ಋಣ ಪರಿಹಾರ ಕಾಯ್ದೆ : ಸ್ಪಷ್ಟನೆ
ಮಂಗಳೂರು : ಋಣಮುಕ್ತ ಕಾಯ್ದೆಯನ್ವಯ ಖಾಸಗಿ ಲೇವಾದೇವಿದಾರರಿಂದ ಮತ್ತು ಗಿರವಿದಾರರಿಂದ ಸಾಲ ಪಡೆದಿದ್ದಲ್ಲಿ ಕರ್ನಾಟಕ ಋಣ ಪರಿಹಾರ ಕಾಯ್ದೆ 2018 ರಂತೆ ಪರಿಹಾರ ಪಡೆಯಲು ಅರ್ಹರಿರುವುದಾಗಿ ಪ್ರಕಟಿಸಲಾಗಿದ್ದು, ಆದಾಗ್ಯೂ ಅನೇಕ ಫಲಾನುಭವಿಗಳು ದೂರವಾಣಿ ಕರೆ ಮಾಡಿ ಸಹಕಾರಿ ಸಂಘಗಳಲ್ಲಿ, ಬ್ಯಾಂಕ್‍ಗಳಲ್ಲಿ, ಇತರೇ ಹಣಕಾಸು ಸಂಸ್ಥೆಯಿಂದ ಪಡಕೊಂಡ ಸಾಲ, ಚಿನ್ನಾಭರಣಗಳನ್ನು ಅಡವಿಟ್ಟು ಪಡೆದ ಸಾಲಗಳಿಗೆ ಅನ್ವಯಿಸುತ್ತದೆಯಾ ಎಂಬ ಬಗ್ಗೆ ವಿಚಾರಿಸುತ್ತಿದ್ದಾರೆ.
ಈ ಬಗ್ಗೆ ಸ್ಪಷ್ಟಪಡಿಸುವುದೇನೆಂದರೆ, ಸರಕಾರಿ ಕಂಪೆನಿಗಳು/ ಜೀವವಿಮಾ ನಿಗಮ/ ಸಹಕಾರಿ ಸಂಘಗಳು/ ಸೌಹಾರ್ದ ಸಹಕಾರಿ ಸಂಘಗಳು / ಬ್ಯಾಂಕುಗಳು/ ಕರ್ನಾಟಕ ಸಹಕಾರಿ ಸಂಘಗಳ ನೋಂದಣಿ ಕಾಯ್ದೆ 1960 ರಡಿ ನೊಂದಾವಣೆ ಆದ ಅತೀ ಸಣ್ಣ ಹಣಕಾಸು ಸಂಸ್ಥೆಗಳು , ಚಿಟ್ ಫಂಡ್ ಕಾಯ್ದೆಯನ್ವಯ ನೊಂದಾವಣೆಗೊಂಡ ಚಿಟ್ ಕಂಪೆನಿಗಳು ಕರ್ನಾಟಕ ಋಣ ಪರಿಹಾರ ಕಾಯ್ದೆ 2018 ರ ವ್ಯಾಪ್ತಿಗೆ ಒಳಪಡುವುದಿಲ್ಲ.
ಖಾಸಗಿ ಲೇವಾದೇವಿದಾರರಿಂದ ಮತ್ತು ನೊಂದಾವಣೆಗೊಂಡಿರದ ಖಾಸಗಿ ಸಂಸ್ಥೆಯಿಂದ , ಪಡೆದ ಸಾಲವನ್ನು ಋಣ ಮುಕ್ತ ಕಾಯ್ದೆ 2018 ರಂತೆ ಪರಿಗಣಿಸಲು ಅವಕಾಶ ಇರುತ್ತದೆ.
ಅಲ್ಲದೆ, ಕರ್ನಾಟಕ ಋಣ ಪರಿಹಾರ ಕಾಯ್ದೆ 2018 ಕ್ಕೆ ಸಂಬಂಧಿಸಿ ಅರ್ಜಿ ಸಲ್ಲಿಸುವ ಸಂಬಂಧ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಅರ್ಜಿಯನ್ನು ಪುತ್ತೂರು ಸಹಾಯಕ ಆಯುಕ್ತರ ಕಚೇರಿಯಿಂದ ಉಚಿತವಾಗಿ ಪಡೆಯಬಹುದಾಗಿದೆ. ಇದರ ಹೊರತಾಗಿಯೂ, ಅರ್ಜಿಗೆ ಹಣ ನೀಡಿದ್ದಲ್ಲಿ , ಅರ್ಜಿ ಬರೆಯುವುದಕ್ಕೆ ಹಣ ನೀಡಿದ್ದಲ್ಲಿ , ಜಿಲ್ಲಾ ಆಡಳಿತ ಅಥವಾ ತಾಲೂಕು ಆಡಳಿತ ಹೊಣೆ ಆಗಿರುವುದಿಲ್ಲ ಎಂದು ಸಹಾಯಕ ಆಯುಕ್ತರು ಪುತ್ತೂರು ಉಪವಿಭಾಗ ಇವರ ಪ್ರಕಟಣೆ ತಿಳಿಸಿದೆ.