ಉಡುಪಿ: ಸೆಪ್ಟೆಂಬರ್ 2ರಂದು ದೇಶದಾದ್ಯಂತ ನಡೆಯುತ್ತಿರುವ ಕಾರ್ಮಿಕರ ಮುಷ್ಕರದ ಭಾಗವಾಗಿ ಉಡುಪಿ ಬಸ್ ನಿಲ್ದಾಣದಲ್ಲಿ ಪ್ರಚಾರ ನಡೆಸುತ್ತಿರುವ ಸಂದರ್ಭದಲ್ಲಿ ಸಿಐಟಿಯು ಮುಖಂಡರ ಮೇಲೆ ಹಲ್ಲೆ ನಡೆಸಲು ಮುಂದಾದ ‘ಅಂಬಾ’ ‘ಮುಕಾಂಬಿಕಾ’ ಮತ್ತು ‘ಮಹಾಕಾಳಿ’ ಖಾಸಗಿ ಬಸ್ನ ಮಾಲಿಕರ ನೀತಿಯನ್ನು ಉಡುಪಿ ಜಿಲ್ಲಾ ಸಿಟಿ ಬಸ್ ನೌಕರರ ಸಂಘವು ತೀವ್ರವಾಗಿಖಂಡಿಸುತ್ತದೆ.
ನೌಕರ ಸಂಘದ ಕಾರ್ಯದರ್ಶಿ ಹಾಗೂ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿಯವರನ್ನು ‘ಮುದುಕ’ (ತುಳುವಿನಲ್ಲಿ ಪರಬ್ಬೆ) ಮತ್ತಿತರ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಸಿಐಟಿಯು ಇನ್ನೋರ್ವ ಕಾರ್ಯಕರ್ತ ಕವಿರಾಜ್ ಅವರಿಗೆ ಹೀನಾಯವಾಗಿ ಸಾರ್ವಜನಿಕರ ಎದುರೇ ಹಲ್ಲೆ ನಡೆಸಲು ಮುಂದಾಗಿದ್ದರು. ಸಾರ್ವಜನಿಕರ ಮಧ್ಯಪ್ರವೇಶದಿಂದ ಹಾಗೂ ಸಿಐಟಿಯು ಮುಖಂಡರ ತಾಳ್ಮೆಯಿಂದ ಹಲ್ಲೆ ನಡೆಯುವುದು ತಪ್ಪಿದೆ. ಘಟನೆಯ ಬಳಿಕ ತುರ್ತಾಗಿ ಸಭೆ ಸೇರಿದ ನೌಕರ ಸಂಘದ ಕಾರ್ಯಕಾರಿ ಸಮಿತಿಯು ಸಾರ್ವತ್ರಿಕ ಮುಷ್ಕರದಲ್ಲಿ ಎಲ್ಲಾ ನೌಕರರು ಭಾಗವಹಿಸಿ ಮುಷ್ಕರವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದೆ.
ಸಿಟಿ ಬಸ್ ನೌಕರರು ಬೆಳಿಗ್ಗೆ 6 ಗಂಟೆಗೆ ತಮ್ಮ ದೈನಂದಿನ ಕೆಲಸವನ್ನು ಆರಂಭಿಸಿದರೆ ರಾತ್ರಿ ಮನೆ ಸೇರುವುದು 10 ಗಂಟೆಗೆ. ಅಲ್ಲಿಗೆ 16 ಗಂಟೆ ದುಡಿದಂತೆ ಆಗುತ್ತದೆ. ಕೈ ತುಂಬಾ ಸಂಬಳವೇನಾದರೂ ಇದೆಯೇ. ಅದೂ ಇಲ್ಲ. ಇಎಸ್ಐ, ಪ್ರಾವಿಡೆಂಟ್ ಫಂಡ್, ಬೋನಸ್ ಮೊದಲಾದ ಸೌಲಭ್ಯಗಳಿಲ್ಲ. 20-30 ವರ್ಷ ದುಡಿದರೂ ನಿವೃತ್ತಿಯಾಗುವ ಸಮಯದಲ್ಲಿ ಗ್ರಾಚುಯಿಟಿಯಾಗಲೀ, ಪೆನ್ಸನ್ ಆಗಲೀ ಸಿಗುವುದಿಲ್ಲ. ನೌಕರರನನ್ನು ದುಡಿಸಿಕೊಂಡು ಕಸದಂತೆ ಬಿಸಾಡುತ್ತಾರೆ. ನಮ್ಮ ದೇಶಕ್ಕೆ ಸ್ವಾತಂತ್ರ ಬಂದು 68 ವರ್ಷ ಕಳೆದರೂ ಬಹುತೇಕ ನೌಕರರ ಪರಿಸ್ಥಿತಿ ಹೀಗೆಯೆ ಇದೆ.
ಸಿಟಿ ಬಸ್ ನೌಕರರು ಕೆಲಸ ಮಾಡಲು ಅಶಕ್ತರಾದರೆ ಜೀವನ ನಡೆಸುವುದು ಹೇಗೆ ಎಂಬ ಪರಿಸ್ಥಿತಿ ಇದೆ.
ಇತ್ತೀಚೆಗೆ ಕೇಂದ್ರ ಸರಕಾರವು ರಸ್ತೆ ಸಾರಿಗೆ ಮಸೂದೆ ತರಲು ಉದ್ದೇಶಿಸಿದ್ದು ಇದರಿಂದ ಅಫಘಾತಗಳಾದಾಗ ಎಲ್ಲಾ ಜವಾಬುದಾರಿಯನ್ನು ಚಾಲಕರ ಮೇಲೆ ಹಾಕಲಾಗುತ್ತದೆ. ಈ ಮಸೂದೆಯ ಪ್ರಕಾರ ಸಾರಿಗೆ ಪ್ರಾಧಿಕಾರವನ್ನು ಬರ್ಖಾಸ್ತುಗೊಳಿಸಿ ನೋಂದಣಿ ಹಕ್ಕನ್ನು ಖಾಸಗಿಯವರಿಗೆ ವಹಿಸಿ ಕೊಡಲಾಗುವುದು. ಡ್ರೈವಿಂಗ್ ಲೈಸೆನ್ಸ್ ನೀಡುವ ಅಧಿಕಾರವನ್ನೂ ಖಾಸಗಿಯವರಿಗೆ ನೀಡಲಾಗುವುದು.
ಈ ಎಲ್ಲಾ ಹಿನ್ನೆಲೆಯಲ್ಲಿ ದೇಶದಾದ್ಯಂತ ಸೆಪ್ಟೆಂಬರ್ 2ರಂದು ನಡೆಯುವ ಅಖಿಲ ಭಾರತ ಮುಷ್ಕರದಲ್ಲಿ ಭಾಗವಹಿಸಲು ಸಿಐಟಿಯುಗೆ ಸೇರಿದ ಉಡುಪಿ ಜಿಲ್ಲಾ ಸಿಟಿ ಬಸ್ ನೌಕರರ ಸಂಘವು ನಿರ್ಧರಿಸಿದೆ ಎಂದು ಸಿಐಟಿಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.