ಉಳ್ಳಾಲ ರಾಜು ಕೋಟ್ಯಾನ್ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಮಂಗಳೂರು: 2016 ನೇ ಇಸವಿಯಲ್ಲಿ ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮೊಗವೀರ ಪಟ್ಟಣ ನಿವಾಸಿ ರಾಜೇಶ್ ಕೋಟ್ಯಾನ್ @ ರಾಜು ಕೋಟ್ಯಾನ್ ಎಂಬುವವರ ಕೊಲೆ ನಡೆಸಿದ್ದ ನಾಲ್ಕು ಮಂದಿ ಆರೋಪಿಗಳಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿರುತ್ತದೆ.
ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 12-04-2016 ರಂದು ಉಳ್ಳಾಲ ಮೊಗವೀರಪಟ್ಟಣ ನಿವಾಸಿ ರಾಜೇಶ್ ಕೋಟ್ಯಾನ್ @ ರಾಜು ಕೋಟ್ಯಾನ್ ಎನ್ನುವವರನ್ನು ಆರೋಪಿಗಳು ಬೆಳಗ್ಗಿನ ಜಾವ 2-30 ಗಂಟೆಯಿಂದ ಮದ್ಯಾಹ್ನ 1-30 ಗಂಟೆಯ ಮಧ್ಯಾವಧಿಯಲ್ಲಿ ಉಳ್ಳಾಲ ಕೋಟೆಪುರ ಬರಕಾ ಓವರ್ ಸೀಸ್ ಫ್ಯಾಕ್ಟರಿಯ ಬಳಿಯಲ್ಲಿ ಅವರಿಗೆ ಮರದ ಕಟ್ಟಿಗೆಗಳಿಂದ ಹೊಡೆದು ಮುಖಕ್ಕೆ ಕಲ್ಲು ಹೊತ್ತು ಹಾಕಿ ಜಜ್ಜಿ ಕೊಲೆ ಮಾಡಿದ್ದರು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೊ ನಂ: 208/2016 ಕಲಂ: 302, 201 ಐಪಿಸಿ ಯಂತೆ ಪ್ರಕರಣ ದಾಖಲಾಗಿತ್ತು. ಈ ಕೊಲೆ ಪ್ರಕರಣವು ಮಂಗಳೂರು ನಗರದಲ್ಲಿ ಅಶಾಂತಿ ವಾತಾವರಣವನ್ನು ಸೃಷ್ಠಿಸಿತ್ತು.
ಆ ಪ್ರಕರಣದ ಸಮಯದಲ್ಲಿ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಮಂಗಳೂರು ಸಿಸಿಬಿ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿಗಳಾದ 1) ಮೊಹಮ್ಮದ್ ಆಸೀಫ್ @ ಆಚಿ 2) ಮೊಹಮ್ಮದ್ ಸುಹೈಲ್ 3) ಅಬ್ದುಲ್ ಮುತಾಲಿಫ್ @ ಮುತ್ತು, 4) ಅಬ್ದುಲ್ ಅಸ್ವೀರ್ @ ಅಸ್ವೀರ್ @ ಅಚ್ಚು ಎಂಬವರನ್ನು ಹಾಗೂ ಕಾನೂನಿನ ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರನ್ನು ದಸ್ತಗಿರಿ ಮಾಡಿ ಪ್ರಕರಣವನ್ನು ಭೇಧಿಸಿದ್ದರು. ಆ ಪ್ರಕರಣದ ತನಿಖೆಯನ್ನು ಅಂದಿನ ಕೊಣಾಜೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾಗಿದ್ದ ಅಶೋಕ್ ಪಿ ರವರು ನಡೆಸಿ ಆರೋಪಿಗಳ ವಿರುದ್ಧ ಕಲಂ: 143, 148, 153(ಎ), 201, 302 ಜೊತೆಗೆ 149 ಐಪಿಸಿ ಯಂತೆ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಈ ಪ್ರಕರಣವು ಎಂಟು ವರ್ಷಗಳ ಕಾಲ ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಗೊಳಗಾಗಿರುತ್ತದೆ.
“ನ್ಯಾಯಾಲಯ ವಿಚಾರಣಾ ಕೋಶದಲ್ಲಿ” (Court Monitoring Cell) ನ ಅಧಿಕಾರಿ/ಸಿಬ್ಬಂದಿಯವರಿಗೆ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗ್ರವಾಲ್ ಐಪಿಎಸ್ ರವರು ಕಾಲಕಾಲಕ್ಕೆ ಸೂಕ್ತ ಮಾರ್ಗದರ್ಶನ ನೀಡಿರುತ್ತಾರೆ. ಆ ಪ್ರಕರಣವು ಮಾನ್ಯ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮಂಗಳೂರು ಇಲ್ಲಿ ವಿಚಾರಣೆ ನಡೆದು ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದ ಪ್ರಮುಖ ನಾಲ್ಕು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 25,000/- ರೂ ದಂಡವನ್ನು ವಿಧಿಸಿರುತ್ತದೆ. ಸರಕಾರದ ಪರವಾಗಿ ಹಿರಿಯ ಸರಕಾರಿ ಅಭಿಯೋಜಕರಾದ ಶ್ರೀಮತಿ ಜುಡಿತ್ ವೋಲ್ಗಾ ಮಾರ್ಗರೇಟ್ ಕ್ರಾಸ್ತ ರವರು ವಾದವನ್ನು ಮಂಡಿಸಿರುತ್ತಾರೆ.