Home Mangalorean News Kannada News ಉಳ್ಳಾಲ- ಬ್ರೇಕ್ ವಾಟರ್‍ಗಳ ಮರುವಿನ್ಯಾಸ: ಯು.ಟಿ. ಖಾದರ್

ಉಳ್ಳಾಲ- ಬ್ರೇಕ್ ವಾಟರ್‍ಗಳ ಮರುವಿನ್ಯಾಸ: ಯು.ಟಿ. ಖಾದರ್

Spread the love

ಮಂಗಳೂರು : ಉಳ್ಳಾಲ ಆಸುಪಾಸಿನಲ್ಲಿ ಕಡಲಕೊರತೆ ತೀವ್ರಗೊಳ್ಳಲು ಇಲ್ಲಿ ಸಮುದ್ರದಲ್ಲಿ ನಿರ್ಮಿಸಲಾಗಿರುವ ಬ್ರೇಕ್‍ವಾಟರ್‍ಗಳು ಕಾರಣವಾಗುತ್ತಿರುವುದರಿಂದ ಇವುಗಳನ್ನು ಮರುವಿನ್ಯಾಸಗೊಳಿಸಿ ನಿರ್ಮಿಸಲು ನಿರ್ಧರಿಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಅವರು ಬುಧವಾರ ಉಳ್ಳಾಲ ಸುತ್ತಮುತ್ತಲ ಕಡಲಕೊರತೆಯಿಂದ ತೊಂದರೆಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಈ ಮಾಹಿತಿ ನೀಡಿದರು. ಕಡಲಕೊರತೆ ನಿಯಂತ್ರಿಸಲು 232 ಕೋಟಿ ರೂ.ಗಳ ಶಾಶ್ವತ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಇದರಲ್ಲಿ 2 ಬ್ರೇಕ್‍ವಾಟರ್‍ಗಳ ಮರು ಜೋಡಣೆಯೂ ಸೇರಿದೆ. ಇದರ ಬಗ್ಗೆ ಬಂದರು ಸಚಿವರು ಮತ್ತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಈ ವರ್ಷ ವಿಪರೀತ ಗಾಳಿ ಬರುತ್ತಿರುವುದರಿಂದ ಕಡಲಕೊರತೆಯೂ ತೀವ್ರವಾಗುತ್ತಿದೆ. ಕರಾವಳಿಯ ಉದ್ದಗಲಕ್ಕೂ ಅಗತ್ಯವಿರುವ ಸ್ಥಳಗಳಲ್ಲಿ ಕಡಲಕೊರತೆಯಿಂದ ಅಪಾಯ ತಪ್ಪಿಸಲು ಸಂರಕ್ಷಣಾ ಕಾಮಗಾರಿ ನಡೆಸಲು ಯೋಜನೆ ರೂಪಿಸಲಾಗುವುದು. ಈಗಾಗಲೇ ಕಡಲಕೊರತೆ ನಿಯಂತ್ರಣ ಕಾಮಗಾರಿ ನಡೆದಿರುವ ಕಡೆ, ಅವುಗಳನ್ನು ಬಲಪಡಿಸಲು ಇನ್ನಷ್ಟು ಕಾಮಗಾರಿ ನಡೆಯಲಿದೆ ಎಂದು ಸಚಿವರು ತಿಳಿಸಿದರು.

ಜರ್ಮನ್ ತಂತ್ರಜ್ಞಾನದಲ್ಲಿ ತಲಪಾಡಿಯಿಂದ ಕಾರವಾರದವರೆಗೆ, ಅಲ್ಲಿಂದ ಗುಜರಾತ್ ತೀರದವರೆಗೆ ಅಗತ್ಯವಿರುವ ಕಡೆಗೆ ಸಂರಕ್ಷಣಾ ಕಾಮಗಾರಿ ಕೈಗೆತ್ತಿಕೊಳ್ಳಲು ಹಿಂದಿನ ಕೇಂದ್ರ ಸರಕಾರದಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಸಚಿವ ಯು.ಟಿ. ಖಾದರ್ ಮಾಹಿತಿ ನೀಡಿದರು.

ಉಳ್ಳಾಲ ಸುತ್ತಮುತ್ತಲ ಕಡಲಕೊರತೆಯಿಂದ ಜನಸಾಮಾನ್ಯರಿಗೆ ತೊಂದರೆ ತಪ್ಪಿಸಲು ಅಗತ್ಯ ನೆರವು ನೀಡಲು ಸರಕಾರ ಬದ್ದವಾಗಿದೆ. ಅಗತ್ಯಬಿದ್ದಲ್ಲಿ ಪರಿಹಾರ ಕೇಂದ್ರವನ್ನು ತೆರೆಯಲಾಗುವುದು. ಸ್ಥಳೀಯಾಡಳಿತವು ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದೆ ಎಂದರು.

ಸಚಿವರು ಉಳ್ಳಾಲ ಪರಿಸರದ ಕೋಡಿ, ಕೋಟೆಪುರ, ಖಿಲಿರಿಯಾ ನಗರ ಮತ್ತಿತರ ಕಡೆ ಭೇಟಿ ನೀಡಿ ಕಡಲಕೊರತೆ ವೀಕ್ಷಿಸಿದರು. ಉಳ್ಳಾಲ ಪುರಸಭಾಧ್ಯಕ್ಷೆ ಗಿರಿಜಾ ಬಾಯಿ, ಉಪಾಧ್ಯಕ್ಷೆ ರಝಿಯಾ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮಂಗಳೂರು ತಹಶೀಲ್ದಾರ್ ಜೀನ್ ತಾವ್ರೋ, ಬಂದರು ಇಲಾಖೆ ಅಭಿಯಂತರ ಮಾದೇಗೌಡ ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version