ಉಳ್ಳಾಲ: ಸೆಲ್ಪಿ ತೆಗೆಯಲು ಹೋದ ಕುಟುಂಬದ ಮಗು ಸಮುದ್ರಪಾಲು

Spread the love

ಉಳ್ಳಾಲ: ಸೆಲ್ಪಿ ತೆಗೆಯಲು ಹೋದ ಕುಟುಂಬದ ಮಗು ಸಮುದ್ರಪಾಲು

ಉಳ್ಳಾಲ: ಸೋಮೇಶ್ವರ ಕಡಲ ಕಿನಾರೆಗೆ ವಿಹಾರಕ್ಕೆ ಬಂದಿದ್ದ ಬೆಂಗಳೂರು ಮೂಲದ ಕುಟುಂಬವೊಂದು ಸಮುದ್ರದ ಅಲೆಗಳಿಗೆ ಸಿಲುಕಿದ್ದು, 5 ವರ್ಷದ ಮಗುವೊಂದು ಮೃತಪಟ್ಟ ದಾರುಣ ಘಟನೆ ಸೋಮವಾರ ಪೂರ್ವಾಹ್ನ ನಡೆದಿದೆ. ಇದೇ ಸಂದರ್ಭ ಮೂವರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ.

ಸಮುದ್ರಕ್ಕಿಳಿದು ಮೊಬೈಲ್‌ನಲ್ಲಿ ಸೆಲ್ಫಿ ತೆಗೆಯುವ ಯತ್ನದಲ್ಲಿದ್ದ ಸಂದರ್ಭ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಸಮುದ್ರಪಾಲಾದ ಬಾಲಕಿಯನ್ನು ಮೈತ್ರಿ ಕೇಟ್ಕರ್(5) ಎಂದು ಗುರುತಿಸಲಾಗಿದೆ. ಪ್ರವಾಸಿಗರಾದ ಬೆಂಗಳೂರು ಬನಶಂಕರಿ ನಿವಾಸಿ ಚಿಂತಾಮಣಿ ಕೇಟ್ಕರ್ ಮತ್ತು ಶ್ರದ್ಧಾ ಕೇಟ್ಕರ್ ದಂಪತಿ ಇಬ್ಬರು ಪುತ್ರಿಯರೊಂದಿಗೆ ಇಂದು ಬೆಳಗ್ಗೆ 10:30ರ ಸುಮಾರಿಗೆ ಸೋಮೇಶ್ವರ ಕಡಲ ಕಿನಾರಕ್ಕೆ ವಿಹಾರ ಆಗಮಿಸಿದ್ದರು. ಈ ಸಂದರ್ಭ ಇವರೆಲ್ಲರೂ ಸಮುದ್ರಕ್ಕಿಳಿದು ಮೊಬೈಲ್ ಫೋನ್‌ನಲ್ಲಿ ಸೆಲ್ಫಿ ತೆಗೆಯುತ್ತಿದ್ದರೆನ್ನಲಾಗಿದೆ. ಆಗ ಇವರೆಲ್ಲರೂ ಬೃಹತ್ ಅಲೆಗಳ ಹೊಡೆತಕ್ಕೆ ಸಿಲುಕಿದ್ದಾರೆ. ಕೂಡಲೇ ಅವರನ್ನು ಲೈಫ್‌ಗಾರ್ಡ್ ಅಶೋಕ್ ರಕ್ಷಿಸಿದರು. ಬಳಿಕ ಅಸ್ವಸ್ಥಗೊಂಡಿದ್ದ ಅವರನ್ನು ಕೂಡಲೇ ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದ ಬಾಲಕಿ ಮೈತ್ರಿ ಕೇಟ್ಕರ್ ಮೃತಪಟ್ಟಿದ್ದಾಳೆ.

ಅಸ್ವಸ್ಥರ ಪೈಕಿ ಬಾಲಕಿ ಗಾರ್ಜಿ ಕೇಟ್ಕರ್(7) ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.


Spread the love