ಉದ್ಯೋಗ ಖಾತ್ರಿ ಕೆಲಸ ತೀವ್ರಗೊಳಿಸಲು ಉಸ್ತುವಾರಿ ಕಾರ್ಯದರ್ಶಿಗಳ ಸೂಚನೆ

Spread the love

ಉದ್ಯೋಗ ಖಾತ್ರಿ ಕೆಲಸ ತೀವ್ರಗೊಳಿಸಲು ಉಸ್ತುವಾರಿ ಕಾರ್ಯದರ್ಶಿಗಳ ಸೂಚನೆ     

ಮಂಗಳೂರು: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಸೃಜಿಸಲಾಗುವ ದುಡಿಮೆಗಳನ್ನು ಇನ್ನಷ್ಟು ತೀವ್ರಗೊಳಿಸಿ ನಿಗದಿತ ಅವಧಿಯಲ್ಲಿ ಗುರಿ ತಲುಪಬೇಕು ಎಂದು ರಾಜ್ಯ ಸರಕಾರದ ಆರ್ಥಿಕ ಇಲಾಖೆ ಕಾರ್ಯದರ್ಶಿ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಸುಚಿಸಿದ್ದಾರೆ.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2017-18ರಲ್ಲಿ ದ.ಕ. ಜಿಲ್ಲೆಯಲ್ಲಿ 17.37 ಲಕ್ಷ ಮಾನವ ದಿನಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಗುರಿ ನಿಗದಿಪಡಿಸಲಾಗಿದೆ. ಮುಖ್ಯಮಂತ್ರಿಗಳ ಸೂಚನೆಯಂತೆ ಮೊದಲ ತ್ರೈಮಾಸಿಕದಲ್ಲಿ  ಇದರ ಶೇಕಡಾ 40ರಷ್ಟು ಗುರಿ ಸಾಧಿಸಲೇಬೇಕು. ಪ್ರಸಕ್ತ ಈ ಗುರಿ ಸಾಧನೆಯಲ್ಲಿ ಜಿಲ್ಲೆ ಹಿಂದೆ ಇದ್ದು, ನಿಗದಿತ ಅವಧಿಯಲ್ಲಿ ಇದನ್ನು ಮುಟ್ಟದಿದ್ದರೆ ಸಂಬಂಧಪಟ್ಟ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಅವರು ಎಚ್ಚರಿಸಿದರು. ಉದ್ಯೋಗ ಖಾತ್ರಿ ಕಾರ್ಯಕ್ರಮಗಳ ಮೇಲೆ ನೇರ ನಿಗಾ ಇಟ್ಟು ಪರಿಶೀಲನೆ ನಡೆಸುವಂತೆ ಅವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 157 ಶುದ್ಧ ನೀರು ಘಟಕಗಳಿಗೆ ಮಂಜೂರಾತಿ ದೊರಕಿ, 79 ಸ್ಥಾಪನೆಯಾಗಿದ್ದರೂ,  ಕೇವಲ 6 ಘಟಕಗಳಲ್ಲಿ ಮಾತ್ರ ಸಾರ್ವಜನಿಕರಿಗೆ ನೀರು ಸರಬರಾಜಾಗುತ್ತಿರುವ ಬಗ್ಗೆ ಉಸ್ತುವಾರಿ ಕಾರ್ಯದರ್ಶಿಗಳು ಅಸಮಾಧಾನ ವ್ಯಕ್ತಪಡಿಸಿದರು.  ಸಣ್ಣಪುಟ್ಟ ಕೆಲಸಗಳಿಗಾಗಿ ಇಡೀ ಶುದ್ಧನೀರಿನ ಘಟಕವನ್ನು ಕಾರ್ಯಾಚರಣೆಗೊಳಿಸದಿರುವುದಕ್ಕೆ ಅವರು ಯೋಜನೆ ಅನುಷ್ಠಾನ ವಹಿಸಿಕೊಂಡಿರುವ ಕೆಆರ್‍ಐಡಿಎಲ್ ಅಧಿಕಾರಿಯನ್ನು ಪ್ರಶ್ನಿಸಿದ ಅವರು, ಸ್ಥಾಪನೆಯಾಗಿರುವ ಎಲ್ಲಾ ಘಟಕಗಳನ್ನು ಕೂಡಲೇ ನೀರು ಸರಬರಾಜು ಮಾಡಲು ಅಗತ್ಯ ಕ್ರಮವನ್ನು ತ್ವರಿತವಾಗಿ ನಡೆಸುವಂತೆ ತಾಕೀತು ಮಾಡಿದರು.

94ಸಿ, 94 ಸಿಸಿ ಹಾಗೂ 94ಎ ಅಡಿ ಅಕ್ರಮ-ಸಕ್ರಮ ಸ್ವೀಕೃತವಾಗಿರುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ನಡೆಸಬೇಕು.ಅರಣ್ಯ ಹಕ್ಕು ಕಾಯಿದೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸಂವೇದನಶೀಲವಾಗಿ ಪರಿಗಣಿಸಲು ಅವರು ಸುಚಿಸಿದರು.

ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರು ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಪೂರ್ಣಗೊಂಡಿರುವ ಯೋಜನೆಗಳಿಗೆ ಪಾವತಿಯನ್ನು ವಿಳಂಭ ಮಾಡಬಾರದು. ಟಾಸ್ಕ್‍ಫೋರ್ಸ್‍ನಲ್ಲಿ ಕೈಗೆತ್ತಿಕೊಂಡು ಪೂರ್ಣಗೊಂಡಿರುವ ಎಲ್ಲಾ ಕಾಮಗಾರಿಗಳಿಗೆ ಒಂದು ವಾರದೊಳಗೆ ಪಾವತಿಯನ್ನು ಚುಕ್ತಾ ಮಾಡಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿದರು.

ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ಪಡೆಯಲು ಅರ್ಹ ಪ್ರಕರಣಗಳಲ್ಲಿ ಪರಿಹಾರ ಹಾಗೂ ಅವರ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯಗಳನ್ನು ತ್ವರಿತಗತಿಯಲ್ಲಿ ಕ್ರಮಕೈಗೊಳ್ಳಬೇಕು.  ನಗರ ಪ್ರದೇಶಗಳಲ್ಲಿ ಎಡಿಬಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುವುದ ಕುಡಿಯುವ ನೀರಿನ ಯೋಜನೆಗಳಿಗೆ ಭೂಮಿ ಅಗತ್ಯವಿದ್ದರೆ ಸಂಧಾನ ಅಥವಾ ಭೂಸ್ವಾಧೀನ ಮೂಲಕ ಭೂಮಿ ಪಡೆಯಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ರಿತೇಶ್ ಕುಮಾರ್ ಸಿಂಗ್ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ, ಕೆಯುಐಡಿಎಫ್‍ಸಿ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ತನುಶ್ರೀ ದೇಬ್ ಬರ್ಮ,  ಪುತ್ತೂರು ಉಪವಿಭಾಗಾಧಿಕಾರಿ ಡಾ. ರಘುನಂದನಮೂರ್ತಿ, ಅಪರ ಜಿಲ್ಲಾಧಿಕಾರಿ ಕುಮಾರ್, ಮಹಾನಗರಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ಮತ್ತಿತರರು ಇದ್ದರು.


Spread the love