ಉಡುಪಿ : ಸರಕಾರಿ ಅಧಿಕಾರಿಗಳಿಗೆ ಪ್ರಸಕ್ತ ಹಾಗೂ ಪ್ರಮುಖ ಕಾಯಿದೆ ಮತ್ತು ಅಧಿನಿಯಮ ಕುರಿತು ಅರಿವು ಅಗತ್ಯ, ಇದರಿಂದ ಆಡಳಿತಾತ್ಮಕ ನಿರ್ಧಾರ ಹಾಗೂ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್. ಹೇಳಿದ್ದಾರೆ.
ಅವರು ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ , ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮಹಿಳೆಯರ ಮತ್ತು ಮಕ್ಕಳ ಸಂಬಂಧಿ ಕಾನೂನುಗಳ ಕುರಿತ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಹಿಳೆ ಮತ್ತು ಮಕ್ಕಳ ಬಗ್ಗೆ ಇರುವ ಕಾಯಿದೆಗಳ ಕುರಿತು ಪ್ರಮುಖವಾಗಿ ಅಧಿಕಾರಿಗಳು ಮಾಹಿತಿಯನ್ನು ಹೊಂದಿರಬೇಕು, ಏಕೆಂದರೆ ಹೆಚ್ಚಿನ ಪ್ರಮಾಣದಲ್ಲಿ ದೌರ್ಜನ್ಯಗಳು ನಡೆಯುವುದು ಇವರ ಮೇಲೆಯೇ, ಇಂತಹ ಪ್ರಕರಣಗಳು ತಮ್ಮ ಬಳಿ ಬಂದಾಗ ಅಧಿಕಾರಿಗಳು ಅವರಿಗೆ ಸೂಕ್ತ ಮಾಹಿತಿ ಮತ್ತು ನೆರವು ನೀಡಬೇಕು, ಜಿಲ್ಲೆಯಲ್ಲಿ ಕೌಟುಂಬಿಕ ದೌರ್ಜನ್ಯದಿಂದ ನೊಂದ ಮಹಿಳೆಯರಿಗೆ ತಾತ್ಕಾಲಿಕವಾಗಿ ವಸತಿ ವ್ಯವಸ್ಥೆಯನ್ನು ನಿಟ್ಟೂರಿನ ಸ್ಟೇಟ್ ಹೋಂ ನಲ್ಲಿ ಮಾಡಲಾಗಿದೆ ಅಲ್ಲದೇ ಅದಕ್ಕಾಗಿಯೇ ಪ್ರತ್ಯೇಕ ಕಟ್ಟಡವನ್ನು ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲೆಯಲ್ಲಿ 2001 -2011 ರ ಅವಧಿಯಲ್ಲಿ ಜಿಲ್ಲೆಯಲ್ಲಿ 1000 ಕ್ಕೆ 1103 ಲಿಂಗಾನುಪಾತವಿತ್ತು ಆದರೆ ಪ್ರಸ್ತುತ ಲಿಂಗಾನುಪಾತ ಪ್ರಮಾಣ 1000 ಕ್ಕೆ 1095 ಇದೆ , ಆದರೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಅದರ ಪ್ರಮಾಣ ಹೆಚ್ಚುತ್ತಾ ಹೋಗುತ್ತಿದೆ, ಜಿಲ್ಲೆಯಲ್ಲಿ ಲಿಂಗಾನುಪಾತ ಪ್ರಮಾಣ ಕಡಿಮೆಯಾಗುತ್ತಿರುವ ಕುರಿತು ವರದಿ ನೀಡುವಂತೆ ಕೆಎಂಸಿ ಯ ಸಮುದಾಯ ಆರೋಗ್ಯ ವಿಭಾಗಕ್ಕೆ ಸೂಚಿಸಲಾಗಿದೆ, ಗರ್ಭ ಪೂರ್ವ ಮತ್ತು ಪ್ರಸವ ಲಿಂಗ ಪತ್ತೆ ನಿಷೇಧ ಕಾಯಿದೆ ಕುರಿತು ಹೆಚ್ಚಿನ ಅರಿವು ಮೂಡಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಮಹಿಳೆಯರು ಕೆಲಸ ಮಾಡುವ ಸ್ಥಳದಲ್ಲಿ ನಡೆಯುವ ಲೈಂಗಿಕ ಕಿರುಕುಳ ತಡೆಯುವ ಕುರಿತು ಜಿಲ್ಲಾ ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಕಿರುಕುಳಕ್ಕೆ ಒಳಗಾದವರು ದೂರು ನೀಡುವಂತೆ ಜಿಲ್ಲಾಧಿಕಾರಿಗಳು ಹೇಳಿದರು.
ಕಾರ್ಯಕ್ರಮದಲ್ಲಿ ಅಡಿಷನಲ್ ಎಸ್ಪಿ ಸಂತೋಷ್ ಕುಮಾರ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ಕೆ ನಾರಾಯಣ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಗ್ರೇಸಿ ಗೊಲ್ಸಾಲಿಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಉಪಸ್ಥಿತರಿದ್ದರು.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ 2012 (ಪೋಕ್ಸೋ) ಬಗ್ಗೆ ಪಡಿ ಸಂಸ್ಥೆಯ ನಿರ್ದೇಶಕ ರೆನ್ನಿ ಡಿಸೋಜಾ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣ ಕಾಯ್ದೆ 2005 ಬಗ್ಗೆ ನ್ಯಾಯವಾದಿ ರೇಖಾ ಹೆಗ್ಡೆ, ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆ 1994 ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ, ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ-2013 ಬಗ್ಗೆ ಜಿಲ್ಲಾ ಪಂಚಾಯತ್ ನ ಯೋಜನಾ ನಿರ್ದೇಶಕ ನಯನ ರವರು ಉಪನ್ಯಾಸ ನೀಡಿದರು.