ಎಟಿಎಂ ಕಾರ್ಡ್ ಬದಲಾಯಿಸಿ ಲಕ್ಷಾಂತರ ಹಣ ವಂಚನೆ –  ಮೂವರ ಬಂಧನ

Spread the love

ಎಟಿಎಂ ಕಾರ್ಡ್ ಬದಲಾಯಿಸಿ ಲಕ್ಷಾಂತರ ಹಣ ವಂಚನೆ –  ಮೂವರ ಬಂಧನ

ಅಜೆಕಾರು: ಅಜೆಕಾರು ಎಟಿಎಂ ಕೇಂದ್ರದಲ್ಲಿ ಹಣ ಡ್ರಾ ಮಾಡಲು ಹೋಗಿದ್ದವರನ್ನು ವಂಚಿಸಿ ಅವರ ಕಾರ್ಡ್‌ ಬಳಸಿಕೊಂಡು ಲಕ್ಷಾಂತರ ರೂ. ಹಣ ವರ್ಗಾವಣೆ ಮಾಡಿಕೊಂಡಿದ್ದ ಮೂವರು ಆರೋಪಿಗಳನ್ನು ಅಜೆಕಾರು ಪೊಲೀಸರು ಮರ್ಣೆ ಗ್ರಾಮದ ಕಾಡುಹೊಳೆ ಪೊಲೀಸ್‌ ಚೆಕ್‌ಪೋಸ್ಟ್‌ ಬಳಿ ಸೆ. 24ರಂದು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಶ್ರವಣ್‌ ಸತೀಶ ಮಿನಜಗಿ (27), ಪ್ರದೀಪ ಮಾರುತಿ ಇಂಗ್ಲೆ (27) ಹಾಗೂ ಕಿರಣ್‌ ಬಾಲು ಚೌಹಾಣ್‌ (28) ಬಂಧಿತ ಆರೋಪಿಗಳು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಮರ್ಣೆ ಗ್ರಾಮದ ಹೆನ್ರಿ ಡಿ’ಸೋಜಾ ಅವರು ಸೆ. 16ರಂದು ಅಜೆಕಾರು ಪೇಟೆಯಲ್ಲಿರುವ ಕರ್ನಾಟಕ ಬ್ಯಾಂಕ್‌ ಎಟಿಎಂ ಕೇಂದ್ರಕ್ಕೆ ಹಣ ತೆಗೆಯಲು ಬಂದಿದ್ದಾಗ ಅಲ್ಲಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಹಣ ತೆಗೆಯಲು ಸಹಾಯ ಮಾಡುವ ನಾಟಕವಾಡಿ ಅವರ ಗಮನವನ್ನು ಬೇರೆಡೆ ಸೆಳೆದು ಎಟಿಎಂ ಕಾರ್ಡ್‌ ಬದಲಾವಣೆ ಮಾಡಿ ಬೇರೊಂದು ಎಟಿಎಂ ಕಾರ್ಡ್‌ ನೀಡಿದ್ದರು. ಅನಂತರ ವಂಚಕರು ಕಾರ್ಕಳದ ಬ್ಯಾಂಕ್‌ ಆಫ್ ಬರೋಡ ಎಟಿಎಂನಿಂದ ಹೆನ್ರಿಯವರ ಎಟಿಎಂ ಕಾರ್ಡ್‌ ಬಳಸಿ 1 ಲಕ್ಷ ರೂ. ಹಣ ತೆಗೆದಿದ್ದರು. ಈ ಕುರಿತು ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದಲ್ಲಿ ಒಟ್ಟು ನಾಲ್ಕು ಮಂದಿ ಆರೋಪಿಗಳು ಭಾಗಿಯಾಗಿದ್ದು, ಇವರು, ಬೇರೆ ಬೇರೆ ರಾಜ್ಯಗಳಲ್ಲಿ ಸಂಚರಿಸುತ್ತ ಎಟಿಎಂನಲ್ಲಿ ಹಣ ತೆಗೆಯಲು ಬಂದ ಜನರ ಗಮನವನ್ನು ಬೇರೆಡೆ ಸೆಳೆದು ಅವರ ಎಟಿಎಂ ಕಾರ್ಡ್ನ್ನು ಬದಲಾವಣೆ ಮಾಡಿ ಅವರಿಗೆ ಬೇರೆ ಕಾರ್ಡ್ ನೀಡಿ, ಬಳಿಕ ಬೇರೆ ಎಟಿಎಮ್ ನಲ್ಲಿ ಈವರೆಗೆ ಲಕ್ಷಾಂತರ ಹಣವನ್ನು ಡ್ರಾ ಮಾಡಿದ್ದಾರೆ. ಇವರ ವಿರುದ್ಧ ಈ ತನಕ ಇದೇ ರೀತಿಯ ಸುಮಾರು 70ಕ್ಕೂ ಹೆಚ್ಚು ಪ್ರಕರಣ ದಾಖಲಾಗಿರುವುದು ಹಾಗೂ ಹಲವು ಪ್ರಕರಣದಲ್ಲಿ ಜೈಲು ಶಿಕ್ಷೆ ಆಗಿರುವುದು ಪ್ರಾಥಮಿಕ ತನಿಖೆ ಯಿಂದ ತಿಳಿದುಬಂದಿದೆ.

ಉಡುಪಿ ಎಸ್ಪಿ ಅರುಣ್ ಕೆ., ಹೆಚ್ಚುವರಿ ಎಸ್ಪಿಗಳಾದ ಸಿದ್ದಲಿಂಗಪ್ಪ ಎಸ್.ಟಿ, ಪರಮೇಶ್ವರ ಹೆಗಡೆ ನಿರ್ದೇಶನದಂತೆ ಕಾರ್ಕಳ ಡಿವೈಎಸ್ಪಿ ಅರವಿಂದ ಎನ್ ಕಲ್ಲಗುಜ್ಜಿ ಮಾರ್ಗದರ್ಶನದಲ್ಲಿ, ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪಡಿ.ಆರ್, ಎಸ್ಸೈ ರವಿ ಬಿ.ಕೆ ನೇತೃತ್ವದಲ್ಲಿ ಅಜೆಕಾರು ಠಾಣಾ ಎಸ್ಸೈ ಶುಭಕರ ಮತ್ತು ಸಿಬ್ಬಂದಿ ಸತೀಶ ಬೆಳ್ಳಿ, ಪ್ರದೀಪ ಶೆಟ್ಟಿ, ನಾಗೇಶ, ಪ್ರವೀಣ ಕುಮಾರ್, ಬಸವರಾಜ ಭದ್ರ ಶೆಟ್ಟಿ, ಶಶಿಕಲಾ, ಜಿಲ್ಲಾ ಪೊಲೀಸ್ ಕಚೇರಿಯ ಸಿಡಿಆರ್ ವಿಭಾಗದ ನಿತಿನ್ ಹಾಗೂ ದಿನೇಶ ಈ ಕಾರ್ಯಾಚರಣೆ ನಡೆಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments