ಉಡುಪಿ ಮಹಾ ಮಳೆಗೆ ಅಪಾರ ಹಾನಿ : ಬಡಗು ಪೇಟೆಯಲ್ಲಿ ಮನೆ ಕುಸಿತ, ಶಾಸಕ ರಘುಪತಿ ಭಟ್ ಭೇಟಿ
ಉಡುಪಿ: ಕೃಷ್ಣ ನಗರಿ ಉಡುಪಿಯಲ್ಲಿ ಸುರಿದ ಮಹಾಮಳೆಗೆ ಅಪಾರ ಹಾನಿ ಸಂಭವಿಸಿದ್ದು, ನೆರೆಯ ಪರಿಣಾಮ ಭಾನುವಾರ ಮಧ್ಯರಾತ್ರಿ ಬಡಗುಪೇಟೆ ಬಳಿ ಮನೆಯೊಂದು ಕುಸಿದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ನಗರ ಬಡಗುಪೇಟೆಯ ಗೋಪಾಲ ಕೃಷ್ಣ ಮತ್ತು ಸರಸ್ವತಿ ರಾವ್ ಅವರ ಮನೆಯ ನೆರೆಯಿಂದಾಗಿ ಶಿಥಿಲಗೊಂಡಿದ್ದರ ಪರಿಣಾಮ ಮನೆ ಸಂಪೂರ್ಣ ಕುಸಿದಿದೆ. ಘಟನೆಯಲ್ಲಿ ಅದೃಷ್ಠವಶಾತ್ ದಂಪತಿಗಳಿಬ್ಬರು ನೆರೆ ಬಂದ ಪರಿಣಾಮ ಪಕ್ಕದ ಮನೆಯಲ್ಲಿದ್ದುದರಿಂದ ಪ್ರಾಣ ಹಾನಿಯಾಗಿಲ್ಲ.
ನೆರೆಯಿಂದ ಹಾನಿಗೊಳಗಾದ ಕಲ್ಸಂಕ ಪ್ರದೇಶದ ಮನೆಗಳಿಗೆ ಉಡುಪಿ ಶಾಸಕ ರಘುಪತಿ ಭಟ್ ಬೇಟಿ ನೀಡಿ ನಷ್ಟದ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಶನಿವಾರ ಮತ್ತು ಭಾನುವಾರ ಸುರಿದ ಭಾರಿ ಮಳೆಯಿಂದಾಗಿ ಉಡುಪಿಯಲ್ಲಿ ಅಪಾರ ನಷ್ಟ ಸಂಭವಿಸಿದೆ. ಈಗಾಗಲೇ ಜಿಲ್ಲಾಡಳಿತ ನಷ್ಟದ ಅಂದಾಜು ಮಾಡುವ ಕೆಲಸವನ್ನು ಮಾಡುತ್ತಿದ್ದು ಶೀಘ್ರದಲ್ಲಿಯೇ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ಎನ್ ಡಿ ಆರ್ ಎಫ್ ನಿಯಮಾವಳಿಗಳ ಪ್ರಕಾರ ಅಗಸ್ಟ್ ತನಕ ಮಳೆಯಿಂದಾಗಿ ಬಿದ್ದ ಮನೆಗಳಿಗೆ ನಷ್ಟ ಪರಿಹಾರ ನೀಡಲು ಸರಕಾರಕ್ಕೆ ಅವಕಾಶವಿದ್ದು ಈ ಘಟನೆ ನಡೆಸಿದರುವುದು ಸಪ್ಟೆಂಬರ್ ತಿಂಗಳಿನಲ್ಲಿ ನಡೆದಿರುವುದರಿಂದ ಈ ಬಗ್ಗೆ ನಾಳೆ ಅಧೀವೇಶನದ ವೇಳೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ನೆರೆಯಿಂದಾಗಿ ಅಂಗಡಿಗಳಲ್ಲಿ ಸಾಮಾನುಗಳಿಗೆ ಕೋಟ್ಯಾಂತರ ನಷ್ಟ ಸಂಭವಿಸಿದ್ದು, ಅದಕ್ಕೆ ಯಾವ ರೀತಿ ಪರಿಹಾರ ನೀಡಲು ಸಾಧ್ಯವಿದೆ ಎನ್ನುವುದನ್ನು ಪರಿಶೀಲಿಸಲಾಗುವುದು ಎಂದರು.