ಉಡುಪಿ: ಮುಸ್ಲಿಂ ಧರ್ಮದ ವಿರುದ್ಧ X ನಲ್ಲಿ ದ್ವೇಷಕಾರಿ ಟ್ವೀಟ್: ವೈದ್ಯನ ವಿರುದ್ಧ ಪ್ರಕರಣ ದಾಖಲು
ಉಡುಪಿ: ಸಾಮಾಜಿಕ ಜಾಲತಾಣ X ನಲ್ಲಿ ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಾಕಾರಿ ಮತ್ತು ಪ್ರಚೋದನಾಕಾರಿಯಾಗಿ ಕಾಮೆಂಟ್ ಮಾಡಿದ ಆರೋಪದಡಿ ಉಡುಪಿಯ ವೈದ್ಯ ಡಾ.ಕೀರ್ತನ್ ಉಪಾಧ್ಯ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
ಲ್ಯಾಪ್ರೋಸ್ಕೋಪಿ ಶಸ್ತ್ರ ಚಿಕಿತ್ಸಾ ತಜ್ಞ ಡಾ. ಕೀರ್ತನ್ ಉಪಾಧ್ಯ ಲಾನ್ಲಿ ಸ್ಟ್ರೇಂಜರ್ ಎಂಬ ಹೆಸರಿನ ಎಕ್ಸ್ ಖಾತೆಯನ್ನು ಹೊಂದಿದ್ದು, ಜು.13ರಂದು ಎಕ್ಸ್ನಲ್ಲಿ ಅಭಿ ಆ್ಯಂಡ್ ನೀಯು ಖಾತೆಯಿಂದ ‘ಈ ಜಗತ್ತಿನಿಂದ ನೀವು ಏನಾದರೂ ಒಂದನ್ನು ಇಲ್ಲವಾಗಿಸಲು ಬಯಸುವುದಾದರೆ ಅದು ಯಾವುದು?’ ಎಂಬುದಾಗಿ ಪ್ರಶ್ನಿಸ ಲಾಗಿತ್ತು. ಅದಕ್ಕೆ ಡಾ.ಉಪಾಧ್ಯ ತಮ್ಮ ಲೋನ್ಲಿ ಸ್ಟ್ರೇಂಜರ್ ಖಾತೆಯಿಂದ ‘ಮುಸ್ಲಿಂ ಕಮ್ಯುನಿಟಿ’ ಎಂದು ಪ್ರಚೋದನಕಾರಿಯಾಗಿ ಉತ್ತರಿಸಿದ್ದರು. ಇದರ ಸ್ಕ್ರೀನ್ಶಾಟ್ ಸಾಮಾಜಿಕ ತಾಣಗಳಲ್ಲಿ ವೈರಲಾಗಿ ದೊಡ್ಡ ವಿವಾದ ಸೃಷ್ಠಿಯಾಗಿದೆ.
ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಇದರ ಉಸ್ತುವಾರಿ ಪೊಲೀಸ್ ಉಪನಿರೀಕ್ಷಕ (ನಿಸ್ತಂತು) ಅಜ್ಮಲ್ ಇಬ್ರಾಹಿಂ ಇ.ಎ. ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಭಾರತೀಯ ನಾಗರಿಕ ಸಂಹಿತೆ ಕಲಂ 196, 353ರಂತೆ ಪ್ರಕರಣ ದಾಖಲಾಗಿದೆ.
ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಾಕಾರಿ ಮತ್ತು ಪ್ರಚೋದನಾಕಾರಿ ಯಾಗಿ ಕಾಮೆಂಟ್ ಮಾಡುವ ಮೂಲಕ ಧರ್ಮ- ಧರ್ಮಗಳ ನಡುವೆ ದ್ವೇಷವನ್ನುಂಟು ಮಾಡಿ, ಕೋಮು ಸೌಹಾರ್ದತೆಗೆ ಧಕ್ಕೆ ತರಲು ಪ್ರಯತ್ನಿಸಿದ ಡಾ.ಉಪಾಧ್ಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಲಾಗಿದೆ