ಉಡುಪಿ: ಕಳೆದ ಎರಡು ದಿನಗಳಿಂದ ಮಳೆಯ ಅಬ್ಬರ ಜೋರಾಗಿದ್ದು, ಕೆಲವಡೆಗಳಲ್ಲಿ ನೆರೆ ಭೀತಿ ಉಂಟಾಗಿದ್ದು, ಸಮುದ್ರ ಕೊರೆತ ಕಾಣಿಸಿಕೊಂಡಿದ್ದು, ಹಲವು ತೆಂಗಿನ ಮರಗಳು ಸಮುದ್ರ ಪಾಲಾಗಿದೆ.
ಮೂಳೂರು ಪಡುಕೆರೆ ಬಳಿ ಸಮುದ್ರ ಕೊರೆತ ಕಾಣಿಸಿಕೊಂಡಿದೆ. ಸಮುದ್ರ ತಡೆಗೋಡೆ 6ಕ್ಕೂ ಅಧಿಕ ತೆಂಗಿನ ಮರಗಳು ಸಮುದ್ರ ಪಾಲಾಗಿದೆ. ಮೂಳೂರು ಪಡುಕೆರೆ ಗಿರಿಜ ಪುತ್ರನ್, ಮುದ್ದಣ್ಣ ಶ್ರೀಯಾಸ್ ಸಮುದ್ರ ತೀರದಲ್ಲಿ ಕಡಲ್ಕೊರೆತ ಕಾಣಿಸಿಕೊಂಡಿದೆ.
ಸಮುದ್ರದ ಬೃಹತ್ ಗಾತ್ರದ ಅಲೆಗಳು ತೀರಕ್ಕೆ ಬಡಿಯುತಿದ್ದು, ಸ್ಥಳೀಯರು ಆತಂಕಿತರಾಗಿದ್ದಾರೆ. ತಡೆ ಗೋಡೆ ಹಾಕಲಾಗಿದ್ದ ಬೃಹತ್ ಬಂಡೆ ಕಲ್ಲುಗಳು ಅಲೆಗಳ ಹೊಡೆತಕ್ಕೆ ಸಮುದ್ರ ಪಾಲಾಗಿದೆ. ಈ ಬಾರಿ ಹಿಂದೆಂದಿಗಿಂತ ಜಾಸ್ತಿ ಸಮುದ್ರ ಕೊರೆತ ಕಾಣಿಸಿಕೊಂಡಿದೆ. ಜಿಲ್ಲಾಡಳಿತ ಹಾಗೂ ಸಂಬಂಧ ಪಟ್ಟ ಇಲಾಖೆ ತುರ್ತು ಪರಿಹಾರ ಕೈಗೊಂಡು ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪಡುಬಿದ್ರಿ, ಕಾಪು ಪರಿಸರದಲ್ಲಿ ಶುಕ್ರವಾರ ಮುಂಜಾನೆ ಗುಡುಗು ಸಹಿತ ಮಳೆಯಾ ಗಿದ್ದು, ಬೆಳಿಗ್ಗೆಯಿಂದಲೂ ಮಳೆ ಜೋರಾಗಿ ಸುರಿಯಿತು. ಮಳೆಯಿಂದಾಗಿ ಕೆಲವಡೆ ವಿದ್ಯುತ್ ಕೈಕೊಟ್ಟಿದ್ದು, ತಗ್ಗು ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ನಿಂತಿದ್ದು, ನೆರೆ ಉಂಟಾಗುವ ಭೀತಿ ಯನ್ನು ಸ್ಥಳೀಯರು ಎದುರಿಸುತ್ತಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರಾಭಿವೃದ್ಧಿ ಸಚಿವರಾದ ವಿನಯಕುಮಾರ್ ಸೊರಕೆ ಅವರು ಇಂದು ಕೋಡಿಬೆಂಗ್ರೆ ಪ್ರದೇಶ ವ್ಯಾಪ್ತಿಯ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ ಸಮುದ್ರ ಕೊರೆತ ಪ್ರದೇಶಗಳನ್ನು ವೀಕ್ಷಿಸಿದರು.
ಬಂದರು ಅಧಿಕಾರಿಗಳು ಸಮುದ್ರ ಕೊರೆತ ತಡೆಗೆ ಕೈಗೊಂಡ ಕ್ರಮಗಳ ಬಗ್ಗೆ ಸ್ಥಳದಲ್ಲಿದ್ದ ಅಧಿಕಾರಿಯಿಂದ ಮಾಹಿತಿ ಪಡೆದರು. ಈ ಸಂಬಂಧ ಕೈಗೊಳ್ಳಬೇಕಿದ್ದ ತುರ್ತು ಕಾಮಗಾರಿ ಸಂಬಂಧ ನಿರ್ದೇಶನಗಳನ್ನೂ ನೀಡಿದರು. ಸ್ಥಳೀಯರ ಅಹವಾಲುಗಳನ್ನು ಆಲಿಸಿದರು.