ಉಳ್ಳಾಲ ಕಡಲಕೊರೆತ: 41 ಮನೆಗಳಿಗೆ ಪರ್ಯಾಯ ನಿವೇಶನ- ಸಚಿವರ ಸೂಚನೆ
ಉಳ್ಳಾಲ: ಉಳ್ಳಾಲ, ಸೋಮೇಶ್ವರ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಲ್ಲಿ ಕಡಲಕೊರೆತ ತೀವ್ರಗೊಂಡು ಸುಮಾರು 41 ಮನೆಗಳು ಸಂಪೂರ್ಣ ಹಾನಿಗೊಂಡಿದ್ದು, ಇವರಿಗೆ ಪರ್ಯಾಯ ನಿವೇಶನ ಗುರುತಿಸಿ ನೀಡಲು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ಆದೇಶಿಸಿದ್ದಾರೆ.
ಅವರು ಇಂದು ಈ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಡಲಕೊರೆತದಿಂದ ಹೆಚ್ಚು ಅಪಾಯದಲ್ಲಿರುವ ಇಲ್ಲಿನ ನಿವಾಸಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಮುಂದಿನ 15 ದಿನದಲ್ಲಿ ಸೂಕ್ತವಾದ ನಿವೇಶನ ಗುರುತಿಸಿ, ಮಂಜೂರುಗೊಳಿಸಬೇಕು ಎಂದು ಮಂಗಳೂರು ತಹಶೀಲ್ದಾರ್ ಗೆ ಸಚಿವರು ತಿಳಿಸಿದರು.
ಉಳ್ಳಾಲ, ಸೋಮೇಶ್ವರ, ಸಸಿಹಿತ್ಲು ಮತ್ತಿತರ ಕಡೆ ಕಡಲಕೊರೆತ ನಿಯಂತ್ರಣಕ್ಕೆ ತಡೆಗೋಡೆ ನಿರ್ಮಿಸಲಾಗಿದ್ದರೂ, ಅದನ್ನು ಮೀರಿ ನೀರು ಹರಿದುಬಂದಿದೆ. ಪ್ರಾಕೃತಿಕ ದುರಂತ ಗಳ ನಿಯಂತ್ರಣ ಕಷ್ಟಸಾಧ್ಯ. ಕಡಲ ತೀರದಲ್ಲಿರುವ ಮನೆಗಳು ಸದಾ ಅಪಾಯಕಾರಿಯಾಗಿವೆ. ಈ ನಿಟ್ಟಿನಲ್ಲಿ ಇಂತಹ ಮನೆಗಳನ್ನು ಬೇರೆಡೆಗೆ ಸ್ಥಳಾಂತರಿಸುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬದಲಾಗಿದೆ ಎಂದು ಸಚಿವರು ತಿಳಿಸಿದರು.
ಸೋಮೇಶ್ವರದಲ್ಲಿ ಈಗಾಗಲೇ 1 ಕಿ.ಮೀ. ಸಮುದ್ರ ತಿರದಲ್ಲಿ ತಡೆಗೋಡೆ ನಿರ್ಮಿಸಲಾಗಿದೆ.ಇಲ್ಲಿ ಮತ್ತೆ 300 ಮೀಟರ್ ತಡೆಗೋಡೆ ನಿರ್ಮಿಸಲು ಆದೇಶಿಸಲಾಗಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.
ಈಗಾಗಲೇ ಮನೆ ಹಾನಿಗೀಡಾದ ಸಂತ್ರಸ್ತರಿಗೆ ಉಳ್ಳಾಲ ದರ್ಗಾ ಸಮಿತಿ ಮತ್ತು ಸ್ಥಳೀಯರ ನೆರವಿನಲ್ಲಿ ತಾತ್ಕಾಲಿಕ ಆಶ್ರಯ ಒದಗಿಸಲಾಗಿದೆ . ಅಗತ್ಯ ಬಿದ್ದಲ್ಲಿ ಇನ್ನಷ್ಟು ಮಂದಿಗೆ ಆಶ್ರಯ ನೀಡಲು ಸಿದ್ಧವಿರುವುದಾಗಿ ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ರಶೀದ್ ಹಾಜಿ ತಿಳಿಸಿದ್ದಾರೆ ಎಂದು ಸಚಿವರು ತಿಳಿಸಿದರು. ಉಳ್ಳಾಲ ನಗರಸಭೆಯಿಂದಲೂ ಎಲ್ಲಾ ಅಗತ್ಯ ನೆರವು ನೀಡಲಾಗುತ್ತಿದೆ ಎಂದು ಅವರು ಹೇಳಿದರು.