Home Mangalorean News Kannada News ಉಡುಪಿ ಪರ್ಯಾಯೋತ್ಸವ: ಜನವರಿ 8 ರಂದು ಪುತ್ತಿಗೆ ಶ್ರೀಗಳ ಪುರಪ್ರವೇಶ, ಪೌರಸನ್ಮಾನ

ಉಡುಪಿ ಪರ್ಯಾಯೋತ್ಸವ: ಜನವರಿ 8 ರಂದು ಪುತ್ತಿಗೆ ಶ್ರೀಗಳ ಪುರಪ್ರವೇಶ, ಪೌರಸನ್ಮಾನ

Spread the love

ಉಡುಪಿ ಪರ್ಯಾಯೋತ್ಸವ: ಜನವರಿ 8 ರಂದು ಪುತ್ತಿಗೆ ಶ್ರೀಗಳ ಪುರಪ್ರವೇಶ, ಪೌರಸನ್ಮಾನ

ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ 2024ರ ಜನವರಿ 18ರಂದು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ಶ್ರೀಕೃಷ್ಣಪೂಜೆಯ ಪರ್ಯಾಯ ವಹಿಸಿಕೊಳ್ಳುವ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಆಚರಣೆಯ ಭಾಗವಾಗಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳವರು ಹಾಗೂ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದಂಗಳವರ ಪುರಪ್ರವೇಶ ಮತ್ತು ಪೌರಸನ್ಮಾನ ಕಾರ್ಯಕ್ರಮ 2024ರ ಜನವರಿ8ರ ಸೋಮವಾರ ಸಂಜೆ 7 ಗಂಟೆಗೆ ಉಡುಪಿ ರಥಬೀದಿಯ ಆನಂದತೀರ್ಥ ಮಂಟಪದಲ್ಲಿ ನಡೆಯಲಿದೆ ಎಂದು ಪರ್ಯಾಯ ಸಮಿತಿಯ ಅಧ್ಯಕ್ಷರಾದ ಡಾ. ಎಚ್ ಎಸ್ ಬಲ್ಲಾಳ್ ಹೇಳಿದರು.

ಅವರು ಶನಿವಾರು ಉಡುಪಿಯ ಪುತ್ತಿಗೆ ಮಠದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳವರು ಅವರು ಜನವರಿ 18 ರಂದು ತಮ್ಮ ಶಿಷ್ಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದಂಗಳವರ ಜೊತೆಯಲ್ಲಿ ನಾಲ್ಕನೇ ಬಾರಿ ಪರ್ಯಾಯ ಪೀಠಾರೋಹಣ ಮಾಡಲಿದ್ದಾರೆ.

ಪರ್ಯಾಯ ಪೂರ್ವಭಾವಿಯಾಗಿ ದೇಶ-ವಿದೇಶಗಳಲ್ಲಿ ಸಂಚರಿಸಿ ಜನವರಿ 8 ರಂದು ಉಡುಪಿಗೆ ಪುರಪ್ರವೇಶಗೈಯಲಿರುವರು. ಅಂದು ಮಧ್ಯಾಹ್ನ 3.30ಕ್ಕೆ ಜೋಡುಕಟ್ಟೆಯಿಂದ ಸಾಂಪ್ರದಾಯಿಕ ಮೆರವಣಿಗೆಯ ಮೂಲಕ ಶ್ರೀ ಮಠದ ಸಕಲ ಗೌರವಗಳೊಂದಿಗೆ ಶ್ರೀಪಾದರನ್ನು ಬರಮಾಡಿಕೊಳ್ಳಲಾಗುವುದು. ಸಂಜೆ 6-45ಕ್ಕೆ ಶ್ರೀ ಮಠ ಪ್ರವೇಶ ಮಾಡಲಿರುವ ಶ್ರೀಗಳನ್ನು ಊರಿನ ಗಣ್ಯರು, ಸ್ವಾಗತ ಸಮಿತಿಯ ಪದಾಧಿಕಾರಿಗಳು ಹಾಗೂ ಹಿರಿಯರ ಸಮ್ಮುಖದಲ್ಲಿ ಪೌರಸಮ್ಮಾನ ನಡೆಸಲಾಗುವುದು ಎಂದರು.

ಪರ್ಯಾಯ ಸಮಿತಿಯ ಕಾರ್ಯಾಧ್ಯಕ್ಷ ರಘುಪತಿ ಭಟ್ ಮಾತನಾಡಿ ಪೌರಸಮ್ಮಾನ ಕಾರ್ಯಕ್ರಮದಲ್ಲಿ ಪರ್ಯಾಯ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಡಾ|ಡಿ. ವೀರೇಂದ್ರ ಹೆಗ್ಗಡೆ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ, ಶಾಸಕರಾದ ಕೋಟ ಶ್ರೀ ನಿವಾಸ ಪೂಜಾರಿ, ಯಶಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಸುನೀಲ್ ಕುಮಾರ್, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ ಜಿಲ್ಲಾಧಿಕಾರಿ, ಡಾ|ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ| ಅರುಣ್, ಹಾಗೂ ಇತರರು ಉಪಸ್ಥೀತಿ ಹೊಂದಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪರ್ಯಾಯ ಸ್ವಾಗತ ಸಮಿತಿಯ ಕಾರ್ಯದರ್ಶಿ ಬೆಳಪು ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.


Spread the love

Exit mobile version