ಉಳ್ಳಾಲದಲ್ಲಿ ಬಂಡೆಗೆ ಬಡಿದು ಬಾರ್ಜ್ ಮುಳುಗಡೆ; 30 ಮಂದಿ ಸಿಬಂದಿಗಳು ಅಪಾಯದಲ್ಲಿ
ಮಂಗಳೂರು: ಮಂಗಳೂರಿನ ಉಳ್ಳಾಲ ಮೊಗವೀರಪಟ್ಣ ಪರಿಸರದಲ್ಲಿ ಶನಿವಾರ ಬಾರ್ಜೊಂದು ಬಂಡೆಗೆ ಬಡಿದು ಮುಳುಗಡೆಗೊಂಡಿದ್ದು ಇದರಲ್ಲಿದ್ದ 30 ಮಂದಿ ಅಪಾಯಕ್ಕೆ ಸಿಲುಕಿದ್ದಾರೆ.
ಮಂಗಳೂರಿನ ಉಳ್ಳಾಲ ಮೊಗವೀರ ಪಟ್ಣದಲ್ಲಿ ಈ ಘಟನೆ ನಡೆದಿದ್ದು, ಸಮುದ್ರ ಕೊರೆತವನ್ನು ತಡೆಗಟ್ಟುವ ಕಾಮಗಾರಿಯನ್ನು ನಡೆಸುವ ಬಾರ್ಜ್ ಇದಾಗಿದ್ದು, ಇದರಲ್ಲಿ 30 ಮಂದಿ ಕಾರ್ಯನಿರ್ವಹಿಸುತ್ತಿದ್ದರು. ಬಾರ್ಜಿನಲ್ಲಿ ಸಿಲುಕಿಕೊಂಡಿರುವವರನ್ನು ರಕ್ಷಿಸಲು ಕರಾವಳಿ ರಕ್ಷಣಾ ಪಡೆ ಧಾವಿಸಿದ್ದು ಈಗಾಗಲೇ ಮೂವರನ್ನು ರಕ್ಷಿಸಿದ್ದು, ಕರಾವಳಿ ರಕ್ಷಣಾ ಪಡೆಯ ಚಿಕ್ಕ ಬೋಟಿನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಪರಿಣಾಮ ರಕ್ಷಣಾ ಕಾರ್ಯವನ್ನು ಸ್ಥಗಿತಗೊಳಿಸಿದ್ದು, ರಕ್ಷಣಾ ಕಾರ್ಯವನ್ನು ಭಾನುವಾರ ಮುಂದುವರಿಸುವುದಾಗಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಶಾಂತರಾಜು ಮಾಧ್ಯಮಗಳಿಗೆ ತಿಳಿಸಿದ್ದಾರೆ.