ಎಂಡೋಸಲ್ಫಾನ್ ಸಮಸ್ಯೆ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ
ಬೆಳ್ತಂಗಡಿ: ಎಂಡೋಸಲ್ಫಾನ್ ಸಲ್ಫಾನ್ ಸಮಸ್ಯೆಗೆ ನೊಂದು ಒಂದೇ ಕುಟುಂಬದ ನಾಲ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ನಡೆದಿದೆ.
ಮೃತರನ್ನು ಬಾಬುಗೌಡ, ಆತನ ಹೆಂಡತಿ ಗಂಗಮ್ಮ ಮತ್ತು ಇಬ್ಬರು ಮಕ್ಕಳಾದ ಸದಾನಂದ ಮತ್ತು ನಿತ್ಯಾನಂದ ಎಂದು ಗುರುತಿಸಲಾಗಿದೆ.
ಮೃತರಲ್ಲಿ ಸದಾನಂದ ಎಂಬವರು ಎಂಡೋಸಲ್ಫಾನ್ ಪೀಡಿತರಾಗಿದ್ದು ಇದರಿಂದ ಕುಟುಂಬ ನೊಂದಿತ್ತು ಎನ್ನಲಾಗಿದೆ. ಬಾಬುಗೌಡ ಮತ್ತು ನಿತ್ಯಾನಂದ ಆರೋಗ್ಯವಂತರಾಗಿದ್ದು, ಮೃತ ಸದಾನಂದ ಸಂಪೂರ್ಣ ಮಾನಸಿಕ ಅಸ್ವಸ್ಥನಾಗಿದ್ದು ಗಂಗಮ್ಮ ಕೂಡ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ನಿತ್ಯಾನಂದ ಆರು ತಿಂಗಳ ಹಿಂದೆ ಅಫಘಾತಕ್ಕಿಡಾಗಿದ್ದರು.
ಜನವರಿ 5 ರಂದು ನಿತ್ಯಾನಂದ ಮನೆಯ ಬಳಿಯ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಮನೆಯವರಿಗೆ ಆತ್ಮಹತ್ಯೆಯ ವಿಷಯ ತಿಳಿದು ಸದನಾಂದನ ಜೊತೆಗೆ ಬಾಬುಗೌಡ ಮತ್ತು ಗಂಗಮ್ಮ ಕೂಡ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಂಡೋ ಪೀಡಿತರಿಗೆ ವಿಶೇಷ ಆಸ್ಪತ್ರೆ ಸ್ಥಾಪಿಸಲು ಕಾರ್ಣಿಕ್ ಆಗ್ರಹ
ಪ್ರಕೃತಿಯ ಮೇಲೆ ಪ್ರಭುತ್ವ ಸಾಧಿಸಲು ಹೊರಟಿರುವ ಮಾನವನ ಅಹಂಕಾರದ ಪ್ರಯತ್ನದಿಂದಾಗಿ ಘೋರ ಪರಿಣಾಮಗಳಿಗೆ ಕರ್ನಾಟಕ ಕೇರಳ ಗಡಿ ಪ್ರದೇಶದ ಎಂಡೋಸಲ್ಫಾನ್ ದುರಂತವೊಂದು ಜ್ವಲಂತ ಸಾಕ್ಷಿ. ಸರ್ಕಾರದ ಅಕ್ಷಮ್ಯ ನಿರ್ಲಕ್ಶ್ಯ ಮತ್ತು ಬೇಜವಾಬ್ದಾರಿ ತನದಿಂದಾಗಿ ೪ ಜನ ಎಂಡೋಸಲ್ಫಾನ್ ಸಂತ್ರಸ್ತರ ಆತ್ಮಹತ್ಯೆಗೆ ಶರಣಾಗಿರುವುದು ಅತ್ಯಂತ ವಿಷಾದನೀಯ. ಇನ್ನಾದರೂ ಸರ್ಕಾರ ಕಣ್ಣು ತೆರೆಯಬಹುದೆಂದು ಭಾವಿಸುತ್ತೇನೆ. ನಮ್ಮನ್ನಗಲಿದ ಸಂತ್ರಸ್ಥರ ಆತ್ಮಕ್ಕೆ ಚಿರ ಶಾಂತಿಯನ್ನು ಕೋರುತ್ತಾ, ಆ ಕುಟುಂಬಗಳಿಗೆ ಸಂತ್ವಾನ ಹೇಳುತ್ತಾ, ಎಂಡೋಸಲ್ಫಾನ್ ಸಂತ್ರಸ್ಥರಿಗೆ ಹಾಗೂ ಅವರ ಕುಟುಂಬಗಳಿಗೆ ಯುದ್ದೋಪಾಧಿಯಲ್ಲಿ ಅಗತ್ಯ ಸೌಲಭ್ಯಗಳನ್ನು ಮತ್ತು ವೈದ್ಯಕೀಯ ಅವಶ್ಯಕತೆಗಳನ್ನು ಪೂರೈಸುವ ನಾಗರಿಕ ಜವಾಬ್ದಾರಿ ಚುನಾಯಿತ ಸರ್ಕಾರದ ಮೇಲಿದೆ. ರಾಜ್ಯ ಸರ್ಕಾರ ಈ ಕೂಡಲೇ ಕೇರಳ ಸರ್ಕಾರದ ಮಾದರಿಯನ್ನಾದರೂ ಅನುಸರಿಸಿ ಸಂತ್ರಸ್ತರ ಕುಟುಂಬಗಳ ನಿರ್ವಹಣೆಗಾಗಿ ಮಾಸಿಕ ಸಹಾಯ ಧನವನ್ನು ಬಿಡುಗಡೆ ಮಾಡುವಂತೆ ಹಾಗೂ ಸಂತ್ರಸ್ತರಿಗೆ ವಿಶೇಷ ವೈದ್ಯಕೀಯ ಶುಷೃಶೆ ನಿರ್ವಹಿಸಲು ಬೇಕಾಗಿರುವ ವಿಶೇಷ ಆಸ್ಪತ್ರೆಯನ್ನು ಸ್ಥಾಪಿಸುವಂತೆ ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆಗ್ರಹಿಸಿದ್ದಾರೆ.