ಉಡುಪಿ: ಪೊಲೀಸ್ ವಸತಿಗೃಹಕ್ಕೆ ಕನ್ನ ಹಾಕಿದ ಕಳ್ಳರು!
ಉಡುಪಿ: ಜಿಲ್ಲೆಯ ಮಿಷನ್ ಕಂಪೌಂಡ್ ಬಳಿಯ ಪೊಲೀಸ್ ವಸತಿ ಗೃಹಕ್ಕೆ ಕಳ್ಳರು ಕನ್ನ ಹಾಕಿದ್ದಾರೆ. ನಗರ ಮಧ್ಯಭಾಗದಲ್ಲಿರುವ ಸಶಸ್ತ್ರ ಮೀಸಲು ಪಡೆಯ ಕಚೇರಿ ಬಳಿ ಇರುವ ಪೊಲೀಸ್ ವಸತಿಗೃಹಕ್ಕೆ ಕಳೆದ ತಡರಾತ್ರಿ ಮೂರು ಗಂಟೆಯ ಸುಮಾರಿಗೆ ಕಳ್ಳರು ಬಂದಿದ್ದಾರೆ.
ಡಿಎಆರ್ ಸಿಬ್ಬಂದಿ ರಾತ್ರಿ ಕರ್ತವ್ಯಕ್ಕೆ ತೆರಳಿದ ನಂತರ ಬಂದ ಕಳ್ಳರು, ಓರ್ವ ಸಿಬ್ಬಂದಿಯ ಮನೆಯಿಂದ ಬೆಳ್ಳಿ ಗೆಜ್ಜೆ, ಬೆಳ್ಳಿ ನಾಣ್ಯ ಕಳವು ಮಾಡಿದ್ದಾರೆ. ಮತ್ತೋರ್ವ ಸಿಬ್ಬಂದಿಯ ಮನೆಗೂ ನುಗ್ಗಿದ್ದ ಕಳ್ಳರು ಪೊಲೀಸ್ ಪದಕ,ಯುನಿಫಾರ್ಮ್ ಕ್ಯಾಪ್ ನೋಡಿ ಕಾಲ್ಕಿತ್ತಿರುವ ಸಾಧ್ಯತೆ ಇದೆ. ಪೋಲಿಸ್ ವಸತಿಗೃಹ ಎಂಬ ಮಾಹಿತಿ ಇಲ್ಲದೆ ಕಳ್ಳತನಕ್ಕೆ ಬಂದಿರುವ ಸಾಧ್ಯತೆ ಕಂಡುಬಂದಿದೆ. ಕನ್ನಡ ಭಾಷೆ ತಿಳಿಯದ ಹೊರ ರಾಜ್ಯದ ಕಳ್ಳರ ತಂಡದಿಂದ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಆಗಮಿಸಿ ದಾಖಲೆಗಳ ಸಂಗ್ರಹ ನಡೆಸಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.