ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆ ಉಡುಪಿ ಮತ್ತು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಇವರ ಜಂಟಿ ಆಶ್ರಯದಲ್ಲಿ ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಯ ಕುರಿತು ಮಾಹಿತಿ ಕಾರ್ಯಾಗಾರವು ಇಂದು ನಡೆಯಿತು.
ಮಲ್ಪೆ ಮೀನುಗಾರಿಕಾ ಸಂಘದ ಅಧ್ಯಕ್ಷ ಹಿರಿಯಣ್ಣ ಟಿ ಕಿದಿಯೂರು ಇವರು ಕಾರ್ಯಕ್ರಮ ಉದ್ಘಾಟಿಸಿ , ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧವಾಗಿದ್ದು, ಮಕ್ಕಳನ್ನು ಶೈಕ್ಷಣಿಕವಾಗಿ ಮುಂದುವರಿಸಿದಲ್ಲಿ ದೇಶದ ಬೆಳವಣಿಗೆ ಸಾಧ್ಯ ಎಂದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಮತ್ತು ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ ಹೆಚ್.ಪಿ.ಜ್ಞಾನೇಶ್ ಮಾಹಿತಿ ನೀಡುತ್ತಾ ಮಲ್ಪೆ ಬಂದರಿನಲ್ಲಿ ನಿರಂತರವಾಗಿ ಶಾಲೆಯಿಂದ ಹೊರಗುಳಿದ ಮಕ್ಕಳು ಮೀನು ಹೆಕ್ಕುವ ಕೆಲಸದಲ್ಲಿ ನಿರತರಾಗಿರುವ ಬಗ್ಗೆ ದೂರುಗಳು ಬರುತ್ತಿದ್ದು ಈ ಹಿನ್ನೆಲೆಯಲ್ಲಿ ಈಗಾಗಲೇ ಅನೇಕ ಬಾರಿ ದಾಳಿಗಳನ್ನು ಮಾಡಿ ಮಕ್ಕಳನ್ನು ರಕ್ಷಿಸಿ ಶಿಕ್ಷಣ ಮತ್ತು ಪುನರ್ವಸತಿಯನ್ನು ನೀಡಲಾಗಿದ್ದು, ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತಗೊಳಿಸುವಲ್ಲಿ ಕಾರ್ಮಿಕ ಇಲಾಖೆಯೊಂದಿಗೆ ಇನ್ನಿತರ ಇಲಾಖೆಗಳು ಮತ್ತು ಸಹಕಾರಿ ಸಂಘಗಳು ಮತ್ತು ಸಮಾಜ ಸೇವಾ ಸಂಸ್ಥೆಗಳು ಕೈ ಜೋಡಿಸುವ ಮೂಲಕ ಬಾಲಕಾರ್ಮಿಕ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಬಹುದು ಎಂದು ಅಭಿಪ್ರಾಯ ಪಟ್ಟರು. ಬಾಲಕಾರ್ಮಿಕ ನಿಷೇದ ಮತ್ತು ನಿಯಂತ್ರಣ ಕಾಯ್ದೆಯ ಬಗ್ಗೆ ಮಾಹಿತಿ ನೀಡಿದರು.
ಅತಿಥಿಗಳಾದ ಕೆ ಗಣಪತಿ ಭಟ್, ಜಂಟಿ ನಿರ್ದೇಶಕರು ಮಲ್ಪೆ ಮೀನುಗಾರಿಕಾ ಬಂದರು ಯೋಜನೆ ಮಲ್ಪೆ ಮತ್ತು ಕುಮಾರಸ್ವಾಮಿ, ಸಹಾಯಕ ನಿರ್ದೇಶಕರು ಮಲ್ಪೆ ಮೀನುಗಾರಿಕಾ ಬಂದರು ಯೋಜನೆ ಮಲ್ಪೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.ಜೀವನ್ ಕುಮಾರ್ ಕಾರ್ಮಿಕ ನಿರೀಕ್ಷಕರು 2ನೇ ವೃತ್ತ ರವರು ವಾಹನ ಚಾಲಕರ ಅಪಘಾತ ಪರಿಹಾರ ವಿಮಾ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಪ್ರಭಾಕರ್ ಆಚಾರ್ ಯೋಜನಾ ನಿರ್ದೇಶಕರು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಉಡುಪಿ ಜಿಲ್ಲೆ ಇವರು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಜೀವನ್ ಕುಮಾರ್ ಕಾರ್ಮಿಕ ನಿರೀಕ್ಷಕರು ವಂದಿಸಿದರು.