ಉಡುಪಿ :- ರಾಷ್ಟ್ರ ಮಟ್ಟದ ರಾಜೀವ್ಗಾಂಧಿ ಖೇಲ್ ಅಭಿಯಾನ್ ನದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾದ ಉಡುಪಿ ಜಿಲ್ಲೆಯ ಬ್ಯಾಂಡ್ಮಿಟನ್ ಪ್ರತಿಭೆಗಳನ್ನು ಜಿಲ್ಲಾಧಿಕಾರಿಗಳು ತಮ್ಮ ಕಚೇರಿಯಲ್ಲಿ ಅಭಿನಂದಿಸಿದರು.
ನಿಮ್ಮ ಶಕ್ತಿಯನ್ನು ಅರಿತು ಗುರಿಯನ್ನು ನಿರ್ಧರಿಸಿ ಮುನ್ನುಗ್ಗಿ ಎಂದು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದ ಜಿಲ್ಲಾಧಿಕಾರಿಗಳು, ರಾಷ್ಟ್ರಮಟ್ಟದ ಪ್ರತಿಭೆಗಳಾಗಿ ಅರಳಲು ಬೇಕಾದ ಅಗತ್ಯ ಸಲಹೆಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು.
16 ವರ್ಷದ ಕೆಳಗಿನ ಬಾಲಕಿಯರ ತಂಡದಲ್ಲಿ ರನ್ನರ್ಸ್ ಅಪ್ಗಳಾಗಿ ಹೊರಹೊಮ್ಮಿದ ಉಡುಪಿ ಸೈಂಟ್ ಮೇರೀಸ್, ಕಾರ್ಕಳ ಎಸ್ ಎನ್ ವಿ ಮತ್ತು ಪ್ರಕೃತಿ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿರುವುದನ್ನು ಗುರುತಿಸಿ, ಗೌರವಿಸಿದ ಉಡುಪಿ ಬ್ಯಾಂಡ್ಮಿಟನ್ ಸಮಿತಿ ಜಿಲ್ಲಾಧಿಕಾರಿಗಳು ಮುಖಾಂತರ ಮಕ್ಕಳನ್ನು ಸನ್ಮಾನಿಸಿತು.
ನಿಮ್ಮೊಳಗೆ ನೀವು ಏನಾಗಬಯಸುವಿರೆಂಬ ತುಡಿತವಿರುತ್ತದೆ; ಅದನ್ನು ಅರ್ಥೈಸಿ ಮುನ್ನುಗ್ಗಿ ಎಂದ ಜಿಲ್ಲಾಧಿಕಾರಿಗಳು, ಮಕ್ಕಳಿಗೆ ಮೇರಿಕೋಮ್ ಆತ್ಮಚರಿತ್ರೆ ಪುಸ್ತಕವನ್ನು ಬಹುಮಾನವಾಗಿ ನೀಡಿದರು.
ಗ್ಲಾನ್ಸಿಯಾ ಪಿಂಟೋ, ಶ್ರಾವ್ಯ ಶೆಟ್ಟಿ, ನೇಹ ಬಾಲಕಿಯರ 16 ವರ್ಷದ ಕೆಳಗಿನ ವಿಭಾಗದಲ್ಲಿ ಬಹುಮಾನ ಪಡೆದರೆ, ಬಾಲಕರ ವಿಭಾಗದಲ್ಲಿ ಶಮಂತ್ ಕಿದಿಯುರು, ಶಶಾಂಕ, ಆಯುಷ್ ಬಹುಮಾನ ಪಡೆದರು.
ರಾಜ್ಯ ಬ್ಯಾಂಡ್ಮಿಟನ್ ಅಸೋಸಿಯೇಷನ್ನ ಪ್ರಕಾಶ್ ಕೊಡವೂರು, ತರಬೇತುದಾರ ರೋಶನ್ ಲಾಲ್, ಯುವಜನ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ರೋಶನ್ ಶೆಟ್ಟಿ, ಮಕ್ಕಳ ಹೆತ್ತವರು ಉಪಸ್ಥಿತರಿದ್ದರು.