ಉಳ್ಳಾಲದ ಎರಡು ಶಾಲೆಗಳಲ್ಲಿ ಕಳವು

Spread the love

ಉಳ್ಳಾಲದ ಎರಡು ಶಾಲೆಗಳಲ್ಲಿ ಕಳವು

ಮಂಗಳೂರು: ಕೊಲ್ಯದ ಸಂತ ಜೋಸೆಫರ ಜಾಯ್ ಲ್ಯಾಂಡ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಕೋಟೆಕಾರಿನ ಸ್ಟೆಲ್ಲಾ ಮೇರೀಸ್ ಕನ್ನಡ ಮಾಧ್ಯಮ ಶಾಲೆಗಳಿಗೆ ಕಳ್ಳರು ಕನ್ನ ಹಾಕಿದ ಘಟನೆ ನಡೆದಿದೆ. ಸಿಸಿಟಿವಿ ಕ್ಯಾಮೆರಾವನ್ನು ತಿರುಚಿ ಬೀಗ ಒಡೆದು ಒಳನುಗ್ಗಿದ ಕಳ್ಳರು ಕಚೇರಿಯನ್ನು ತಡಕಾಡಿದ್ದು, ನಗದು ದೋಚಿ ಪರಾರಿಯಾಗಿದ್ದಾರೆ.

ಕಳ್ಳತನ ಪ್ರಕರಣವು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಕೊಲ್ಯ ಜಾಯ್ ಲ್ಯಾಂಡ್ ಮತ್ತು ಕೋಟೆಕಾರಿನ ಸ್ಟೆಲ್ಲಾ ಮೇರೀಸ್ ಶಾಲೆಗಳಲ್ಲಿ ಕಳ್ಳತನ ನಡೆದಿದೆ. ಎರಡು ಶಾಲೆಗಳಲ್ಲೂ ಸಿಸಿಟಿವಿ ಅಳವಡಿಸಲಾಗಿದ್ದು ಕಳ್ಳರು ಕ್ಯಾಮೆರಾಗಳನ್ನ ಬೇರೆ ದಿಕ್ಕಿಗೆ ತಿರುಚಿ ಚಾಲಾಕಿತನ ಮೆರೆದಿದ್ದಾರೆ. ಕೊಲ್ಯ ಜಾಯ್ ಲ್ಯಾಂಡ್ ಶಾಲೆಗೆ ಮೂರನೇ ಬಾರಿ ಕಳ್ಳರು ಕನ್ನ ಹಾಕಿದ್ದಾರೆ. ಈ ಹಿಂದೆಯೂ ಎರಡು ಬಾರಿ ಶಾಲೆಗೆ ಕಳ್ಳರು ನುಗ್ಗಿದ್ದು ನಗದು ಕಳವುಗೈದಿದ್ದರು. ಈ ಸಲ ಸಿಸಿಟಿವಿ ಕ್ಯಾಮೆರಾ ತಿರುಚಿ ಒಳ ನುಗ್ಗಿದ ಕಳ್ಳರು ಪ್ರಾಂಶುಪಾಲರ ಕಚೇರಿ, ಕಬಾಟುಗಳ ಬೀಗ ಒಡೆದು ತಡಕಾಡಿದ್ದು ವಿದ್ಯಾರ್ಥಿಗಳಿಂದ ಪಿಕ್ನಿಕ್ ಗಾಗಿ ಸಂಗ್ರಹಿಸಿದ್ದ ಸುಮಾರು 26,000 ರೂಪಾಯಿ ನಗದನ್ನ ಎಗರಿಸಿ ಪರಾರಿಯಾಗಿದ್ದಾರೆ.

ಕೋಟೆಕಾರಿನ ಸ್ಟೆಲ್ಲಾ ಮೇರಿಸ್ ಶಾಲೆಗೂ ಬುಧವಾರ ಮುಂಜಾನೆ 4.30 ಗಂಟೆ ವೇಳೆಗೆ ಕನ್ನ ಹಾಕಿದ ಕಳ್ಳನೋರ್ವನು ಸಿಸಿಟಿವಿ ಕ್ಯಾಮರಕ್ಕೆ ಮುಖ ಕಾಣದಿರಲು ಮ್ಯಾಟನ್ನು ಅಡ್ಡ ಹಿಡಿದು ಮುನ್ನುಗ್ಗುತ್ತಿರುವ ದೃಶ್ಯವು ಸಿಸಿಟಿವಿಯಲ್ಲಿ ದಾಖಲಾಗಿದೆ. ಸಿಸಿಟಿವಿ ಕ್ಯಾಮರಾ ತಿರುಚಿ ಕಚೇರಿ ಸ್ಟಾಫ್ ರೂಂನ ಕಪಾಟುಗಳನ್ನ ಒಡೆದು ತಡಕಾಡಿದ ಕಳ್ಳ ಪ್ರಾಂಶುಪಾಲರ ಕೋಣೆಯಲ್ಲಿದ್ದ ಸಿಕ್ಕ 3,000 ರೂಪಾಯಿ ನಗದನ್ನ ಕದ್ದೊಯ್ದಿದ್ದಾನೆ.

ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಎರಡೂ ಶಾಲೆಗಳಲ್ಲೂ ಏಕಕಾಲದಲ್ಲಿ ಕಳ್ಳತನ ನಡೆದಿದ್ದು, ಓರ್ವನೇ ಕಳ್ಳ ಕೈಚಳಕ ತೋರಿದ್ದಾನೋ ಅಥವ ತಂಡ ಶಾಮೀಲಾಗಿದೆಯೇ ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಮರ್ಪಕ ಬೀಟ್ ಪೊಲೀಸಿಂಗ್ ನಡೆಯದೆ ಇರೋದರಿಂದ ಕಳ್ಳತನ ಪ್ರಕರಣಗಳು ಜಾಸ್ತಿಯಾಗುತ್ತಿದೆಯೆಂಬ ಆರೋಪಗಳು ಕೇಳಿಬಂದಿವೆ.


Spread the love
Subscribe
Notify of

0 Comments
Inline Feedbacks
View all comments