ಉಪಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ಗೆಲುವು: ದ.ಕ. ಜಿಲ್ಲಾ ಕಾಂಗ್ರೆಸ್ ಸಂಭ್ರಮಾಚರಣೆ

Spread the love

ಉಪಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ಗೆಲುವು: ದ.ಕ. ಜಿಲ್ಲಾ ಕಾಂಗ್ರೆಸ್ ಸಂಭ್ರಮಾಚರಣೆ

ಮಂಗಳೂರು : ಬಳ್ಳಾರಿ, ಮಂಡ್ಯ ಲೋಕಸಭೆ ಹಾಗೂ ಜಮಖಂಡಿ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ –ಜೆಡಿಎಸ್ ಮೈತ್ರಿಕೂಟಕ್ಕೆ ಗೆಲುವು ಲಭಿಸಿದ ಹಿನ್ನಲೆಯಲ್ಲಿ ಮಂಗಳವಾರ ದಕ ಜಿಲ್ಲಾ ಕಾಂಗ್ರೆಸ್ ಕಚೇರಿಯ ಎದುರು ಸಂಭ್ರಮಾಚರಣೆ ನಡೆಯಿತು.

ಪಕ್ಷದ ಮುಖಂಡರು, ಕಾರ್ಯಕರ್ತರು ರಾಜ್ಯ ಮತ್ತು ರಾಷ್ಟ್ರಮಟ್ಟದ ಹಿರಿಯ ನಾಯಕರ ಪರ ಘೋಷಣೆ ಕೂಗಿದರಲ್ಲದೆ, ಸಿಹಿತಿಂಡಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೊಜ ಬಿಜೆಪಿಯು ಮೈತ್ರಿ ಕೂಟ ಸರಕಾರವನ್ನು ಕೆಡವಲು ಪ್ರಯತ್ನಿಸುತ್ತಲೇ ಇತ್ತು. ಮತದಾರರು ಐದರಲ್ಲಿ ನಾಲ್ಕು ಕಡೆ ಮೈತ್ರಿ ಕೂಟ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಬಿಜೆಪಿಗೆ ಶಾಕ್ ನೀಡಿದ್ದಾರೆ ಮತ್ತು ಕಾಂಗ್ರೆಸ್ಗೆ ದೀಪಾವಳಿಯ ಕೊಡುಗೆ ನೀಡಿದ್ದಾರೆ ಎಂದರು.

ಈ ಮೈತ್ರಿ ಕೂಟವು ಮುಂದೆಯೂ ಮುಂದುವರಿಯಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನಗಳನ್ನು ಮೈತ್ರಿಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ದ.ಕ. ಜಿಲ್ಲೆಯಲ್ಲೂ ಈ ಗೆಲುವು ಪರಿಣಾಮ ಬೀರಲಿದೆ ಎಂದು ಐವನ್ ಡಿಸೋಜ ನುಡಿದರು.

ಮನಪಾ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಪಕ್ಷದ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಸದಾಶಿವ ಉಳ್ಳಾಲ್, ಡಿ.ಕೆ.ಅಶೋಕ್ ಕುಮಾರ್, ಸಂತೋಷ್ ಕುಮಾರ್, ಅಬೂಬಕರ್ ಕುದ್ರೋಳಿ, ಶಬ್ಬೀರ್ ಸಿದ್ಧಕಟ್ಟೆ, ನಝೀರ್ ಬಜಾಲ್ ಮತ್ತಿತರರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.


Spread the love