ಎತ್ತಿನ ಹೊಳೆ ಯೋಜನೆಯಲ್ಲಿ ಡಿವಿಎಸ್ ಹಾಗೂ ಮೊಯ್ಲಿಗೆ ಕೋಟಿ ಕೋಟಿ ಲಂಚ: ಎಂ ಜಿ ಹೆಗಡೆ ಆರೋಪ
ಮಂಗಳೂರು: ಮಾಜಿ ಮುಖ್ಯಮಂತ್ರಿಗಳು ಹಾಲಿ ಸಂಸದರಾದ ಡಿ ವಿ ಸದಾನಂದ ಗೌಡ ಹಾಗೂ ವೀರಪ್ಪ ಮೊಯ್ಲಿ ಯವರು ನೀರಾವರಿ ಅಭಿವೃದ್ಧಿ ನಿಗಮದಿಂದ ಕೋಟಿ ಕೋಟಿ ಮೊತ್ತದ ಲಂಚವನ್ನು ಪಡೆದಿದ್ದಾರೆ ಎಂದು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಇದರ ಮುಖಂಡ ಎಂ ಜಿ ಹೆಗ್ಡೆ ಆರೋಪಿಸಿದ್ದಾರೆ.
ಈ ಕುರಿತು ಮಂಗಳೂರಿನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಹೆಗಡೆ ಅವರು ಕರ್ನಾಟಕ ನೀರಾವರಿ ಅಭಿವೃದ್ಧಿ ನಿಗಮೆನ್ನುವುದ ರಾಜಕೀಯ ಪಕ್ಷಗಳಿಗೆ ಹಣವನ್ನು ಸಂಗ್ರಹಿಸುವ ಪ್ರಮುಖ ಕೇಂದ್ರವಾಗಿದೆ. ಸದಾನಂದ ಗೌಡರು ನಿಗಮದಿಂದ 125 ಕೋಟಿ ಲಂಚವನ್ನು ಪಡೆದರೆ, ವೀರಪ್ಪ ಮೊಯ್ಲಿ ಹಾಗೂ ಸಿದ್ದರಾಮಯ್ಯ 175 ಕೋಟಿ ರೂ ಗಳನ್ನು ಲಂಚವಾಗಿ ಪಡೆದಿದ್ದಾರೆ. ಅಲ್ಲದೆ ಕಾಂಟ್ರಾಕ್ಟರ್ ಗಳ ಮೂಲಕ ಸ್ಥಳೀಯ ರಾಜಕಾರಣಿಗಳು 8 ಕೋಟಿ ಹಣವನ್ನು ಲಂಚವಾಗಿ ಪಡೆದಿದ್ದಾರೆ ಎಂದರು. ಅಷ್ಟೇ ಅಲ್ಲದೆ ಅರಣ್ಯ ಸಚಿವ ರಮಾನಾಥ ರೈ ಅವರ ಆಪ್ತರಿಗೆ ಎತ್ತಿನಹೊಳೆ ಯೋಜನೆಯಲ್ಲಿ ಮರಕಡಿಯುವ ಗುತ್ತಿಗೆ ನೀಡಲಾಗಿದೆ ಎಂದು ಆರೋಪಿಸಿದರು.
ವೀರಪ್ಪ ಮೊಯ್ಲಿ ಹಾಗೂ ಗೌಡರಿಗೆ ತಾಕತ್ತಿದ್ದರೆ ಮುಂದಿನ ಚುನಾವಣೆಗೆ ದಕ್ಷಿಣಕನ್ನಡದಿಂದ ಅಭ್ಯರ್ಥಿಗಳಾಗಲಿ. ಗೌಡರು ಪುತ್ತೂರಿನಿಂದ ವಿಧಾನ ಸಭೆಗೆ ಹಾಗೂ ಮೊಯ್ಲಿಯವುರ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಥಿಸುವಂತೆ ಸವಾಲು ಹಾಕಿದರು.
ಸಮಿತಿಯ ಅಧ್ಯಕ್ಷ ವಿಜಯ್ ಕುಮಾರ್ ಶೆಟ್ಟಿ ಮಾತನಾಡಿ ಜೂನ್ 11 ರಂದು ಪುರಭವನದಲ್ಲಿ ಕಾರ್ಯಕ್ರಮವೊಂದಕ್ಕೆ ಆಗಮಿಸುತ್ತಿರುವ ಸದಾನಂದ ಗೌಡ ಹಾಗೂ ವೀರಪ್ಪ ಮೊಯ್ಲಿಯವರಿಗೆ ಕರಿಪತಾಕೆಯನ್ನು ಪ್ರದರ್ಶನ ಮಾಡಲು ಉದ್ದೇಶಿಸಿಲಾಗಿದ್ದು ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.
ವೀರಪ್ಪ ಮೊಯ್ಲಿ ಇತ್ತೀಚೆಗೆ ಎತ್ತಿನಹೊಳೆ ಯೋಜನೆ 2018 ಕ್ಕೆ ಪೂರ್ಣಗೊಳ್ಳುತ್ತದೆ ಎಂಬ ಹೇಳಿಕೆ ನೀಡಿದ್ದಾರೆ ಆದರೆ ಈ ಹಿಂದಿನ ಹಲವು ಯೋಜನೆಗಳು ಸೀಮಿತ ಕಾಲಾವಧಿಯಲ್ಲಿ ಮುಗಿದ ಉದಾಹರಣೆಗಳಿಲ್ಲ. ಅವರು 2018 ರ ಲೋಕಸಭೆಯ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂತಹ ಸುಳ್ಳು ಹೇಳಿಕೆಯನ್ನು ನೀಡಿದ್ದಾರೆ ಎಂದರು ತಿಳಿಸಿದರು.
ಎತ್ತಿನಹೊಳೆ ಯೋಜನೆಯ ವಿರುದ್ದ ಸಮಿತಿ ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ ನಲ್ಲಿ ದೂರನ್ನು ದಾಖಲಿಸಿದ್ದು, ವಿಚಾರಣೆಯ ತೀರ್ಪನ್ನು ಫೆಬ್ರವರಿಯಲ್ಲಿ ಪ್ರಕಟಿಸಬೇಕಿತ್ತು. ಎನ್ ಜಿ ಟಿ ನಿಯಮದಂತೆ ನ್ಯಾಯಾಧೀಶರು ನೀಡಿದ ವರದಿಯ ಹಿನ್ನಲೆಯಲ್ಲಿ ಪರಿಸರ ತಜ್ಞರು ಅದಕ್ಕೆ ಸಹಿ ಹಾಕಬೇಕು. ನ್ಯಾಯಾಧೀಶ ಚೊಕ್ಕಲಿಂಗಂ ನೀಡಿದ 100 ಪುಟಗಳ ವರದಿಗೆ ಪರಿಸರ ತಜ್ಞ ನಾಗೇಂದ್ರನ್ ಸಹಿ ಮಾಡಲು ನಿರಾಕರಿಸಿದ್ದಾರೆ ಇದಕ್ಕೆ ಕಾನೂನು ಸಚಿವ ಡಿವಿ ಸದಾನಂದ ಗೌಡ ನೇರ ಹೊಣೆ ಎಂದರು.
ಇದೇ ವೇಳೆ ಮಾತನಾಡಿದ ಸತ್ಯಜಿತ್ ಸುರತ್ಕಲ್ ಸಮಿತಿಯ ವತಿಯಿಂದ ಮಂಗಳೂರು ಬಂದ್ ಕರೆ ಕೊಟ್ಟಾಗ ಜಿಲ್ಲಾಧಿಕಾರಿ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲು ವ್ಯವಸ್ಥೆಯನ್ನು ಮಾಡುವುದಾಗಿ ಹೇಳಿತ್ತು ಆದರೆ 15 ದಿನಗಳು ಕಳೆದರೂ ಸಹ ಈ ವರೆಗೆ ಜಿಲ್ಲಾಧಿಕಾರಿ ಆಗಲಿ ಜಿಲ್ಲಾಡಳಿತವಾಗಿ ಈ ಬಗ್ಗೆ ಸಕಾರಾತ್ಮಕ ವ್ಯವಸ್ಥೆಯನ್ನು ಮಾಡಿಲ್ಲ. ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ ಎಂದರು.
ಸುದ್ದಿಗೋಷ್ಟಿಯಲ್ಲಿ ಸಮಿತಿಯ ಸದಸ್ಯರಾದ ಹರಿಕೃಷ್ಣ ಬಂಟ್ವಾಳ್, ಯೋಗೀಶ್ ಶೆಟ್ಟಿ ಜೆಪ್ಪು, ಪುರುಷೋತ್ತಮ್ ಚಿತ್ರಪುರ ಇನ್ನಿತರರು ಉಪಸ್ಥಿತರಿದ್ದರು.