ಮಂಗಳೂರು: ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಐಪಿಎಲ್ ಮಾದರಿಯಲ್ಲಿ ಡಿಸೆಂಬರ್ 15ರಿಂದ ಡಿಸೆಂಬರ್ 27ರವರೆಗೆ ನಡೆಯಲಿರುವ ಮಂಗಳೂರು ಪ್ರೀಮಿಯರ್ ಲೀಗ್-2015 (ಎಂಪಿಎಲ್) ಟಿ-20 ಕ್ರಿಕೆಟ್ ಪಂದ್ಯಾವಳಿಯ ಲಾಂಛನ ಬಿಡುಗಡೆ ಕಾರ್ಯಕ್ರಮ ರವಿವಾರ ಮುಸ್ಸಂಜೆ ನಗರದ ಫಿಝಾ ಫೋರಂ ಮಾಲ್ನಲ್ಲಿ ನಡೆಯಿತು.
ಪಂದ್ಯಾವಳಿಯ ಲಾಂಛನವನ್ನು ರಾಜ್ಯ ಯುವಜನ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಮಂಗಳೂರಿನಲ್ಲಿ ಕ್ರಿಕೆಟ್ ಕ್ರೀಡಾಂಗಣದ ಅಗತ್ಯವಿದೆ. ಈ ನಿಟ್ಟಿ ರೂಪುರೇಷೆ ಸಿದ್ಧಗೊಳ್ಳುತ್ತಿದ್ದು, ಶೀಘ್ರದಲ್ಲೇ ಕ್ರೀಡಾಂಗಣ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದರು.
ಶಾಸಕರಾದ ಜೆ.ಆರ್.ಲೋಬೊ ಮತ್ತು ಬಿ.ಎ.ಮೊಯ್ದಿನ್ ಬಾವ ಅವರು ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ 12 ತಂಡಗಳ ಹೆಸರುಗಳನ್ನು ಘೋಷಿಸಿದರು. ಅಲ್ಲದೇ ಆಟಗಾರರ ವಿಭಿನ್ನ ಟೀ ಶರ್ಟ್ಗಳನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಎಂಪಿಎಲ್ನ ಟೈಟಲ್ ಪ್ರಾಯೋಜಕ ಹಾಗೂ ಸೌದಿ ಅರೇಬಿಯಾದ ಅಮ್ಯಾಕೊ ಸಂಸ್ಥೆಯ ಸಿಇಒ ಆಸಿಫ್ ಮುಹಮ್ಮದ್, ಸೌದಿ ಅರೇಬಿಯಾದ ಅಲ್ ಮುಝೈನ್ ಗ್ರೂಪ್ ಆಫ್ ಕಂಪೆನಿಯ ಅಧ್ಯಕ್ಷ ಝಕರಿಯಾ ಜೋಕಟ್ಟೆ, ಯುಎಇ ಖುಷಿ ಗ್ರೂಪ್ ಆಫ್ ಕಂಪೆನಿಯ ಅಧ್ಯಕ್ಷ ಶೇಖ್ ಮುಹಮ್ಮದ್ ಶರೀಫ್, ಉದ್ಯಮಿಗಳಾದ ಇಮ್ರಾನ್ ಹಸನ್, ಯೂನುಸ್, ಕ್ಯಾನ್ಸರ್ ತಜ್ಞ ಡಾ.ಜಲಾಲುದ್ದೀನ್ ಅಖ್ತರ್, ಎಂಪಿಎಲ್ ಸಲಹಾ ಸಮಿತಿಯ ಸದಸ್ಯ ಹಾಗೂ ಹಿದಾಯ ಫೌಂಡೇಶನ್ನ ಕಾರ್ಯದರ್ಶಿ ಹನೀಫ್ ಹಾಜಿ ಗೋಳ್ತಮಜಲು, ಮಾಜಿ ಮೇಯರ್ ಮಹಾಬಲ ಮಾರ್ಲ, ಕೆಆರ್ಪಿಎ ಕಾರ್ಯದರ್ಶಿ ಎ.ವಿ.ಶಶಿಧರ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಕೆಪಿಎಲ್ ಕ್ರಿಕೆಟ್ ಲೀಗ್ಗೆ ಮಂಗಳೂರು ವಲಯದಿಂದ ಆಯ್ಕೆಯಾಗಿರುವ ಆಟಗಾರರಿಗೆ ಪ್ರಶಂಸನಾ ಪತ್ರವನ್ನು ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಮನೋರಂಜನಾ ಕಾರ್ಯಕ್ರಮಗಳು ನಡೆದವು.
12 ತಂಡಗಳ ಹೆಸರು ಹೀಗಿವೆ…
- .ಯುನೈಟೆಡ್ ಉಳ್ಳಾಲ
- ಕರಾವಳಿ ವಾರಿಯರ್ಸ್
- ಉಡುಪಿ ಟೈಗರ್ಸ್
- ಕುಶಿ ಸೂಪರ್
- ಬೆದ್ರ ಬುಲ್ಸ್
- ನಾರ್ದನ್ ಶೈನ್ ಬೈಕಂಪಾಡಿ
- ಕೋಸ್ಟಲ್ ಡೈಜೆಸ್ಟ್ ಮಂಗಳೂರು
- ಓಶಿಯನ್ ಶಾಕ್ರ್ಸ್ ಕುಡ್ಲ
- ಬಜ್ಪೆ ಜಾಗರ್ಸ್
- ಮಾಯೆಸ್ಟ್ರೊ ಟೈಟಲ್ರ್ಸ್ ಸೆಂಟ್ರಲ್
- ರೋಯಲ್ ಮಿಶನ್ಸ್ ಮೂಡುಬಿದಿರೆ
- ಸುರತ್ಕಲ್ ಸ್ಟ್ರೈಕರ್ಸ್
ಮಂಗಳೂರು ಪ್ರೀಮಿಯರ್ ಲೀಗ್-2015 (ಎಂಪಿಎಲ್) ಟಿ-20 ಕ್ರಿಕೆಟ್ ಪಂದ್ಯಾವಳಿಯು ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ನ ಮಾರ್ಗದರ್ಶನದಲ್ಲಿ ಕರ್ನಾಟಕ ರೀಜನಲ್ ಕ್ರಿಕೆಟ್ ಅಕಾಡೆಮಿ ಮತ್ತು ನಗರದ ಸ್ಥಳೀಯ ಕ್ರಿಕೆಟ್ ಸಂಘಟನೆಯ ಸಹಯೋಗದೊಂದಿಗೆ ಡಿಸೆಂಬರ್ 15ರಿಂದ ಡಿಸೆಂಬರ್ 27ರವರೆಗೆ ಪಣಂಬೂರಿನ ಎನ್ಎಂಪಿಟಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ವಿಜೇತ ಪ್ರಥಮ ತಂಡಕ್ಕೆ ಎಂಪಿಎಲ್ ಟ್ರೋಫಿ ಹಾಗೂ 4 ಲಕ್ಷ ನಗದು ಮತ್ತು ದ್ವಿತೀಯ ವಿಜೇತ ತಂಡಕ್ಕೆ ಟ್ರೋಫಿ ಹಾಗೂ 2 ಲಕ್ಷ ನಗದು ಬಹುಮಾನ ದೊರೆಯಲಿದೆ. ಪ್ರತಿದಿನ ಮೂರು ಪಂದ್ಯಗಳು ನಡೆಯಲಿದ್ದು, ಅವುಗಳಲ್ಲಿ ಒಂದು ಹೊನಲು ಬೆಳಕಿನ ಪಂದ್ಯವಾಗಿರುತ್ತದೆ.
ಮಂಗಳೂರು: `ತೆನಸ್ ಪರ್ಬ’ದಲ್ಲಿ ಮೇಳೈಸಿದ ತುಳುನಾಡ ವೈಭವ!
ಮಂಗಳೂರು: ನಗರದ ಕೋಟಿಚೆನ್ನಯ ಯುವ ವೇದಿಕೆಯು ರೋಟರ್ಯಾಕ್ಟ್ ಮಂಗಳೂರು ಸಿಟಿ ಮತ್ತು ಬರ್ಕೆ ಫ್ರೆಂಡ್ಸ್ ಸಹಕಾರದೊಂದಿಗೆ ಹಂಪಕಟ್ಟೆಯ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ `ತೆನಸ್ ಪರ್ಬ’ ಕಾರ್ಯಕ್ರಮ ತುಳುನಾಡಿನ ವೈಭವ ಪ್ರದರ್ಶನದ ವೇದಿಕೆಯಾಗಿ ಶೋಭಿಸಿತು.
`ತೆನಸ್ ಪರ್ಬ’ಕ್ಕೆ ಕಂಕನಾಡಿ ಬ್ರಹ್ಮಬೈದರ್ಕಳ ಕ್ಷೇತ್ರದ ಅಧ್ಯಕ್ಷ ಕೆ.ಚಿತ್ತರಂಜನ್ ಚಾಲನೆ ನೀಡಿದರು. ಜಾನಪದ ವಿದ್ವಾಂಸ ಮುದ್ದು ಮೂಡುಬೆಳ್ಳೆ ಉಪನ್ಯಾಸ ನೀಡಿ, ಹಿರಿಯರು ಶಿಕ್ಷಣದಿಂದ ವಂಚಿತರಾಗಿದ್ದರೂ ಬದುಕಿನಲ್ಲಿ ತುಳುನಾಡಿನ ಸಂಸ್ಕøತಿಯನ್ನು ಅನುಸರಿಸಿಕೊಂಡು ಬಂದವರು. ಇದೀಗ `ತೆನಸ್ಪರ್ಬ’ದ ಮೂಲಕ ನಗರದಲ್ಲಿ ತುಳು ಸಂಸ್ಕøತಿಯ ಅನಾವರಣವಾದಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಘು ಇಡ್ಕಿದು ಮುಖ್ಯ ಅತಿಥಿಯಾಗಿದ್ದರು. ರೋಟರಿ ಜಿಲ್ಲೆ 3181ರ ಮಾಜಿ ಗವರ್ನರ್ ಡಾ.ಬಿ.ದೇವದಾಸ್ ರೈ, ಮನಪಾ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ದೀಪಕ್ ಪೂಜಾರಿ, ಬರ್ಕೆ ಫ್ರೆಂಡ್ಸ್ನ ಗೌರವಾಧ್ಯಕ್ಷ ಯಜ್ಞೇಶ್ವರ ಬರ್ಕೆ, ಕುತ್ಲೂರು ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಯಶೋಧ ಅತಿಥಿಗಳಾಗಿದ್ದರು.
ಕೋಟಿ-ಚೆನ್ನಯ ಯುವ ವೇದಿಕೆ ಅಧ್ಯಕ್ಷ ನಿತಿನ್ ಉಳ್ಳಾಲ್ ಸ್ವಾಗತಿಸಿದರು. ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ರಾಜೇಶ್ ದೇವಾಡಿಗ ವಂದಿಸಿದರು. ನಾಗರಾಜ ರಾವ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ಕಾರ್ಯಕ್ರಮ ಸಂಘಟನೆಗೆ ಸಹಕರಿಸಿದ ದಿನೇಶ್ ಹೊಳ್ಳ, ರತ್ನಾಕರ ಕುಳಾಯಿ, ಪದ್ಮನಾಭ ಅವರನ್ನು ಗೌರವಿಸಲಾಯಿತು.
ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ `ತೆನಸ್ ಪರ್ಬ’ದಲ್ಲಿ ತುಳುನಾಡಿನ ವೈಭವ, ಕಲೆ, ಸಂಸ್ಕøತಿಯ ಜತೆಗೆ ತಿಂಡಿ ತಿನಿಸುಗಳ ಅನಾವರಣಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು
ಆಷಾಡ ತಿಂಗಳಲ್ಲಿ ತುಳುನಾಡಿನಲ್ಲಿ ತಯಾರಿಸಲಾಗುವ ವಿವಿಧ ತಿಂಡಿ ತಿನಿಸುಗಳು, ವಿವಿಧ ಔಷಧೀಯ ಸೊಪ್ಪು, ನಾರು-ಬೇರುಗಳ ಪ್ರದರ್ಶನ, ವೈವಿಧ್ಯಮಯ ಉಪ್ಪಿನಕಾಯಿ, ಹಪ್ಪಳ ಸೆಂಡಿಗೆ ಸೇರಿದಂತೆ ಸಾವಯವ ತರಕಾರಿ ಸಂತೆ, ಮನೆ ಮದ್ದುಗಳ ಪ್ರದರ್ಶನಗಳು ಇಲ್ಲಿ ಗಮನಸೆಳೆದವು. ಹಿಂದಿನ ಕಾಲದಲ್ಲಿ ತುಳುನಾಡಿನಲ್ಲಿ ಉಪಯೋಗಿಸಲ್ಪಡುತ್ತಿದ್ದ ನಾನಾ ರೀತಿಯ ಮರದಿಂದ ತಯಾರಿಸಿದ ಪರಿಕರಗಳು, ಹಳೆಯ ಕ್ಯಾಮರಾಗಳು, ಇಸ್ತ್ರಿ ಪೆಟ್ಟಿಗೆಗಳು, ಶಂಖ ಮೊದಲಾದವುಗಳ ಪ್ರದರ್ಶನ ಆಯೋಜಿಸಲಾಗಿತ್ತು. ಇದರ ಜತೆಗೆ ವೇದಿಕೆಯಲ್ಲಿ ಯಕ್ಷಗಾನ, ಆಟಿಕಳೆಂಜದ ಕುಣಿತ, ಪಾಡ್ಡನ ಕಿವಿಗೆ ಇಂಪು ನೀಡಿದವು.
ಇದೇ ವೇಳೆ ನಗರದ ಕಾಲೇಜು ವಿದ್ಯಾರ್ಥಿಗಳಿಗೆ ತುಳು ಜಾನಪದ ನೃತ್ಯ ಸ್ಫರ್ಧೆಯನ್ನೂ ಆಯೋಜಿಸಲಾಗಿತ್ತು. ಹೈಸ್ಕೂಲ್ ಮತ್ತು ಕಾಲೇಜು ವಿಭಾಗದಲ್ಲಿ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಿತು. ತೀರ್ಪುಗಾರರಾಗಿ ಗೌತಮ್ ಶೆಟ್ಟಿ, ಯತೀಶ್ ಸಾಲ್ಯಾನ್ ಹಾಗೂ ಸ್ವಪ್ನಾ ಸಹಕರಿಸಿದರು.
ನೃತ್ಯ ಸ್ಪರ್ಧೆ ವಿಜೇತರು: ಹೈಸ್ಕೂಲ್ ವಿಭಾಗ-(ಪ್ರ)ಶಿಫಾಲಿ ಮತ್ತು ತಂಡ ಕೆನರಾ ಗಲ್ರ್ಸ್ ಹೈಸ್ಕೂಲ್,(ದ್ವಿ) ದುರ್ಗಾ ಮತ್ತು ತಂಡ ಕೆನರಾ ಗಲ್ರ್ಸ್ ಹೈಸ್ಕೂಲ್, (ತೃ) ಆನಂದಾಶ್ರಮ ಹೈಸ್ಕೂಲ್ ಸೋಮೇಶ್ವರ. ಕಾಲೇಜು ವಿಭಾಗ- (ಪ್ರ) ಗೋಕರ್ಣನಾಥೇಶ್ವರ ಕಾಲೇಜು, (ದ್ವಿ) ರಾಮಕೃಷ್ಣ ಕಾಲೇಜು, (ತೃ) ಮಂಗಳೂರು ವಿವಿ ಕಾಲೇಜು.