ಉಡುಪಿ ಮಠ ಮುತ್ತಿಗೆಗೆ ಪ್ರಯತ್ನಿಸಿದರೆ ಸೂಕ್ತ ಉತ್ತರ ನೀಡಲು ಹಿಂದೂ ಸಮಾಜ ಸಿದ್ದ: ಪುರಾಣಿಕ್
ಮಂಗಳೂರು: ವಿಚಾರವಾದಿಗಳು ಎನಿಸಿಕೊಂಡವರು ಉಡುಪಿ ಮಠಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರೆ ಹಿಂದೂ ಸಮಾಜ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ವಿಶ್ವ ಹಿಂದು ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಎಂ ಬಿ ಪುರಾಣಿಕ್ ಎಚ್ಚರಿಸಿದ್ದಾರೆ.
ಕದ್ರಿಯಲ್ಲಿರುವ ಜಿಲ್ಲಾ ವಿಎಚ್ ಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪೇಜಾವರ ಸ್ವಾಮೀಜಿ ನಡೆದಾಡುವ ಸಂತ ಎಂಬ ಮಾತಿನಿಂದಲೇ ದೇಶದಾದ್ಯಂತ ಮನೆಮಾತಾಗಿರುವ ಧಾರ್ಮಿಕ ನಾಯಕರಾಗಿದ್ದು ಅವರು ಮಾಡಿದ ಸಾಮಾಜಿಕ ಬದಲಾವಣೆಯ ಕ್ರಾಂತಿಗೆ ಮನ್ನಣೆ ದೊರೆತಿದೆ. ಹಿಂದುತ್ವದ ರಾಯಭಾರಿ ಎಂಬಂತೆ ಇರುವ ಅವರ ಮಾನವೀಯ ಗುಣಗಳು ಸಮಾಜದಲ್ಲಿ ಸದಾ ನಡೆಸಿಕೊಂಡು ಬಂದವರು ಪೇಜಾವರ ಶ್ರೀಗಳು.
ಇತ್ತೀಚೆಗೆ ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ಹಾಗೂ ಮಠದ ವಿರುದ್ದ ಕೆಟ್ಟದಾಗಿ ಮಾತನಾಡಿದ್ದು ವಿಎಚ್ ಪಿ ಮತ್ತು ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ.
ಪೇಜಾವರ ಶ್ರೀಗಳು ಸಮಾನತೆಯ ವಿರುದ್ದ ದನಿ ಎತ್ತಿದವರಾಗಿದ್ದು ಪ್ರತಿಯೊಬ್ಬರಿಗೆ ಸಮಾನವಾಗಿ ಕಾಣಬೇಕು ಎನ್ನವುದು ಅವರ ವಾದ. ಮುಸ್ಲಿಂ ಸಮುದಾಯ ಕೂಡ ಶ್ರೀಗಳ ಮೇಲೆ ವಿಶೇಷ ಗೌರವನ್ನು ಹೊಂದಿದೆ. ಸ್ವಾಮೀಜಿಗಳಿಗೆ ದಲಿತ ಸಮುದಾಯದ ಮೇಲೆ ವಿಶೇಷ ಗೌರವ ಇದ್ದು, ದಲಿತರು ಕೂಡ ಅವರನ್ನು ವಿಶೇಷವಾಗಿ ಪ್ರೀತಿಸುತ್ತಾರೆ. ದಲಿತರ ಮತ್ತು ಹಿಂದು ಸಮಾಜವು ಒಗ್ಗಟ್ಟಾಗುವುದನ್ನು ಬಯಸದ ಕೆಲವೊಂದು ಹಿತಾಸಕ್ತಿಗಳ ಪೇಜಾವರ ಶ್ರೀಗಳ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಲು ಹೊರಟಿದ್ದು ಅವರ ಪ್ರಯತ್ನ ಸಫಲಗೊಳ್ಳಲು ಹಿಂದೂ ಸಮಾಜ ಬಿಡುವುದಿಲ್ಲ ಎಂದರು.
ಸರಕಾರ ಸಂಘಟಕರ ವಿರುದ್ದ ಹಾಗೂ ಪೇಜಾವರ ಶ್ರೀಗಳ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ ವ್ಯಕ್ತಿಯ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದರು.
ಕೃಷ್ಣ ಮೂರ್ತಿ, ಶರಣ್ ಪಂಪ್ ವೆಲ್, ಗೋಪಾಲ್ ಕುತ್ತಾರ್, ವಾಸುದೇವ ಗೌಡ, ಶಿವಾನಂದ ಮೆಂಡನ್, ದಿನೇಶ್ ಪೈ ಇತರರು ಉಪಸ್ಥಿತಿರಿದ್ದರು.