Home Mangalorean News Kannada News ಉಡುಪಿ: ಸಾಲು ಮರದ ತಿಮ್ಮಕ್ಕ ಜೀವನ ನಿರ್ವಹಣೆಗೆ ನೆರವಾಗಲು ಮುಂದೆ ಬಂದ ಜಿಲ್ಲೆಯ ಸಮಾನಮನಸ್ಕ ಪರಿಸರ...

ಉಡುಪಿ: ಸಾಲು ಮರದ ತಿಮ್ಮಕ್ಕ ಜೀವನ ನಿರ್ವಹಣೆಗೆ ನೆರವಾಗಲು ಮುಂದೆ ಬಂದ ಜಿಲ್ಲೆಯ ಸಮಾನಮನಸ್ಕ ಪರಿಸರ ಪ್ರೇಮಿ ಯುವಕರ ತಂಡ

Spread the love

ಉಡುಪಿ: ಪರಿಸರ ಪ್ರೇಮದ ಬಗ್ಗೆ ಕರ್ನಾಟಕದ ಹೆಸರನ್ನು ಜಗದೆತ್ತರಕ್ಕೆ ಬೆಳಗಿಸಿದ ನಿಸರ್ಗ ಪ್ರೇಮಿ ಸಾಲು ಮರದ ತಿಮ್ಮಕ್ಕ ಜೀವನ ನಿರ್ವಹಣೆಗೆ ಪರದಾಡುತ್ತಿದ್ದು ಇದನ್ನರಿತ ಸಮಾನಮನಸ್ಕ ಯುವಕರ ತಂಡ ನೆರಳು ನೆರವು ಎಂಬ ನಿಧಿಸಂಗ್ರಹದ ವಿನೂತನ ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯಲ್ಲಿ ಹಮ್ಮಿಕೊಂಡಿದೆ.

Neralu_Neravu_timmakka 07-10-2015 10-52-43

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ತಂಡದ ಸದಸ್ಯ ಅವಿನಾಶ್ ಕಾಮತ್ ಅವರು ರಸ್ತೆಯ ಇಕ್ಕೆಲಗಳಲ್ಲಿ ಗಿಡಗಳನ್ನು ನೆಟ್ಟು ನೀರುಣಿಸಿ ಅವುಗಳ ಆರೈಕೆ ಮಾಡಿದ ಸಾಲು ಮರದ ತಿಮ್ಮಕ್ಕನಿಗೆ ಅವರ ಮರಗಳ ಮೇಲಿನ ಪ್ರೀತಿಗೆ 81 ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದು, ಅವರ ಹೆಸರನ್ನು ಪದ್ಮಭೂಷಣ ಪ್ರಶಸ್ತಿಗೆ ರಾಜ್ಯ ಸರಕಾರ ಶಿಫಾರಾಸು ಮಾಡಿದೆ. ಹೊರ ನೋಟಕ್ಕೆ ಸಾಲು ಮರದ ತಿಮ್ಮಕ್ಕ ಪ್ರಸಿದ್ದಿ ಮತ್ತು ಸಾಕಷ್ಟು ಸರಕಾರಿ ಸವಲತ್ತುಗಳನ್ನು ಪಡೆದು ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂಬ ಚಿಂತನೆ ಎಲ್ಲರದ್ದೂ ಆಗಿದ್ದು, ಆದರೆ ವಾಸ್ತವ ಹಾಗಿಲ್ಲ.

ಸರಕಾರ ನೀಡುತ್ತಿರುವ ಕೇವಲ 500 ವೃದ್ಧಾಪ್ಯ ವೇತನ ಹೊರತು ಪಡಿಸಿದರೆ ಇವರ ಜೀವನ ನಿರ್ವಹಣೆಗೆ ಬೇರ್ಯಾವುದೇ ಆರ್ಥಿಕ ಮೂಲಗಳಿಲ್ಲ. 105  ವರ್ಷ ಪ್ರಾಯದ ತಿಮ್ಮಕ್ಕನ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಇವರ ಸಾಕುಮಗ ಉಮೇಶ್ ಅವರನ್ನು ಹೊರತು ಪಡಿಸಿ ತಿಮ್ಮಕ್ಕನಿಗೆ ತನ್ನವರು ಎಂಬುವರು ಯಾರೂ ಇಲ್ಲ. ವಯೋಸಹಜ ಆರೋಗ್ಯ ಸಮಸ್ಯೆಗಳು ಇವರನ್ನು ಕಾಡುತ್ತಿದ್ದು ಚಿಕಿತ್ಸೆಯ ವೆಚ್ಚ ಭರಿಸಲೂ ಕೂಡ ಹೆಣಗಾಡುತ್ತಿದ್ದಾರೆ. ಆಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆಯ ವೆಚ್ಚದಲ್ಲಿ 10% ರಿಯಾಯತಿ ಸಿಗುತ್ತಿರುವುದು ಹೊರತು ಪಡಿಸಿ ಇವರಿಗೆ ಬೇರೆ ಯಾವುದೇ ನೆರವು ಸಿಗುತ್ತಿಲ್ಲ. ಇವರ ಹುಟ್ಟೂರಾದ ಹುಲಿಕಲ್ ನಲ್ಲಿ ಸುಸಜ್ಜಿತ ಆಸ್ಪತ್ರೆಗಳು ಇರದಿರುವುದರಿಂದ ಸದ್ಯ ತಿಮ್ಮಕ್ಕು ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸರಕಾರ ಇವರ ಹುಟ್ಟೂರಿನಲ್ಲಿ ಹೆರಿಗೆ ಆಸ್ಪತ್ರೆಯನ್ನು ಕಟ್ಟಿಕೊಡುವುದಾಗಿ ಭರವಸೆ ನೀಡಿತ್ತು ಆದರೆ ಇದುವರೆಗೆ ಅದೂ ಕೂಡ ಈಡೇರಿಲ್ಲ ಎಂಬುದು ತಿಮ್ಮಕ್ಕನ ಕೊರಗು.

ಇಂತಹ ಸಂದಿಗ್ದ ಪರಿಸ್ಥಿತಿಯನ್ನು ಮನಗಂಡು ಉಡುಪಿಯ ಒಂದಷ್ಟು ಪರಿಸರ ಮಿತ್ರರು ಸೇರಿಕೊಂಡು ತಿಮ್ಮಕ್ಕನಿಗಾಗಿ ಒಂದು ತಾತ್ಕಾಲಿಕ ಪರಿಹಾರ ನಿಧಿಯನ್ನು ಸಂಗ್ರಹಿಸಬೇಕು ಎಂದು ನಿರ್ಧರಿಸಿ “ನೆರಳು ನೆರವು” ಎಂಬ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಈ ಅಭಿಯಾನದ ಪ್ರಯುಕ್ತ ಈಗಾಗಲೇ ಹಲವಾರು ಶಾಲೆ ಕಾಲೇಜು, ಮತ್ತು ಬ್ಯಾಂಕ್ ಆವರಣಗಳಲ್ಲಿ ಸಹಾಯನಿಧಿಗಾಗಿ ಹುಂಡಿಯನ್ನು ಇಡಲಾಗಿದೆ.

ಅಕ್ಟೋಬರ್ 10 ಸಂಜೆ 4 ರಿಂದ ಬಿಗ್ ಬಜಾರ್ ಮುಂಬಾಗದಿಂದ ತಿಮ್ಮಕ್ಕನಿಗಾಗಿ ಸಾರ್ವಜನಿಕರ ಸಹಾಯ ಹಸ್ತಕ್ಕಾಗಿ ರ್ಯಾಲಿಯನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಲ್ಲಿ ಹಲವಾರು ಪರಿಸರಪ್ರೇಮಿಗಳು ಭಾಗವಹಿಸಲಿದ್ದು, ತಿಮ್ಮಕ್ಕ ಅವರ ಸಾಕು ಮಗ ಉಮೇಶ್ ಕೂಡ ಭಾಗವಹಿಸಲಿದ್ದಾರೆ. ತಿಮ್ಮಕ್ಕ ಅವರ ಆರೋಗ್ಯ ಕ್ಷೀಣಿಸುತ್ತಿರುವುದರಿಂದ ಅವರಿಗೆ ಆಗಮಿಸಲು ಸಾಧ್ಯವಾಗುತ್ತಿಲ್ಲ. ಪರಿಸರ ಜಾಗೃತಿಯ ಜೊತೆಗೆ ತಿಮ್ಮಕ್ಕನಿಗೆ ನೆರವು ಒದಗಿಸು ಉದ್ದೇಶದಿಂದ ಜಾಥಾ ಹಮ್ಮಿಕೊಂಡಿದ್ದು ಸಾರ್ವಜನಿಕರು ಕೈಜೋಡಿಸಬೇಕು ಎಂದರು.

ತಿಮ್ಮಕ್ಕನಿಗಾಗಿ ಮಾಡುತ್ತಿರುವ ಈ ಕೆಲಸದ ಬಗ್ಗೆ ಸಾರ್ವಜನಿಕ ಜಾಲ ತಾಣಗಳಾದ ಫೇಸ್ ಬುಕ್ ವಾಟ್ಸಾಪ್ಗಳಲ್ಲಿ ಹೆಚ್ಚಿನ ಪ್ರಚಾರ ಪಡೆದು ವಿವಿಧ ಮೂಲೆಗಳಿಂದ ಅವರಿಗೆ ನೆರವು ನೀಡಲು ಹಲವಾರು ಮಂದಿ ಮುಂದೆ ಬಂದಿದ್ದಾರೆ. ಸಾರ್ವಜನಿಕರು ಕೂಡ ಅವರಿಗೆ ವೈಯುಕ್ತಿವಾಗಿ ಸಹಾಯ ಮಾಡಲಿಚ್ಚಿಸುವವರು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾಯಿಸಬಹುದು ಎಂದರು.

ತಿಮ್ಮಕ್ಕನವರ ಬ್ಯಾಂಕ್ ಖಾತೆಯ ವಿವರ: ಸಾಲು ಮರದ ತಿಮ್ಮಕ್ಕ, ಕೆನರಾಬ್ಯಾಂಕ್ ಚಿಕ್ಕಬಿದರಕಲ್ಲು ಶಾಖೆ, ಖಾತೆ ಸಂಖ್ಯೆ 1199101031844, ಐಎಫ್ ಎಸ್ ಸಿ ಸಂಖ್ಯೆ ಸಿಬಿಎನ್ ಆರ್ 0001199.

ಪತ್ರಿಕಾಗೋಷ್ಠಿಯಲ್ಲಿ ಗುರುರಾಜ್ ಸನೀಲ್, ಶೀಕಾಂತ್ ಶೆಟ್ಟಿ, ವಿರಾಜ್ ಕಾಪು ಉಪಸ್ಥಿತರಿದ್ದರು.


Spread the love

Exit mobile version