ಉಡುಪಿ : ಮಸೀದಿಗಳನ್ನು ಗ್ರಾಮಾಂತರದಲ್ಲಿ ತೆರೆಯಲು, ನಗರಗಳಲ್ಲಿ ಸದ್ಯಕ್ಕೆ ತೆರೆಯದಂತೆ ನಿರ್ದೇಶನ
ಉಡುಪಿ : ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿರುವ ಮಸೀದಿ ಗಳನ್ನು ಒಂದೆರೆಡು ದಿನಗಳಲ್ಲಿ ತೆರೆಯುವಂತೆ ಮತ್ತು ನಗರ ಹಾಗೂ ಜನನಿ ಬಿಡ ಪ್ರದೇಶಗಳಲ್ಲಿರುವ ಮಸೀದಿಗಳನ್ನು ಸದ್ಯಕ್ಕೆ ತೆರೆಯದಂತೆ ಆಯಾ ಮಸೀದಿ ಕಮಿಟಿಗಳಿಗೆ ಮಾರ್ಗದರ್ಶನ ಮಾಡುವ ಕುರಿತು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಇಂದು ಉಡುಪಿ ಜಾಮೀಯ ಮಸೀದಿ ಯಲ್ಲಿ ನಡೆದ ತುರ್ತುಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
ಕೋವಿಡ್-19 ಲಾಕ್ಡೌನ್ನಿಂದಾಗಿ ಮುಚ್ಚಲ್ಪಟ್ಟ ಮಸೀದಿಗಳನ್ನು ಪುನಾ ರಂಭಿಸುವಂತೆ ಸರಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಚರ್ಚಿಸಲು ಕರೆಯಲಾದ ಸಭೆಯಲ್ಲಿ ತೆಗೆದುಕೊಂಡ ಒಮ್ಮತದ ನಿರ್ಧಾರವನ್ನು ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ ಪ್ರಕಟಿಸಿದರು.
ಪ್ರಸಕ್ತ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಗ್ರಾಮೀಣ ಪ್ರದೇಶದಲ್ಲಿರುವ ಮಸೀದಿಗಳು ಒಂದೆರೆಡು ದಿನಗಳಲ್ಲಿ ತೆರಯಬಹುದಾಗಿದೆ. ಯಾವುದೇ ಕಾರಣಕ್ಕೂ ಶುಕ್ರವಾರದ ಜುಮಾ ನಮಾಝಿನೊಂದಿಗೆ ಮಸೀದಿಯನ್ನು ತೆರೆ ಯುವ ಕೆಲಸ ಮಾಡಬಾರದು. ಅಂದರೆ ಶುಕ್ರವಾರದ ಜುಮಾ ನಮಾಝಿಗಿಂತ ಕೆಲವು ದಿನಗಳ ಮೊದಲು ಅಥವಾ ಶನಿವಾರದ ನಂತರದ ದಿನಗಳಲ್ಲಿ ಮಸೀದಿ ಯನ್ನು ಪುನಾರಂಭಿಸಬಹುದಾಗಿದೆ.
ನಗರ, ರಾಷ್ಟ್ರೀಯ ಹೆದ್ದಾರಿ, ಪಟ್ಟಣ ಪ್ರದೇಶ, ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳ ಸಮೀಪ ಇರುವ ಮಸೀದಿಗಳನ್ನು ಸದ್ಯಕ್ಕೆ ತೆರೆಯದೆ, ಮುಂದೆ ಪರಿಸ್ಥಿತಿಯನ್ನು ಅವಲೋಕಿಸಿ ತೀರ್ಮಾನ ತೆಗೆದು ಕೊಳ್ಳಬೇಕು. ಜುಮಾ ನಮಾಝಿನಲ್ಲಿ ಜನ ಕಿಕ್ಕಿರಿದು ತುಂಬಿರುವುದರಿಂದ ಎಲ್ಲ ಮಸೀದಿಗಳಲ್ಲಿ ಒಂದಕ್ಕಿಂತ ಹೆಚ್ಚು ಜಮಾತ್ ಮಾಡುವುದು ಉತ್ತಮ ಎಂಬ ನಿರ್ದೇಶನವನ್ನು ಆಯಾ ಮಸೀದಿ ಕಮಿಟಿಗಳಿಗೆ ಸಭೆಯ ಮೂಲಕ ನೀಡಲಾಯಿತು.
ತಮ್ಮ ಮಸೀದಿಯಲ್ಲಿ ಯಾರಿಗೆ ನಮಾಜ್ ಮಾಡಲು ಅವಕಾಶ ನೀಡ ಬೇಕೆಂಬುದರ ಬಗ್ಗೆ ಆಯಾ ಕಮಿಟಿಗಳು ತೀರ್ಮಾನ ತೆಗೆದು ಕೊಳ್ಳಬೇಕು. ಈ ಎಲ್ಲ ಸಂದರ್ಭದಲ್ಲಿ ಸುರಕ್ಷಿತ ಅಂತರ ಸೇರಿದಂತೆ ಸರಕಾರ ವಿಧಿಸುವ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದೇ ವೇಳೆ ನಿಯಮ ಉಲ್ಲಂಘನೆಯಿಂದ ಸಂಭವಿಸುವ ಅನಾಹುತಗಳಿಗೆ ಆಯಾ ಜಮಾತ್ಗಳೇ ಹೊಣೆಗಾರರಾಗಿರುತ್ತದೆಂದು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲಾ, ಕೋಶಾಧಿಕಾರಿ ಇಕ್ಬಾಲ್ ಎಸ್. ಕಟಪಾಡಿ, ಒಕ್ಕೂಟದ ಉಪಾಧ್ಯಕ್ಷರಾದ ಅಶ್ಫಾಕ್ ಅಹ್ಮದ್ ಕಾರ್ಕಳ, ಶಾಬಾನ್ ಹಂಗ್ಲೂರು, ಮಾಜಿ ಅಧ್ಯಕ್ಷ ಎಂ.ಪಿ. ಮೊೈದಿನಬ್ಬ, ಪಿಎಫ್ಐ ಜಿಲ್ಲಾಧ್ಯಕ್ಷ ನಝೀರ್ ಅಂಬಾಗಿಲು, ಸಾಮಾಜಿಕ ಕಾರ್ಯಕರ್ತ ಇಕ್ಬಾಲ್ ಮನ್ನಾ, ಪ್ರಮುಖರಾದ ಅಬೂಬಕ್ಕರ್ ನೇಜಾರು, ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಇಸ್ಮಾಯಿಲ್ ಆತ್ರಾಡಿ, ಖತೀಬ್ ರಶೀದ್, ಮುಹಮ್ಮದ್ ಶೀಶ್, ಹುಸೇನ್ ಕೋಡಿಬೆಂಗ್ರೆ, ಹಸನ್ ಮಾವಡ್ ಬೈಂದೂರು, ಶಫೀ ಕಾಝಿ, ಇಬ್ರಾಹಿಂ ಕೋಟ, ಟಿ.ಎಂ.ಜಫರುಲ್ಲಾ ಹೂಡೆ, ಮುನಾಫ್ ಕಂಡ್ಲೂರು, ಅಝೀಝ್ ಉದ್ಯಾವರ, ಸಲಾವುದ್ದೀನ್ ಅಬ್ದುಲ್ಲಾ, ಮುಹಮ್ಮದ್ ಗೌಸ್ ಮೊದಲಾದವರು ಉಪಸ್ಥಿತರಿದ್ದರು.