ಉಡುಪಿ : ಕರ್ನಾಟಕ ಈಜು ಸಂಸ್ಥೆ ಹಾಗೂ ಉಡುಪಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಜಂಟಿ ಆಶ್ರಯದಲ್ಲಿ ಉಡುಪಿ ಅಜ್ಜರಕಾಡು ಈಜುಕೊಳದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ 16ನೆ ರಾಜ್ಯ ಶಾರ್ಟ್ ಕೋರ್ಸ್ ಈಜು ಚಾಂಪಿಯನ್‌ಶಿಪ್‌ನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ ಇಂದು ಉದ್ಘಾಟಿಸಿದರು.
ಈಜು ಆರೋಗ್ಯ ಕಾಪಾಡುವಲ್ಲಿ ಅತ್ಯಂತ ಉತ್ತಮವಾದ ಕ್ರೀಡೆಯಾಗಿದೆ. 45 ನಿಮಿಷ ಈಜುವುದು ಎರಡು ಕಿ.ಮೀ. ನಡೆಯುವುದಕ್ಕೆ ಸಮಾನವಾಗಿದೆ. ಆದುದರಿಂದ ಕ್ರೀಡೆಯಲ್ಲಿ ಮಕ್ಕಳಿಗೆ ಹೆಚ್ಚಿನ ಆಸಕ್ತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ಎಸ್ಪಿ ಅಣ್ಣಾಮಲೈ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ಮಾತನಾಡಿ, ಈ ಈಜುಕೊಳಕ್ಕೆ ಗ್ಯಾಲರಿ ಹಾಗೂ ಮೇಲ್ಛಾವಣಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಅದಕ್ಕೆ ಅವಶ್ಯವಾದ ಆರ್ಥಿಕ ನೆರವನ್ನು ಒದಗಿಸಲಾಗುವುದು. ಅದೇ ರೀತಿ ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಶನ್ ಇದಕ್ಕೆ ಬೇಕಾದ ತಾಂತ್ರಿಕ ಹಾಗೂ ಆರ್ಥಿಕ ಸಹಾಯವನ್ನು ಒದಗಿಸಬೇಕು ಎಂದರು. ಮಲ್ಪೆ ಬೀಚ್‌ನಲ್ಲಿ ಈಜು ಸ್ಪರ್ಧೆಯನ್ನು ಏರ್ಪಡಿಸಲು ಉದ್ದೇಶಿಸಲಾಗಿದೆ. ಅದೇ ರೀತಿ ಮಕ್ಕಳಿಗೆ ಸಮುದ್ರದಲ್ಲಿ ಜೀವ ರಕ್ಷಣೆ ಮಾಡುವ ಕೌಶಲ್ಯದ ಕುರಿತು ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ಭಾರತ ಈಜು ಒಕ್ಕೂಟದ ಉಪಾಧ್ಯಕ್ಷ ವಿಜಯ್ ರಾಘವನ್, ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಶಿಂದಿಯಾ, ಸದಸ್ಯ ಜಯತೀರ್ಥ ರಾವ್, ಡೈವಿಂಗ್ ಕೋಚ್ ಬಾಲರಾಜ್, ರಕ್ಷತ್ ಜಗದಾಳೆ ಉಪಸ್ಥಿತರಿದ್ದರು. ಅಸೋಸಿಯೇಶನ್ ಅಧ್ಯಕ್ಷ ನೀಲ ಕಾಂತ್ ರಾವ್ ಜಗದಾಳೆ ಸ್ವಾಗತಿ ಸಿದರು. ಜಂಟಿ ಕಾರ್ಯದರ್ಶಿ ಎಂ.ಸತೀಶ್ ಕುಮಾರ್ ವಂದಿಸಿದರು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಉಡುಪಿ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸ್ಪರ್ಧೆಯಲ್ಲಿ ರಾಜ್ಯದ ಸುಮಾರು 400 ಸ್ಪರ್ಧಾಳುಗಳು ಭಾಗವಹಿಸಿದ್ದಾರೆ.