ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಬಜರಂಗದಳ ಮುಖಂಡನ ಮೇಲೆ ಹಲ್ಲೆ – ಆರೋಪಿ ಆಸೀಫ್ ಬಂಧನ
ಮಂಗಳೂರು: ಎರಡು ಕಾರುಗಳ ನಡುವೆ ನಡೆದ ಸಣ್ಣ ಆಕ್ಸಿಡೆಂಟ್ ವಿಚಾರದಲ್ಲಿ ಇಬ್ಬರು ಚಾಲಕರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಬುಧವಾರ ರಾತ್ರಿ ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಸಂಭವಿಸಿದೆ. ಹೊಯ್ ಕೈ ಪ್ರಕರಣವು ಉಳ್ಳಾಲ ಠಾಣೆಯ ಮೆಟ್ಟಿಲೇರಿದ್ದು,ಮಾತುಕತೆಗೆ ತೆರಳಿದ್ದ ಬಜರಂಗದಳ ಮುಖಂಡನ ಮೇಲೆ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಇದೀಗ ಹಲ್ಲೆ ಮಾಡಿರ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಅರ್ಜುನ್ ಮಾಡೂರು ಹಲ್ಲೆಗೊಳಗಾದವರು. ಕಾಸರಗೋಡು ಜಿಲ್ಲೆಯ ಹೊಸಂಗಡಿ, ಕಡಂಬಾರು ಸರಕಾರಿ ಶಾಲೆಯ ಬಳಿಯ ನಿವಾಸಿ ಮುಹಮ್ಮದ್ ಆಸಿಫ್(33) ಹಲ್ಲೆ ಆರೋಪಿ. ಈತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಬುಧವಾರ ರಾತ್ರಿ ಕುಂಪಲದ ಶರತ್ ಮತ್ತು ಕೇರಳದ ಇಬ್ರಾಹೀಂ ಖಲೀಲ್ ಎಂಬವರ ಕಾರುಗಳ ಮಧ್ಯೆ ಅಪಘಾತ ಉಂಟಾಗಿತ್ತು. ಈ ವೇಳೆ ವಾಗ್ವಾದ ನಡೆದು ಖಲೀಲ್ ಮತ್ತು ಆತನ ಸಹೋದರ ಆಸಿಫ್ ಸೇರಿ ಶರತ್ ಗೆ ಕೈಯಲ್ಲಿ ಹಲ್ಲೆಗೈದಿದ್ದಾರೆಂದು ಆರೋಪಿಸಲಾಗಿದ್ದು, ಈ ಪ್ರಕರಣವು ಉಳ್ಳಾಲ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು.
ವಿಷಯ ತಿಳಿದು ತಡರಾತ್ರಿ ಶರತ್ ರ ಪರಿಚಯಸ್ಥ ಅರ್ಜುನ್ ಮಾಡೂರು ಉಳ್ಳಾಲ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಅಲ್ಲಿ ಕಾರು ಚಾಲಕರಾದ ಶರತ್, ಖಲೀಲ್ ಜತೆ ಮಾತುಕತೆ ನಡೆಸುತ್ತಿದ್ದ ವೇಳೆ ಅರ್ಜುನ್ ಮೇಲೆ ಆರೋಪಿ ಆಸಿಫ್ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ. ಈ ಸಂಬಂಧ ಆಸಿಫ್ ನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಮಧ್ಯರಾತ್ರಿ ಠಾಣೆಯ ಮುಂದೆ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದಾರೆ. ಅರ್ಜುನ್ ಗೆ ಹಲ್ಲೆ ನಡೆಸಿದ ಆರೋಪಿ ಆಸಿಫ್ ನನ್ನ ತಮ್ಮ ವಶಕ್ಕೆ ನೀಡುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಡಿಸಿಪಿ ಸಿದ್ಧಾರ್ಥ್ ಗೋಯಲ್, ಎಸಿಪಿ ಧನ್ಯ ನಾಯಕ್ ಅವರು ಠಾಣೆಯ ಸುತ್ತಲೂ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಠಾಣೆಗೆ ಭೇಟಿ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ವಿಶ್ವ ಹಿಂದೂ ಪರಿಷತ್ ಮುಖಂಡರಾದ ಗೋಪಾಲ ಕುತ್ತಾರ್ ಅವರು ಆರೋಪಿ ಆಸಿಫ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ವಿಚಾರ ತಿಳಿಯುತ್ತಲೇ ತಡರಾತ್ರಿ ವೇಳೆ ಉಳ್ಳಾಲ ಠಾಣೆಗೆ ಭೇಟಿ ನೀಡಿದ ಬಿಜೆಪಿ ಮುಖಂಡ ಅರುಣ್ ಪುತ್ತಿಲ ಅವರು, ಠಾಣೆಯೊಳಗಡೆಯೇ ನಡೆದ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಆಗ್ರಹಿಸಿದರು.