ಜಿಲ್ಲೆಯಲ್ಲಿ ನಡೆಯುವ ಯಾವುದೇ ಕಾಂಗ್ರೆಸ್ ಸಭೆಗಳಿಗೆ, ಸರ್ಕಾರಿ ಕಾರ್ಯಕ್ರಮ ಹಾಗೂ ಸಭೆಗಳಿಗೆ ಅವರು ಭಾಗವಹಿಸುತ್ತಿಲ್ಲ ಅಂತಹವರಿಗೆ ಟಿಕೇಟ್ ನೀಡಿದರೆ ಪಕ್ಷದ ಅವನತಿಗೆ ಕಾರಣವಾಗುತ್ತದೆ ಎನ್ನುವುದು ಕಾರ್ಯಕರ್ತರ ಅಭಿಪ್ರಾಯವಾಗಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕನಿಷ್ಟ ಮತಗಳ ಅಂತರದಿಂದ ಸೋತರೂ ಜಯಪ್ರಕಾಶ್ ಹೆಗ್ಡೆ ಜನರೊಂದಿಗೆ ಬೆರತು ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಜಯಪ್ರಕಾಶ್ ಹೆಗ್ಡೆಯವರಿಗೆ ಅವಕಾಶ ನೀಡದರೆ ಮುಂದೆ ಜಿಲ್ಲೆಯಲ್ಲಿ ಪಕ್ಷ ಬೆಳೆಯಲು ಇನ್ನಷ್ಟು ಅವಕಾಶ ನೀಡಿದಂತಾಗುತ್ತದೆ. ಅಲ್ಲದೆ ಯುವ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಯಪ್ರಕಾಶ್ ಹೆಗ್ಡೆಯವರ ಬೆಂಬಲಕ್ಕೆ ನಿಂತಿದ್ದು ಒಂದೊಮ್ಮೆ ಜಯಪ್ರಕಾಶ್ ಹೆಗ್ಡೆಯವರಿಗೆ ಅವಕಾಶ ನೀಡದೇ ಹೋದಲ್ಲಿ ಪಕ್ಷದ ಅಭಿವೃದ್ದಿಗೆ ಯಾವುದೇ ರೀತಿಯ ಸಹಕಾರವನ್ನು ನೀಡುವುದಿಲ್ಲ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ನೇರವಾಗಿ ನಾಯಕರ ಗಮನಕ್ಕೆ ತಂದಿದ್ದಾರೆ. ಅಲ್ಲದೆ ಪಕ್ಷ ಜಯಪ್ರಕಾಶ್ ಹೆಗ್ಡೆಯವರನ್ನು ಮೂಲೆಗುಂಪು ಮಾಡಲು ಹೊರಟಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಶನಿವಾರ ಬ್ರಹ್ಮಾವರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ನಾಯಕರ ಒಳಗಿನ ಮನಸ್ತಾಪ ಜಯಪ್ರಕಾಶ್ ಹೆಗ್ಡೆಯವರ ಮಾತಿನ ಮೂಲಕವೇ ಹೊರಬಿದ್ದಿತ್ತು. ಅಲ್ಲದೆ ಯುವ ಕಾಂಗ್ರೆಸ್ ಕಾರ್ಯಕರ್ತರು ಹೆಗ್ಡೆಯವರಿಗೆ ಪಕ್ಷ ಮಾನ್ಯತೆ ನೀಡುವಂತೆ ಈಗಾಗಲೇ ಮುಖ್ಯಮಂತ್ರಿಗಳ ಬಳಿ ಮನವಿ ಸಲ್ಲಿಸದ್ದು, ಒಂದು ವೇಳೆ ಪಕ್ಷ ಅವಕಾಶ ನೀಡದೇ ಹೊದಲ್ಲಿ ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿದ್ದಾರೆ. ಪ್ರತಾಪ್ ಚಂದ್ರ ಶೆಟ್ಟಿಯವರಿಗೆ ಪಕ್ಷದಲ್ಲೇ ವಿರೋದ ಇರುವುದರಿಂದ ಜಯಪ್ರಕಾಶ್ ಹೆಗ್ಡೆ ಒಂದು ವೇಳೆ ಪಕ್ಷೇತರರಾಗಿ ನಿಂತರೆ ಗೆಲುವು ಸಾಧ್ಯ ಎನ್ನುವುದು ಯುವ ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯ.

ಈ ಬಗ್ಗೆ ಜಯಪ್ರಕಾಶ್ ಹೆಗ್ಡೆಯವರ ಬಳಿ ಮ್ಯಾಂಗಲೋರಿಯನ್ ಪ್ರತಿನಿಧಿಗಳು ಮಾತನಾಡಿದಾಗ ತಾನು ಪರಿಷತ್ ಚುನಾವಣೆಗೆ ಟಿಕೇಟು ನೀಡುವಂತೆ ಮೈಮೇಲೆ ಬಿದ್ದುಕೊಂಡು ಹೋಗಿಲ್ಲ ಆದರೆ ಪ್ರತಾಪ್‍ಚಂದ್ರ ಶೆಟ್ಟಿಯವರು ತಾನು ಮುಂದಿನ ಪರಿಷತ್ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಕಳೆದ 6 ತಿಂಗಳಿನಿಂದ ಹೇಳಿಕೊಂಡು ಬಂದಿದ್ದಾರೆ ಅದರಂತೆ ಚುನಾವಣೇ ಸ್ಪರ್ಧೆಗೆ ಮುನ್ನ ಅವಕಾಶ ಕೇಳಿ ಅರ್ಜಿ ಸಲ್ಲಿಸುವುದು ಪಕ್ಷದ ನಿಯಮ ಅದರಂತೆ ತಾನು ಕೂಡ ಅರ್ಜಿಯನ್ನು ಸಲ್ಲಿಸಿದ್ದೇನೆ. ಪಕ್ಷ ತನ್ನ ಸೇವೆಯನ್ನು ಗುರುತಿಸಿ ಪರಿಗಣಿಸಿದರೆ ಉತ್ತಮ ಇಲ್ಲದೆ ಹೋದರೆ ತನ್ನ ಬದಲು ಎರಡನೇ ಹಂತದ ಇತರ ಯಾವುದೇ ನಾಯಕರಿಗೆ ನೀಡಿದರೂ ಸಂತೋಷ ಕೇವಲ ತಾವು ಮಾತ್ರ ಬೆಳೆಯದೆ 2 ನೇ ಹಂತದ ನಾಯಕರೂ ಕೂಡ ಬೆಳೆಯಲು ಅವಕಾಶ ನೀಡಬೇಕು ಎನ್ನುವುದು ನನ್ನ ವಾದ ನಾನು ರಾಜಕೀಯದಲ್ಲಿ ಈ ವರೆಗೆ ಹಲವು ಹುದ್ದೆಗಳನ್ನು ಪಡೆದಿದ್ದೇನೆ ನನ್ನ ಬದಲಿಗೆ 2 ನೇ ಹಂತದ ಯಾವುದೇ ನಾಯಕರಿಗೂ ನೀಡಿದರೂ ಕೂಡ ಅವರ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ಈ ನಡುವೆ ತಮ್ಮ ಅಭಿಮಾನಿ ಬಳಗ ತಾನು ಪಕ್ಷೇತರರಾಗಿ ನಿಂತು ಸ್ಪರ್ಧೆ ಮಾಡುವಂತೆ ಒತ್ತಡ ಹೇರುತ್ತಿದೆ ಆದರೆ ಈ ಬಗ್ಗೆ ತಾನು ಯಾವುದೇ ನಿರ್ಣಯಕ್ಕೆ ಬಂದಿಲ್ಲ ಪಕ್ಷ ಈ ವರೆಗೆ ತನಗೆ ಗೌರವದಿಂದಲೇ ನಡೆಸಿಕೊಂಡಿದೆ ಆದ್ದರಿಂದ ಅಂತಹ ದುಡುಕಿನ ನಿರ್ಧಾರಕ್ಕೆ ಹೋಗುವ ಇಚ್ಛೆ ಇಲ್ಲ ಒಂದೊಮ್ಮೆ ಒತ್ತಡ ತೀವ್ರವಾದಾಗ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಚಿಂತಿಸಲಾಗುವುದು. ಪಕ್ಷದ ಮುಂದಿನ ಅಭಿವೃದ್ಧಿಯ ದೃಷ್ಟಿಯಿಂದ ಪಕ್ಷ ಉತ್ತಮ ವ್ಯಕ್ತಿಗೆ ಆಯ್ಕೆ ಮಾಡಿದರೆ ಜಿಲ್ಲೆಯಲ್ಲಿ ಪಕ್ಷ ಇನ್ಷಷ್ಟು ಬೆಳೆಯಲಿದೆ ಎನ್ನುವುದು ನನ್ನ ನಂಬಿಕೆ ಈ ವರೆಗೆ ಅಭ್ಯರ್ಥಿ ಯಾರು ಎನ್ನುವುದು ಅಂತಿಮವಾಗಿಲ್ಲ ಆದ್ದರಿಂದ ನಾನು ಪಕ್ಷದ ವೇದಿಕೆಯಲ್ಲಿ ಸರಿಯಾಗಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವಂತೆ ಪಕ್ಷದ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್ ಅವರಲ್ಲಿ ಮನವಿ ಮಾಡಿದ್ದೇನೆ ಅವರು ನಮ್ಮ ಮನವಿಗೆ ಸ್ಪಂದಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದರು.

ಈ ಬಗ್ಗೆ ಪ್ರತಾಪ್ ಚಂದ್ರ ಶೆಟ್ಟಿಯವರು ಪ್ರತಿಕ್ರಿಯಿಸಿ ನಾನು ಚುನಾವಣೆಗೆ ಸ್ಪರ್ಧಾಕಾಂಕ್ಷಿಯಾಗಿರಲಿಲ್ಲ ಆದರೆ ಪಕ್ಷದ ಸೂಚನೆ ಮೇರೆಗೆ ಮತ್ತೆ ಸ್ಪರ್ಧೆಗೆ ಇಳಿದಿದ್ದೇನೆ ಯಾರು ಅಭ್ಯರ್ಥಿ ಎನ್ನುವುದನ್ನು ಪಕ್ಷದ ಮುಖಂಡರು ತಿರ್ಮಾನಿಸುತ್ತಾರೆ ನನ್ನ ವಿರುದ್ದ ಸ್ವಪಕ್ಷೀಯರು ಪಕ್ಷದ ನಾಯಕರಿಗೆ ದೂರು ನಿಡಿದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಗಫೂರ್ ಮಾತನಾಡಿ ಅಬ್ಯರ್ಥಿಯ ವಿರುದ್ದ ದೂರು ನೀಡಿರುವುದು ನಿಜ ಆಂತಹ ಬೆಳವಣಿಗೆಗಳು ಎಲ್ಲ ಪಕ್ಷಗಳಲ್ಲಿ ಇದ್ದದ್ದೆ ಆದರೆ ಅಭ್ಯರ್ಥಿಯ ಆಯ್ಕೆಯನ್ನು ಅಂತಿಮಗೊಳಿಸುವಾಗ ಎಲ್ಲರ ಅಭಿಪ್ರಾಯ ಪಡೆದು ಹೈಕಮಾಂಡ್ ನಿರ್ಧಾರ ತೆಗೆದು ಕೊಳ್ಳೂತ್ತದೆ. ನವೆಂಬರ್ 30 ರಂದು ಕೆಪಿಸಿಸಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳು ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಚರ್ಚೆ ನಡೆಸಿ ಒಂದೆರಡು ದಿನಗಳಲ್ಲಿ ಅಭ್ಯರ್ಥಿಯ ಆಯ್ಕೆಯನ್ನು ಅಂತಿಮ ಗೊಳಿಸಲಿದ್ದಾರೆ ಎಂದರು.

ಈ ಎಲ್ಲಾ ಬೆಳವಣಿಗೆಯ ನಡುವೆ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಕೂಡ ಪರಿಷತ್ ಚುನಾವಣೆಯ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ. ತಾನು ಕಳೆದ 38 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದು ಪಕ್ಷ ನನಗೆ ಇದುವರೆಗೆ ಯಾವುದೇ ಸ್ಥಾನಮಾನ ನೀಡಿಲ್ಲ ಕಳೆದ ವಿಧಾನಸಭಾ ಚುನಾವಣೇಯಲ್ಲಿ ಟಿಕೇಟ್ ನೀಡುವುದಾಗಿ ವಂಚಿಸಿದ್ದು, ಬಳಿಕ ಕೆಎಫ್‍ಡಿಸಿ ನಿಗಮದ ಅಧಕ್ಷ ಹುದ್ದೆ ನೀಡುವುದಾಗಿ ಆಶ್ವಾಸನೆ ನೀಡಿ ಮೋಸ ಮಾಡಿದ್ದು ಈ ಬಾರಿ ತನಗೆ ಟಿಕೇಟ್ ನೀಡುವಂತೆ ಒತ್ತಾಯಿಸಿದ್ದಾರೆ. ಒಂದೊಮ್ಮೆ ಪಕ್ಷದಿಂದ ಈ ಬಾರಿಯೂ ಅನ್ಯಾಯವಾದರೆ ಹಿತೈಷಿಗಳೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ ಪಕ್ಷದಲ್ಲಿ ಅಭ್ಯರ್ಥಿಯ ಆಯ್ಕೆ ಸಂಪೂರ್ಣ ಗೊಂದಲದ ಗೂಡಾಗಿದ್ದು ಅಂತಿಮವಾಗಿ ಪಕ್ಷ ಯಾರಿಗೆ ಮಣೆ ಹಾಕಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.


Spread the love