ಉದ್ಯಾವರ: ಮೂರು ದಿನಗಳ ನಿರಂತರ್ ಕೊಂಕಣಿ ನಾಟಕೋತ್ಸವಕ್ಕೆ ಅದ್ದೂರಿ ಚಾಲನೆ
ಉಡುಪಿ: ಸಾಹಿತಿ ಪಿ. ಲಂಕೇಶ್ ಅವರ ಅಂದಿನ ನಾಟಕಗಳಿಗೆ ಇಂದಿಗೂ ಕೂಡ ಅಸಂಖ್ಯಾತ ಪ್ರೇಕ್ಷಕರನ್ನ ಹೊಂದಿರುವುದಕ್ಕೆ ಅವರ ನಾಟಕಗಳಲ್ಲಿನ ಗುಣಮಟ್ಟ ಮತ್ತು ಮೌಲ್ಯಗಳೇ ಪ್ರಮುಖ ಕಾರಣವಾಗಿದೆ ಎಂದು ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಕುಲಪತಿ ವಂ|ಸ್ಟ್ಯಾನಿ ಬಿ ಲೋಬೊ ಅವರು ಹೇಳಿದರು.
ಅವರು ಶುಕ್ರವಾರ ಉದ್ಯಾವರ ಚರ್ಚ್ ವಠಾರದಲ್ಲಿ ನಿರಂತರ್ ಉದ್ಯಾವರ ಸಂಘಟನೆಯಿಂದ ಆಯೋಜಿಸಲಾದ ಮೂರು ದಿನಗಳ ನಿರಂತರ್ ಕೊಂಕಣಿ ನಾಟಕೋತ್ಸವಕ್ಕೆ ಡೋಲು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ನಿರಂತರ್ ಉದ್ಯಾವರ ಸಂಘಟನೆಯಿಂದ ಉಡುಪಿ ಧರ್ಮಪ್ರಾಂತ್ಯ ಮಟ್ಟದಲ್ಲಿ ಪ್ರಥಮ ಬಾರಿಗೆ ಕೊಂಕಣಿ ನಾಟಕೋತ್ಸವವನ್ನು ಆಯೋಜಿಸಿದೆ. ಮೊದಲು ಕೊಂಕಣಿ ನಾಟಕೋತ್ಸವಗಳು ಕೇವಲ ಮಂಗಳೂರಿಗೆ ಸೀಮಿತಗೊಂಡಿದ್ದು ಉಡುಪಿಯಲ್ಲಿ ಇತರ ಭಾಷೆಯ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದವು. ಕೇವಲ ಮನೋರಂಜನೆಯ ದೃಷ್ಟಿಯನ್ನು ಇಟ್ಟುಕೊಂಡು ಮಾತ್ರವಲ್ಲ ಬದಲಾಗಿ ಕೊಂಕಣಿ ಭಾಷೆಯ ಪ್ರೋತ್ಸಾಹಕ್ಕಾಗಿ ಸಂಘಟನೆ ಇಂತಹ ಒಂದು ಕಾರ್ಯಕ್ಕೆ ಕೈಹಾಕಿದ್ದು ಶ್ಲಾಘನೀಯ ಸಂಗತಿ. ನಾಟಕಗಳಿಂದ ನಾವು ಕಲಿಯಬೇಕಾಗಿರುವುದು ಬಹಳಷ್ಟಿದ್ದು ಸಂಘಟನೆಯು ಈ ಕಾರ್ಯವನ್ನು ಮುಂದುವರೆಸಿಕೊಂಡು ಹೋಗಲಿ ಎಂದು ಶುಭ ಹಾರೈಸಿದರು.
ಲೇಖಕ ಹಾಗೂ ಹೋಮ್ ಸ್ವೀಟ್ ಹೋಮ್ ನಾಟಕದ ಅನುವಾದಕಾರ ರೋಶು ಬಜ್ಪೆ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು ಇಂದಿನ ಸಮಾಜ ಸಾಮಾಜಿಕ ಜಾಲತಾಣದಂತಹ ಸಂಪರ್ಕ ಮಾಧ್ಯಮದ ದಾಸರಾಗುತ್ತಿದ್ದು ಅದರಲ್ಲಿ ಬರುವ ವಿಚಾರಗಳೇ ಸತ್ಯ ಎಂದು ನಂಬುವ ಹಂತಕ್ಕೆ ತಲುಪಿದೆ. ಅದರಲ್ಲಿ ಬರುವ ವಿಚಾರಗಳನ್ನು ಕೆಲವೊಂದು ಮಾಧ್ಯಮಗಳು ವೈಭವಿಕರಿಸುವ ಕೆಲಸದಿಂದ ಸಮಾಜ ತಪ್ಪು ದಾರಿಗೆ ಸಾಗಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು.
ನಿರ್ದೇಶಕ ಕ್ಲ್ಯಾನ್ ವಿನ್ ಕಲಾಕುಲ್ . ಇನ್ನೋರ್ವ ಲೇಖಕ ವಿಲ್ಸನ್ ಕಟೀಲ್ ಅವರನ್ನೂ ಕೂಡ ಸನ್ಮಾನಿಸಲಾಯಿತು.
ಫಾ|ಆಲ್ವಿನ್ ಸೆರಾವೊ ಸಳ್ಗಿ ನಾಟಕದ ಲೇಖಕ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೆಲ್ವಿನ್ ನೊರೊನ್ಹಾ,, ಉದ್ಯಾವರ ಚರ್ಚಿನ ಸಹಾಯಕ ಧರ್ಮಗುರು ರೋಲ್ವಿನ್ ಆರಾನ್ಹಾ, ಸಂಚಾಲಕ ರೊನಾಲ್ಡ್ ಡಿಸೋಜಾ ಉಪಸ್ಥಿತರಿದ್ದರು.
ನಿರಂತರ್ ಸಂಘಟನೆಯ ಅಧ್ಯಕ್ಷ ಸ್ಟೀವನ್ ಕುಲಾಸೊ ಸ್ವಾಗತಿಸಿ, ಅನಿಲ್ ಡಿಸೋಜಾ ವಂದಿಸಿದರು. ಮೈಕಲ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.
ವಿಕ್ಟರ್ ಮೆಂಡೊನ್ಸಾ ಇವರ ಸ್ಮರಣಾರ್ಥ ರೊನೆಟ್ ಮೆಂಡೊನ್ಸಾ ಅವರು ನಾಟಕವನ್ನು ಪ್ರಾಯೋಜಿಸಿದ್ದರು. ಸಭಾ ಕಾರ್ಯಕ್ರಮದ ಬಳಿಕ ಹೋಮ್ ಸ್ವೀಟ್ ಹೋಮ್ ನಾಟಕ ಪ್ರದರ್ಶನಗೊಂಡಿತು. ನಾಟಕದ ಬಳಿಕ ಮೌಲ್ಯಮಾಪನವನ್ನು ವಾಲಸ್ಟನ್ ಶಂಕರಪುರ, ಮೆಲ್ವಿನ್ ಕೊಳಲಗಿರಿ ಮತ್ತು ವಂ|ರೆಜಿನಾಲ್ಡ್ ಪಿಂಟೊ ನಡೆಸಿಕೊಟ್ಟರು