ಉಡುಪಿ: ಭೃಷ್ಟಾಚಾರದ ಆರೋಪದಡಿ ಜೈಲಿಗೆ ಹೋದ ಯಡ್ಯೂರಪ್ಪ, ರೆಡ್ಡಿಗಳ ಪಕ್ಷದಿಂದ ಕಾಂಗ್ರೆಸ್ ನೈತಿಕತೆಯ ಪಾಠವನ್ನು ಕಲಿಯಬೇಕಾಗಿಲ್ಲ ಎಂದು ಯೂತ್ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಹೇಳಿದ್ದಾರೆ.
ಅವರು ಶನಿವಾರ ಕ್ಲಾಕ್ ಟವರ್ನಲ್ಲಿ ಯೂತ್ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ನಾಯಕರ ವಿರುದ್ದ ಕೇಂದ್ರ ಸರಕಾರ ನಡೆಸುತ್ತಿರುವ ರಾಜಕೀಯ ಷ್ಯಡ್ಯಂತ್ರವನ್ನು ವಿರೋಧಿಸಿ ಆಯೋಜಿಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
ದೇಶದ ಯಾವುದೇ ರಾಜಕೀಯ ಪಕ್ಷ ತನ್ನ ಪಕ್ಷದ ಸಿದ್ದಾಂತಗಳನ್ನು ಪ್ರಚಾರ ಪಡಿಸಲು ಪತ್ರಿಕೆಯನ್ನು ಹೊಂದಿರುವುದು ತಪ್ಪಲ್ಲ, ಸದಾ ಉಗ್ರವಾದವನ್ನು ಬಿತ್ತುತ್ತಿರುವ ಶಿವಸೇನೆ ಕೂಡ ತನ್ನದೇ ಆದ ಪತ್ರಿಕೆಯನ್ನು ಹೊಂದಿದೆ. ಆದರಂತೆ ಕಾಂಗ್ರೆಸ್ ಪಕ್ಷ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಹೊಂದಿತ್ತು ಅದನ್ನೇ ಗುರಿಯಾಗಿಸಿ ಈಗಿನ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಬಿಜೆಪಿಯ ನಾಯಕ ಸುಬ್ರಹ್ಮಣ್ಯಮ್ ಸ್ವಾಮಿ ನೇತ್ರತ್ವದಲ್ಲಿ ಕಾಂಗ್ರೇಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯನ್ನು ಗುರಿಯಾಗಿಸಿ ರಾಜಕೀಯ ಪಿತೂರಿಯನ್ನು ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಸದಾ ಭೃಷ್ಟಾಚಾರದ ಕುರಿತು ಮಾತನಾಡುತ್ತಿರುವ ಅರೆ ಹುಚ್ಚ ಸುಬ್ರಹ್ಮಣ್ಯಮ್ ಸ್ವಾಮಿಗೆ ತನ್ನದೇ ಕೇಂದ್ರ ಸರಕಾರದಲ್ಲಿ ಇರುವ ಬಿಜೆಪಿ ನಾಯಕರ ಭೃಷ್ಠಾಚಾರ ಕಾಣಿಸುತ್ತಿಲ್ಲ. ಸಚಿವೆ ಸ್ಮೃತಿ ಇರಾನಿಯ ವಿದ್ಯಾರ್ಹತೆಯ ಕುರಿತು ಗೊಂದಲ, ನಿತಿನ್ ಗಡ್ಕರಿ ತನ್ನ ಕಾರು ಚಾಲಕನಿಗೆ ಕಂಪೆನಿಯ ನಿರ್ದೇಶಕ ಮಾಡಿದ ಹಗರಣ, ಕ್ರಿಕೆಟ್ ಮಂಡಳಿಯಲ್ಲಿ ಅರುಣ್ ಜೈಟ್ಲಿಯ ಹಗರದ ಕುರಿತು ಸುಭ್ರಹ್ಮಣ್ಯಮ್ ಸ್ವಾಮಿಗೆ ಕಣ್ಣು ಕಾಣಿಸುತ್ತಿಲ್ಲ. ಸದಾ ಅನಗತ್ಯ ಸುದ್ದಿಯಲ್ಲಿ ಇರಲು ಸ್ವಾಮಿ ಇನ್ನೋಂದು ನಾಟಕ ಆಡಲು ಹೊರಟಿದ್ದಾರೆ. ಈ ಮೊದಲು ಕೂಡ ರಾಹುಲ್ ಗಾಂಧಿಯ ಬಗ್ಗೆ ಮಾಡಿದ ಆರೋಪದಲ್ಲಿ ಕೂಡ ಸ್ವಾಮಿ ಅದನ್ನು ಸಾಬಿತು ಪಡಿಸಲು ಅಸಮರ್ಥರಾಗಿದ್ದರು. ಅದರಂತೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ವಿಚಾರದಲ್ಲಿ ಕೂಡ ಅವರಿಗೆ ನ್ಯಾಯಾಲಯದಲ್ಲಿ ಸೋಲು ಉಂಟಾಗಲಿದೆ.
ಸುಬ್ರಹ್ಮಣ್ಯಮ್ ಸ್ವಾಮಿ ಒರ್ವ ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿ ಎನ್ನುವುದು ಕಳೆದ ವರ್ಷ ಸಾಬೀತಾಗಿದೆ. ಮದುವೆಯ ಕಾರ್ಯಕ್ರಮಕ್ಕೆ ತೆರಳಿದ ಆತ ವಧುವಿಗೆ ಕಟ್ಟಲ್ಲಿ ಇಟ್ಟ ಮಾಂಗಲ್ಯ ಸರವನ್ನು ಆಶೀರ್ವದಿಸುವುದನ್ನು ಬಿಟ್ಟು ತಾನೇ ಅದನ್ನು ವಧುವಿಗೆ ಕಟ್ಟಲು ಹೋಗಿ ನಗೆ ಪಾಟಲಿಗೀಡಾಗಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಇಂತಹ ಸುಳ್ಳುಗಾರ ಅರೆಹುಚ್ಚನಿಂದ ಕಾಂಗ್ರೆಸ್ ಯಾವುದೇ ಪಾಠವನ್ನು ಕೂಡ ಕಲಿಯುವ ಅಗತ್ಯವಿಲ್ಲ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ಗಾಂಧಿ ಕುಟಂಬ ಹಾಗೂ ಕಾಂಗ್ರೆಸ್ ನಾಯಕರಾದ ಆಸ್ಕರ್ ಫೆರ್ನಾಂಡಿಸ್, ಸ್ಯಾಮ್ ಪಿತ್ರೊಡಾ ಇನ್ನಿತರರು ಷೇರುದಾರರಾಗಿದ್ದು ಯಾರು ಕೂಡ ಅದರಿಂದ ಒಂದು ನಯಾ ಪೈಸೆಯನ್ನು ಕೂಡ ಪಡೆದಿಲ್ಲ ಅಂದ ಮೇಲೆ,ಸುಮ್ಮನೆ ಬಿಜೆಪಿ ನಾಯಕರು ನ್ಯಾಯಾಂಗದ ಮೇಲೆ ಪ್ರಭಾವ ಬೀರಿ ಕಾಂಗ್ರೆಸ್ ನಾಯಕರ ಮೇಲೆ ದ್ವೇಷ ಸಾಧಿಸುವ ಕೆಲಸ ನಡೆಸುತ್ತಿದ್ದಾರೆ ಎಂದರು. ಆದರೆ ಅಧಿಕಾರ ಪಡೆಯುವುದಕ್ಕಾಗಿ ಸದಾ ಸುಳ್ಳುಗಳನ್ನೇ ಹೇಳಿ ಸ್ವರ್ಗ ತೋರಿಸಿದ ನರೇಂದ್ರ ಮೋದಿ ಇತರ ಬಿಜೆಪಿ ನಾಯಕರು ಜೈಲಿಗೆ ಹೋಗುವ ತನಕ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಎಮ್ ಎ ಗಫೂರ್, ನಗರಸಭಾಧ್ಯಕ್ಷ ಯುವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಕಾಂಗ್ರೆಸ್ ನಾಯಕರಾದ ಪ್ರಶಾಂತ್ ಪೂಜಾರಿ, ಪ್ರಶಾಂತ್ ಜತ್ತನ್ನ, ಯತೀಶ್ ಕರ್ಕೇರಾ, ಸುಜಯ ಪೂಜಾರಿ, ಸುನೀಲ್ ಡಿ ಬಂಗೇರಾ, ದೀನೇಶ್ ಪುತ್ರನ್, ರಮೇಶ್ ಕಾಂಚನ್ ಇತರರು ಉಪಸ್ಥಿತರಿದ್ದರು.