ಉಡುಪಿ ವಿಷನ್ 2025- ಜಿಲ್ಲೆಯ ಸಮಗ್ರ ಅಭಿವೃದ್ಧಿಗೊಂದು ಮುನ್ನೋಟ
ಉಡುಪಿ : ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡಾ ಟಿ.ಎಮ್.ಪೈ ಹಾಲ್-2 ನಲ್ಲಿ ನಡೆದ ವಿಷನ್ 2025 ಕಾರ್ಯಾಗಾರದಲ್ಲಿ ಐದು ವಿಷಯಗಳ ಬಗ್ಗೆ ಗುಂಪು ರಚಿಸಿ ಸವಿವರ ಚರ್ಚೆ ನಡೆಯಿತು. ಕರ್ನಾಟಕ 2025 ಸ್ವರೂಪ ದರ್ಶನದ ದಾಖಲೆಯಲ್ಲಿ ಮುಂದಿನ ಏಳು ವರ್ಷಗಳಲ್ಲಿ ಕರ್ನಾಟಕಕ್ಕೆ ಆಡಳಿತ ತಂತ್ರವನ್ನು ಒದಗಿಸುವ ಉದ್ದೇಶ ಹೊಂದಿದ್ದು ಪ್ರಾದೇಶಿಕ ಹಾಗೂ ಜಿಲ್ಲಾ ಅಭಿವೃದ್ಧಿಗೆ ಸ್ಪಷ್ಟ ಮುನ್ನುಡಿಯಾಗಲಿದೆ.
ಎಲ್ಲ ಗುಂಪುಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡ ಜಿಲ್ಲಾ ಉಸ್ತುವಾರಿ ಸಚಿವರು ಇ ಗವರ್ನೆನ್ಸ್É್ಸ ಹಾಗೂ ಕಂದಾಯ ಇಲಾಖೆ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳನ್ನು ತಾಂತ್ರಿಕವಾಗಿ ಹಾಗೂ ಮಾನವಸಂಪನ್ಮೂಲಗಳನ್ನು ನೀಡಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು. ನೇರವಾಗಿ ಫಲಾನುಭವಿಗಳೊಂದಿಗೆ ಸಂಪರ್ಕ ಹೊಂದುವ ಅತಿ ಪ್ರಮುಖ ಇಲಾಖೆಗಳಾಗಿದ್ದು ಇವುಗಳನ್ನು ಜನಸ್ನೇಹಿಯನ್ನಾಗಿಸುವ ಅಗತ್ಯವನ್ನು ಸಚಿವರು ಪ್ರತಿಪಾದಿಸಿದರು.
ಕಾರ್ಯಕ್ಷೇತ್ರ- ಶಿಕ್ಷಣ, ಸಾಮಾಜಿಕ ನ್ಯಾಯ ಮತ್ತು ಆರೋಗ್ಯದ ಕುರಿತ ಚರ್ಚೆಯಲ್ಲಿ ಶಿಕ್ಷಣದ ಕುರಿತು ನಡೆದ ಚರ್ಚೆಯಲ್ಲಿ ಮಕ್ಕಳಿಗೆ ಉತ್ತಮ ಉತ್ತಮ ಜ್ಞಾನ, ಕೌಶಲ್ಯ ಭರಿತ ಶಿಕ್ಷಣವನ್ನು ನೀಡಬೇಕು ಮತ್ತು ಪ್ರತಿ ಪಂಚಾಯತ್‍ನಲ್ಲಿ 1 ನೇ ತರಗತಿಯಿಂದ ಪಿಯುಸಿವರೆಗಿನÀ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಬೇಕು, ಪ್ರಾಥಮಿಕ ಶಿಕ್ಷಣದಲ್ಲಿ ಯಾವುದಾದರೂ ಒಂದು ಭಾಷೆಯ ಶಿಕ್ಷಣಕ್ಕೆ ಆದ್ಯತೆ ನೀಡಬೇಕು, ಆದಷ್ಟು ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಗಮನ ನೀಡಬೇಕು ಮತ್ತು ಖಾಸಗಿ ಶಾಲೆಗಳಿಗೆ ಸರಕಾರ ಅನುಮತಿ ನೀಡುವುದನ್ನು ನಿಲ್ಲಿಸಬೇಕು, ಹಾಗೂ ಪ್ರಾಥಮಿಕ ಶಿಕ್ಷಣದಿಂದ ಪಿ.ಯು.ಸಿ ತನಕದ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು. ಹೆಚ್ಚಿನ ತಂತ್ರಜ್ಞಾನವನ್ನು ಶಾಲೆಗಳಲ್ಲಿ ಬಳಸಬೇಕು ಮತ್ತು ಇ-ಲೈಬ್ರೆರಿ, ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣವನ್ನು ಸರಕಾರಿ ಶಾಲೆಯಲ್ಲಿ ನೀಡಿ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಚರ್ಚೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಜಿಲ್ಲೆಯ ಹಿಂದುಳಿದ ವರ್ಗದ, ಕುಗ್ರಾಮದ ಹಲವು ವಿದ್ಯಾರ್ಥಿಗಳು ಶಾಲೆಯ ಮುಖವನ್ನೇ ನೋಡಿರುವುದಿಲ್ಲ; ಅವರು ಶಾಲೆಗೆ ಬರುವಂತೆ ನೋಡಿಕೊಳ್ಳಬೇಕು, ಅವರ ಹೆತ್ತವರೊಂದಿಗೆ ಸಮಾಲೋಚನೆ ನಡೆಸಿ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಮನವೊಲಿಸುವ ಕಾರ್ಯವನ್ನು ಕೈಗೊಳ್ಳಬೇಕು ಎಂದು ಸಭೆಯಲ್ಲಿ ಅನಿಸಿಕೆ ವ್ಯಕ್ತವಾಯಿತು.
ಆರೋಗ್ಯದ ಕುರಿತು ನಡೆದ ಚರ್ಚೆಯಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೇವೆಯನ್ನು ನೀಡಬೇಕು, ಆಂಬುಲೆನ್ಸ್ ನೀಡಬೇಕು. ಲೈಂಗಿಕ ಶಿಕ್ಷಣದ ಕುರಿತು ಮಕ್ಕಳಿಗೆ ಸರಿಯಾಗಿ ಮಾಹಿತಿಯನ್ನು ನೀಡಬೇಕು. ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜನ್ನು ಸ್ಥಾಪಿಸುವಂತಾಗಬೇಕು ಹಾಗೂ ಪ್ರತಿ ಆಸ್ಪತ್ರೆಯಲ್ಲಿ ಎಂ.ಬಿ.ಬಿ.ಎಸ್ ಓದಿದ ವೈದ್ಯರು ಕಡ್ಡಾಯವಾಗಿ ಆಸ್ಪತ್ರೆಯಲ್ಲಿ 24 ಗಂಟೆ ಸೇವೆ ಸಲ್ಲಿಸುವಂತಾಗಬೇಕು, ಹಾಗೂ ಖಾಲಿ ಇರುವ ನರ್ಸ್ ಹುದ್ದೆಯನ್ನು ಭರ್ತಿಗೊಳಿಸಬೇಕೆಂಬ ಬೇಡಿಕೆಗಳು ಬಂದವು.
ವಿಷನ್ 2025 ಕಾರ್ಯಾಗಾರದಲ್ಲಿ ಕೈಗಾರಿಕೆಗಳ ಅಭಿವೃದ್ದಿಗಾಗಿ, ಕಚ್ಚಾ ವಸ್ತು ಆಧಾರಿತ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಕೈಗಾರಿಕೆಗಳನ್ನು ಸ್ಥಾಪಿಸುವ ವಿಧಾನಗಳನ್ನು ಸರಳೀಕರಿಸಬೇಕು. ತಾಂತ್ರಿಕ ಆಧಾರಿತ ಮೂಲ ಸೌಕರ್ಯಗಳನ್ನು ಹೆಬ್ರಿ, ಪೆರ್ಡೂರು, ಬ್ರಹ್ಮಾವರ, ಬೈಂದೂರು ಮುಂತಾದ ಕೈಗಾರಿಕಾ ಪ್ರದೇಶಗಳಿಗೆ ಒಳಪಡಿಸುವಂತೆ ಪ್ರಸ್ತಾಪಿಸಲಾಯಿತು.
ಆಹಾರ ಉತ್ಪನ್ನ ಪಾರ್ಕ್ ರಚಿಸಬೇಕು, ಸಂಪನ್ಮೂಲ ಆಧಾರಿತ ಮೀನು ಸಂಸ್ಕರಣಾ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕು; ಈ ಸಂಬಂದ ಕಾರ್ಪೋರೇಟ್ ಕ್ಷೇತ್ರದಿಂದ ತರಬೇತಿ ನೀಡುವಿಕೆ ಯಿಂದ ಉದ್ಯಮಶೀಲತೆಯನ್ನು ಬೆಂಬಲಿಸಬೇಕು ಜೊತೆಗೆ ಉನ್ನತ ತಂತ್ರಜ್ಞಾನದ ಬಗ್ಗೆ ಜಾಗೃತಿ ಮೂಡಿಸಬೇಕು ಮತ್ತು ಮಾರ್ಗದರ್ಶನವು ಪ್ರಮುಖ ಕಾರ್ಪೋರೇಟ್ ಕ್ಷೇತ್ರದಿಂದ ಲಭ್ಯವಿರಬೇಕು ಎಂದು ಕೌಶಲ್ಯ ಅಭಿವೃದ್ದಿಗೆ ಒತ್ತುಕೊಡಿ ಎಂಬ ಒತ್ತಾಯ ಚರ್ಚೆಯಲ್ಲಿ ವ್ಯಕ್ತವಾಯಿತು.
ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟ ಮತ್ತು ರಾಜ್ಯ ಮಟ್ಟದ ಅಪ್ಲೀಕೇಶನ್(ಆ್ಯಪ್)ಅನ್ನು ಸರ್ಕಾರದಿಂದ ಅಭಿವೃದ್ದಿ ಪಡಿಸಬೇಕು. ತಾಂತ್ರಿಕತೆ ಅಭಿವೃದ್ಧಿಗೆ ಐಟಿ ಪಾರ್ಕ್ ಸಣ್ಣ ಪ್ರಮಾಣದಲ್ಲಿ ಹಾಗೂ ದೊಡ್ಡ ಪ್ರಮಾಣದಲ್ಲಿ ಪ್ರಾರಂಭಿಸುವುದು, ಸಾರ್ವಜನಿಕರಿಗೆ ವೈ-ಫೈ ಸೇವೆಯನ್ನು ಒದಗಿಸಬೇಕು ಬೇಡಿಕೆ ಬಂತು.
ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಹೆಚ್ಚಿನ ಮೂಲಸೌಕರ್ಯ ಕೊಡಿ; ಅವರಿಗೆ ತಂತ್ರಜ್ಞಾನದ ತರಬೇತಿಯನ್ನು ನೀಡಿ ಪೊಲೀಸ್ ಠಾಣೆಯನ್ನು ಜನಸ್ನೇಹಿಯನ್ನಾಗಿಸಿ ಎಂಬ ಅಭಿಪ್ರಾಯ. ತ್ವರಿತ ನ್ಯಾಯದಾನಕ್ಕೆ ಇ ತಂತ್ರಜ್ಞಾನದ ನೆರವು ಪಡೆಯಿರಿ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಗ್ರಾಮೀಣಾಭಿವೃದ್ಧಿಯಡಿ ನೀರು, ನೈರ್ಮಲ್ಯ, ರಸ್ತೆ ಸಂಪರ್ಕಕ್ಕೆ ಒತ್ತು ನೀಡಿ. ನಗರ ಮತ್ತು ಗ್ರಾಮೀಣ ಅಸಮತೋಲನ ನಿವಾರಣೆಗೆ ಕ್ರಮಕೈಗೊಳ್ಳಿ, ಬ್ಯಾಂಕಿಂಗ್ ನೆರವು ವೈಯಕ್ತಿಕ ನೆಲೆಯಲ್ಲಿ ಲಭ್ಯವಾಗಿಸಬೇಕು. ಮೀನುಗಾರಿಕೆ ನಿರ್ವಹಣೆಗೆ ಮೀನು ಉತ್ಪತ್ತಿಯನ್ನು ಸಂರಕ್ಷಿಸಿ. ಘನ ತ್ಯಾಜ್ಯ ವಿಲೇಗೆ ಮೂಲದಲ್ಲೇ ಪರಿಹಾರ ದೊರೆಯಲಿ. ಯುಜಿಡಿ ಕನೆಕ್ಷಿವಿಟಿ ಉತ್ತಮ ಗುಣಮಟ್ಟವನ್ನು ಹೊಂದಿರಲಿ ಎಂದು ಗುಂಪಿನಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಕೃಷಿ ಪ್ರಸಕ್ತ ಸಂದರ್ಭದಲ್ಲಿ ಹಲವು ಸವಾಲು, ಸಂದಿಗ್ಧತೆಯನ್ನು ಎದುರಿಸುತ್ತಿದ್ದು ಇರುವ ಯೋಜನೆಗಳ ಸದ್ಬಳಕೆ ಅತ್ಯಗತ್ಯ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.
ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು, ಚಿಂತಕರು, ಬುದ್ಧಿಜೀವಿಗಳು, ಶಿಕ್ಷಣ ತಜ್ಞರು, ವಿವಿಧ ಸಮುದಾಯಗಳ ಮುಖಂಡರು ಗುಂಪು ಚರ್ಚೆಯಲ್ಲಿ ಪಾಲ್ಗೊಂಡರು. ವಿಷನ್ ಡಾಕ್ಯುಮೆಂಟ್ ಅಭಿವೃದ್ಧಿ ಯೋಜನೆಗಳ ರೂಪುರೇಷೆಗೆ ಮಾರ್ಗದರ್ಶಿ ಸೂತ್ರವಾಗಲಿದೆ ಎಂದು ಕಾರ್ಯಾಗಾರದ ಸಮಾರೋಪದಲ್ಲಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹೇಳಿದರು. ಸಿಇಒ ಶಿವಾನಂದ ಕಾಪಶಿ ಧನ್ಯವಾದ ಸಲ್ಲಿಸಿದರು.
ಪೊಲೀಸ್ ವ್ಯವಸ್ಥೆ ಆಧುನೀಕರಣದೊಂದಿಗೆ ಸುಧಾರಣೆಯಾಗಲಿ
ಉಡುಪಿ: 2025 ರ ವೇಳಗೆ ಪೊಲೀಸ್ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಗಳೊಂದಿಗೆ, ಆಧುನೀಕರಣಗೊಳ್ಳಬೇಕು ಎಂಬ ಅಭಿಪ್ರಾಯ, ಬುಧವಾರ ಮಣಿಪಾಲದಲ್ಲಿ ನಡೆದ ವಿಷನ್ 2025 ರ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆ ಕುರಿತು, ಪ್ರೊ. ಬಾಲಕೃಷ್ಣ ಮದ್ದೋಡಿ ಮಾತನಾಡಿ, ವಿದೇಶಗಳಲ್ಲಿ 1 ಮಿಲಿಯನ್ ನಾಗರೀಕರಿಗೆ 150 ರಿಂದ 200 ಮಂದಿ ಪೊಲೀಸ್ ಸಿಬ್ಬಂದಿ ಇದ್ದು, ರಾಜ್ಯದಲ್ಲಿ ಈ ಪ್ರಮಾಣ 15 ರಷ್ಠಿದೆ. ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಸಿಬ್ಬಂದಿ ನೇಮಕಾತಿ ನಡೆಯಬೇಕು, ಉಡುಪಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ 60% ಮಂದಿ ಹೊರ ಜಿಲ್ಲೆಯವರಾಗಿದ್ದು, ಅವರು ವರ್ಗಾವಣೆ ಕೋರಿ ತಮ್ಮ ಜಿಲ್ಲೆಗಳಿಗೆ ಹೋಗುವುದರಿಂದ ಜಿಲ್ಲೆಯಲ್ಲಿ ಪೊಲೀಸ್ ಪ್ರಮಾಣ ಕಡಿಮೆಯಾಗಲಿದೆ, ನೇಮಕಗೊಂಡ ಕನಿಷ್ಠ 15 ವರ್ಷಗಳು ಜಿಲ್ಲೆಯಲ್ಲಿಯೇ ಸೇವೆ ಸಲ್ಲಿಸಬೇಕು ಎಂಬ ನಿಯಮ ಅಳವಡಿಸಬೇಕು, ಪೊಲೀಸರಿಗೆ ಹಾಗೂ ಪೊಲೀಸ್ ಸ್ಟೇಶನ್‍ಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ಸೈಬರ್ ಅಪರಾಧ ತಡೆಗಟ್ಟಲು ಪ್ರತಿ ಪ್ರತ್ಯೇಕ ಸೈಬರ್ ಠಾಣೆ , ಪ್ರತಿ ತಾಲೂಕಿಗೆ ಒಂದು ಮಹಿಳಾ ಪೊಲೀಸ್ ಠಾಣೆ ಇರಬೇಕು, 10 ವರ್ಷಕ್ಕೋಮ್ಮೆ ಪೊಲೀಸ್ ಬಲ ಹೆಚ್ಚಿಸಬೇಕು, ಪೋಲೀಸ್ ಐಟಿ ವಿಭಾಗ ಮತ್ತು ಕೋರ್ಟ್ ನಡುವೆ ಇ ಕನೆಕ್ಟ್ ಪ್ರಾರಂಭಿಸಬೇಕು, ಪೊಲೀಸರಿಗೆ ಆಧುನಿಕ ಶಸ್ತ್ರಾಸ್ತ್ರಗಳು ಹಾಗೂ ವಾಹನಗಳನ್ನು ಒಗದಿಸಬೇಕು, ಆಯಕಟ್ಟಿನ ಜಾಗಗಳಲ್ಲಿ ಸಿಸಿಟಿವಿ ಅಳವಡಿಸಬೇಕು, ಎಲ್ಲಾ ವಲಯಗಳಲ್ಲಿ ಎಫ್‍ಎಸ್‍ಎಲ್ ಸೌಲಭ್ಯ ಒದಗಿಸಬೇಕು, ಏಕರೂಪ ಪೊಲೀಸ್ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಹೇಳಿದರು.
ಕಾನೂನು ಸುವ್ಯವಸ್ಥೆಗೆ ಸಂಬಂಧಪಟ್ಟಂತೆ, ಹೆಚ್ಚುವರಿ ನ್ಯಾಯಾಲಯಗಳ ಹಾಗೂ ಸಿಬ್ಬಂದಿಗಳ ನಿಯೋಜನೆ ಆಗಬೇಕು, ಸಣ್ಣ ಪುಟ್ಟ ಪ್ರಕರಣಗಳು ಶೀಘ್ರ ವಿಲೇವಾರಿ ಆಗಬೇಕು, ಇಂಗ್ಲೆಂಡ್ ಮಾದರಿಯ ಜ್ಯೂರಿ ವ್ಯವಸ್ಥೆ ಅಳವಡಿಕೆಯಾಗಬೇಕು, ತಾಲೂಕಿಗೆ ಒಂದು ಕೋರ್ಟ್ ಸ್ಥಾಪನೆಯಾಗಬೇಕು, ದಂಡ ವಿಧಿಸುವ ಪ್ರಮಾಣ ಅಧಿಕವಾಗಬೇಕು, ಎಲ್ಲಾ ವಾಹನಗಳಿಗೆ ಜಿಪಿಎಸ್ ಅಳವಡಿಸುವುದರಿಂದ ಅಪಘಾತ ಪ್ರಕರಣಗಳ ಪತ್ತೆ ಸುಲಭವಾಗಲಿದೆ, ಅಪರಾಧಿಗಳಿಗಾಗಿ ಜಿಲ್ಲೆಗೆ ಒಂದರಂತೆ ಪುರ್ನವಸತಿ ಕೇಂದ್ರ ಆರಂಭವಾಗಬೇಕು, ನ್ಯಾಯಾಂಗ ವಿಚಾರಣೆ, ಪ್ರಕರಣಗಳ ತನಿಖೆಯಲ್ಲಿ ಮಾಧ್ಯಮಗಳಿಗೆ ಸ್ಪಷ್ಟ ನಿರ್ಬಂಧÀ ಹಾಕಬೇಕು, ಸಾಧ್ಯವಾದಲ್ಲಿ ಪೊಲೀಸ್ ಠಾಣೆಗಳ ಹೆಸರನ್ನು ತೆರದ ಬಾಗಿಲು ಅಥವಾ ಸಂತಸದ ಮನೆ ಎಂದು ಬದಲಾಯಿಸಿ ಎಂದು ಪ್ರೊ.ಮದ್ದೋಡಿ ಹೇಳಿದರು.
ನಂತರ ನಡೆದ ಸಂವಾದದಲ್ಲಿ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪುಗೊಳ್ಳಬೇಕು, ಪೊಲೀಸರಿಗೆ ವಾರಾಂತ್ಯದಲ್ಲಿ ಕಡ್ಡಾಯವಾಗಿ ಯೋಗ ಅಥವಾ ಮಾನಸಿಕ ಒತ್ತಡ ಕಡಿಮೆ ಮಾಡುವ ವ್ಯಾಯಾಮ ಅಳವಡಿಸಿಕೊಳ್ಳಬೆಕು, ಪೊಲೀಸ್ ಜನಸಂಪರ್ಕ ಸಭೆಗಳು ನಡೆಯಬೇಕು, ಒಟ್ಟಿನಲ್ಲಿ ಮಕ್ಕಳಿಂದ ಹಿರಿಯವರವರೆಗೆ ನೊಂದವರಿಗೆ ಪರಿಹಾರ ಒದಗಿಸುವ ಕೇಂದ್ರಗಳನ್ನಾಗಿ ಪೊಲೀಸ್ ಠಾಣೆಗಳು ರೂಪುಗೊಳ್ಳಬೇಕು ಎಂದು ಅಭಿಪ್ರಯ ವ್ಯಕ್ತವಾಯಿತು.