ಉದ್ಯಾವರದಲ್ಲಿ ಬ್ಯಾಂಕ್ ಎಟಿಎಂ ಕಳವಿಗೆ ವಿಫಲ ಯತ್ನ
ಉಡುಪಿ: ನಗರದ ಹೊರವಲಯದಲ್ಲಿರುವ ಉದ್ಯಾವರ ಕೆನರಾ ಬ್ಯಾಂಕೊಂದರ ಎಟಿಎಂನಲ್ಲಿ ಕಳವಿಗೆ ಯತ್ನ ನಡೆಸಿದ ಘಟನೆ ನಡೆದಿದೆ.
ಉದ್ಯಾವರದಲ್ಲಿನ ಕೆನರಾ ಬ್ಯಾಂಕ್ ಎಟಿಎಂ ಶಾಖೆಗೆ ಬುಧವಾರ ಬೆಳಗ್ಗಿನ ಜಾವ ಎರಡು ಗಂಟೆಗೆ ಮೂರು ಮಂದಿ ದುಷ್ಕರ್ಮಿಗಳು ಮುಸುಕು ಹಾಕಿಕೊಂಡು ಬಂದಿದ್ದು ಎಟಿಎಂ ಬಾಕ್ಸ್ ಒಡೆಯಲು ಯತ್ನಿಸಿದ್ದಾರೆ. ಈ ವೇಳೆ ಎಟಿಎಂ ನಿಂದ ಸೈರನ್ ಹೊಡೆದುಕೊಂಡಿದ್ದು ಕಳ್ಳರು ಸ್ಥಳದಿಂದ ಓಡಿಹೋಗಿದ್ದಾರೆ.
ಸೈರನ್ ಹೊಡೆದುಕೊಂಡ ಸಂದೇಶ ಕೆನರಾ ಬ್ಯಾಂಕಿನ ಸೆಕ್ಯೂರಿಟಿ ವಿಭಾಗಕ್ಕೆ ರವಾನೆಯಾಗಿದ್ದು ಬಾಂಕ್ ಸಿಬಂದಿ ಕೂಡಲೇ ಕಾಪು ಪೋಲಿಸರಿಗೆ ಮಾಹಿತಿ ರವಾನಿಸಿದ್ದಾರೆ. ಅಲ್ಲದೆ ಬ್ಯಾಂಕ್ ಸಿಬಂದಿ ಕೂಡ ತಮ್ಮ ಬ್ಯಾಂಕಿನ ಸೆಕ್ಯೂರಿಟಿ ಅಧಿಕಾರಿಗಳನ್ನು ಎಟಿಎಂ ಸ್ಥಳಕ್ಕೆ ಕಳುಹಿಸಿದ್ದಾರೆ.
ಸ್ಥಳಕ್ಕೆ ಬೆರಳಚ್ಚು ತಜ್ಞರು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ಮಾಡುತ್ತಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಸುತ್ತಮುತ್ತ ಪೊಲೀಸ್ ಠಾಣೆ ಗಳಿಗೆ ಮಾಹಿತಿಯನ್ನು ರವಾನಿಸಲಾಗಿದ್ದು, ಅನುಮಾನಾಸ್ಪದ ವ್ಯಕ್ತಿಗಳನ್ನ ವಿಚಾರಣೆ ನಡೆಸಲಾಗುತ್ತಿದೆ.