ಉಡುಪಿ ವಾದಿರಾಜ ರಸ್ತೆಯಲ್ಲಿ ನಕಲಿ ನೋಟು ಎಸೆದ ಪ್ರಕರಣ – ವ್ಯಕ್ತಿಯ ಗುರುತು ಪತ್ತೆ!

Spread the love

ಉಡುಪಿ ವಾದಿರಾಜ ರಸ್ತೆಯಲ್ಲಿ ನಕಲಿ ನೋಟು ಎಸೆದ ಪ್ರಕರಣ – ವ್ಯಕ್ತಿಯ ಗುರುತು ಪತ್ತೆ!

ಉಡುಪಿ: ನಗರದ ವಾದಿರಾಜ ರಸ್ತೆಯ ಶುಭಾಂಗ ಅಪಾರ್ಟ್ ಮೆಂಟ್ ಬಳಿ ಎ.13ರಂದು ಬೆಳಗ್ಗೆ ನಕಲಿ ನೋಟುಗಳನ್ನು ರಸ್ತೆಯಲ್ಲಿ ಎಸೆದು ಹೋಗುವ ಮೂಲಕ ಆತಂಕ ಸೃಷ್ಠಿಸಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ಉಡುಪಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ನಕಲಿ ನೋಟುಗಳನ್ನು ಎಸೆದಿರುವವರನ್ನು ಸ್ಥಳೀಯ ನಿವಾಸಿ, 14ವರ್ಷ ವಯಸ್ಸಿನ ಎಂಟನೆ ತರಗತಿಯ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಅಪ್ರಾಪ್ತ ಬಾಲಕ ಎ.13 ರಂದು ನಗರದ ವಾದಿರಾಜ ಮಾರ್ಗದಲ್ಲಿ ಐನೂರು ಮತ್ತು ಎರಡು ಸಾವಿರದ ನಕಲಿ ನೋಟುಗಳನ್ನು ಎಸೆದು ಹೋಗಿದ್ದನು. ಈಗಾಗಲೇ ಕೋವಿಡ್ ಆತಂಕದಲ್ಲಿದ್ದ ಜನರು ಈ ಕೃತ್ಯದಿಂದ ಬೆಚ್ಚಿಬಿದ್ದಿದ್ದರು. ಕೊರೋನಾ ಹರಡಲು ಹೀಗೆ ಮಾಡಲಾಗುತ್ತಿದೆ ಎಂದು ಭಾವಿಸಿದ್ದರು

ಮಧುಕರ ಮುದ್ರಾಡಿ ಎಂಬವರು ಎ.13ರಂದು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಆವರ ದೂರಿನ ಮೇರೆಗೆ ಸ್ಥಳೀಯ ಮನೆಗಳ ಸಿಸಿಟಿವಿ ಫೂಟೇಜ್ ನಿಂದ ಬಾಲಕನನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಚಾ ಹುಡಿ ತರೋದಾಗಿ ಮನೆಯಿಂದ ಹೊರ ಬಂದಿದ್ದ ಬಾಲಕ ತನ್ನ ಬಳಿಯಲ್ಲಿ ಆಟವಾಡಲು ಬಳಸುವ ನಕಲಿ ನೋಟುಗಳನ್ನು ರಸ್ತೆಯಲ್ಲಿ ಎಸೆದಿರುವುದಾಗಿ ಯಾವುದೇ ದುರುದ್ದೇಶದಿಂದ ನೋಟು ಎಸೆದಿಲ್ಲ ಎಂದು ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾನೆ. ನಗರ ಠಾಣೆಯ ಪೊಲೀಸರು ಬಾಲಕನನ್ನು ವಶಕ್ಕೆ ಪಡೆಯದೆ ಬುದ್ದಿವಾದ ಹೇಳಿ ವಾಪಾಸು ಕಳುಹಿಸಿದ್ದಾರೆ. ಇದರೊಂದಿಗೆ ಆತಂಕ ಮೂಡಿಸಿದ್ದ ಘಟನೆಗೆ ಪೊಲೀಸರು ತೆರೆ ಎಳೆದಿದ್ದಾರೆ.


Spread the love