ಉಳ್ಳಾಲ – ತಡರಾತ್ರಿ ಅಸ್ವಸ್ಥ ಸ್ಥಿತಿಯಲ್ಲಿ ಹೊರ ರಾಜ್ಯದ ಯುವತಿ ಪತ್ತೆ
ಮಂಗಳೂರು: ಹೊರ ರಾಜ್ಯದ ಯುವತಿಯೊಬ್ಬಳು ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ತಡರಾತ್ರಿ ನೀರು ಕೇಳಿಕೊಂಡು ಯುವತಿಯೊಬ್ಬಳು ಮನೆ ಬಾಗಿಲು ತಟ್ಟಿದ್ದಾಳೆ. ಈ ವೇಳೆ ಮನೆಯವರು ಬಾಗಿಲು ತೆಗೆದಾಗ ಯುವತಿಗೆ ಪ್ರಜ್ಞೆ ಇತ್ತು. ಆಕೆ ನಶೆಯಲ್ಲಿದ್ದಳು. ಕೆಲವೇ ಕ್ಷಣದಲ್ಲಿ ಆಕೆ ಪ್ರಜ್ಞೆ ಕಳೆದುಕೊಂಡಿದ್ದಳು. ಮನೆಯವರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಯುವಕರ ತಂಡ ಯುವತಿಯನ್ನು ರಾಣಿಪುರದ ನೇತ್ರಾವತಿ ನದಿ ತಟದ ಬಳಿಯ ಮನೆಗೆ ಕರೆತಂದು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಉದ್ಯೋಗ ಅರಸಿ ಬಂದಿದ್ದ ಪಶ್ಚಿಮ ಬಂಗಾಳ ಮೂಲದ ಯುವತಿ ಕೇರಳದ ಉಪ್ಪಳ ಎಂಬಲ್ಲಿ ವಾಸವಾಗಿದ್ದು, ಸ್ನೇಹಿತನ ಜೊತೆಗೆ ಮಂಗಳೂರಿಗೆ ಬಂದಿದ್ದ ವೇಳೆ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಆಕೆ ಒಬ್ಬಳೇ ಮಧ್ಯರಾತ್ರಿ ಹೊರಗೆ ಬಂದಿದ್ದಾಳೆ. ಈ ವೇಳೆ ಸಿಕ್ಕ ರಿಕ್ಷಾ ಚಾಲಕನ ಬಳಿ ಸಹಾಯ ಕೇಳಿದ್ದಾಳೆ. ಸಹಾಯ ಮಾಡುವ ನೆಪದಲ್ಲಿ ತನ್ನ ವಾಹನದಲ್ಲಿ ಕುಳ್ಳಿರಿಸಿದ ಚಾಲಕ ಆಕೆಗೆ ಅಮಲು ಪದಾರ್ಥ ನೀಡಿ ಸ್ನೇಹಿತರ ಜೊತೆಗೆ ಸೇರಿ ಕೃತ್ಯವೆಸಗಿದ್ದಾನೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಆಕೆಗೆ ಪ್ರಜ್ಞೆ ಬಂದರೂ ನಶೆಯಲ್ಲಿದ್ದ ಕಾರಣ ಮಾತನಾಡಲಾಗದ ಸ್ಥಿತಿಯಲ್ಲಿದ್ದಳು. ಈ ಪ್ರದೇಶದಲ್ಲಿ ನಿರ್ಜನ ಮನೆಯೊಂದಿದೆ. ಅಲ್ಲಿಗೆ ತಡರಾತ್ರಿ ಗಾಂಜಾ, ಅಮಲು ವ್ಯಸನಿಗಳು ನಿತ್ಯ ಬರುತ್ತಿರುತ್ತಾರೆ. ಅಲ್ಲೇ ನಿನ್ನೆ ತಡರಾತ್ರಿ ನಾಲ್ವರ ತಂಡವೂ ಇತ್ತು. ಯುವತಿ ಮನೆಯೊಂದರ ಬಾಗಿಲು ಬಡಿಯುತ್ತಿದ್ದಂತೆ ಆ ನಾಲ್ವರು ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ. ನಶೆಯಲ್ಲಿರುವ ಯುವತಿ ಪೊಲೀಸರ ಪ್ರಶ್ನೆಗಳಿಗೆ ಸರಿಯಾಗಿ ಮಾಹಿತಿ ನೀಡಿಲ್ಲ. ಈ ಬಗ್ಗೆ ಉಳ್ಳಾಲ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ