Home Mangalorean News Kannada News ಎನ್‍ಎಸ್‍ಎಸ್ ಬಲವರ್ಧನೆಗೆ ಕ್ರಮ- ಪ್ರಮೋದ್ ಮಧ್ವರಾಜ್

ಎನ್‍ಎಸ್‍ಎಸ್ ಬಲವರ್ಧನೆಗೆ ಕ್ರಮ- ಪ್ರಮೋದ್ ಮಧ್ವರಾಜ್

Spread the love

ಎನ್‍ಎಸ್‍ಎಸ್ ಬಲವರ್ಧನೆಗೆ ಕ್ರಮ- ಪ್ರಮೋದ್ ಮಧ್ವರಾಜ್

ಉಡುಪಿ: ರಾಷ್ಟ್ರೀಯ ಸೇವಾ ಯೋಜನೆಯನ್ನು ಕ್ರಿಯಾಶೀಲವಾಗಿಸಲು ತಾನು ಅಧಿಕಾರ ವಹಿಸಿಕೊಂಡ ತಕ್ಷಣ ನಿರ್ಧರಿಸಿದ್ದು, ದೇಶಕ್ಕೆ ಎನ್ ಎಸ್ ಎಸ್ ಕೊಡುಗೆ ಅವಶ್ಯ ಎಂದು ತಾನು ಮನಗಂಡಿದ್ದೇನೆ ಎಂದು ರಾಜ್ಯ ಮೀನುಗಾರಿಕೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಶನಿವಾರ ಜಿಲ್ಲಾಡಳಿತ ಉಡುಪಿ , ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ರಾಷ್ಟ್ರೀಯ ಸೇವಾ ಯೋಜನಾ ಕೋಶ, ಡಾ. ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಲಯನ್ಸ್ ಕ್ಲಬ್ ಪರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡು ಪುರಭವನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ರಾಷ್ಟ್ರೀಯ ಸೇವಾ ಯೋಜನೋತ್ಸವ ಕಾರ್ಯಕ್ರಮವು ಉದ್ಘಾಟಿಸಿ ಮಾತನಾಡಿದರು.

ಎನ್ ಎಸ್ ಎಸ್‍ನ್ನು ಆಧುನೀಕರಣಗೊಳಿಸಿ ವಿದ್ಯಾರ್ಥಿಗಳ ಸೇರ್ಪಡೆ ಗುರಿ ಮೂರು ಲಕ್ಷದಿಂದ 10ಲಕ್ಷಕ್ಕೆ ಏರಿಸಲಾಯಿತು. ಇದೀಗ ನಾವು 6ಲಕ್ಷ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಿದ್ದೇವೆ ಎಂದ ಸಚಿವರು, ಮುಖ್ಯಮಂತ್ರಿಗಳು ಎನ್.ಎಸ್.ಎಸ್‍ನ ವಾರ್ಷಿಕ ಬಜೆಟ್ ನ್ನು 5 ಕೋಟಿಯಿಂದ 13.65 ಕೋಟಿಗೆ ಏರಿಸಿದ್ದಾರೆ ಎಂದರು.

ಈ ಸಂಬಂಧ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳ ಅಧ್ಯಕ್ಷತೆಯಲ್ಲಿ ಉಪ ಸಮಿತಿಯನ್ನು ರಚಿಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ.

ರಾಜ್ಯದಲ್ಲಿ ಎನ್.ಎಸ್.ಎಸ್‍ನಲ್ಲಿ 6 ಲಕ್ಷ ಸ್ವಯಂ ಸೇವಕರಿದ್ದಾರೆ.ಪಿಯುಸಿ ಯಿಂದ ಪ್ರಾರಂಭವಾಗಿದ್ದ ಎನ್.ಎಸ್.ಎಸ್ ನ್ನು ಪ್ರೌಢಶಾಲೆಗಳಿಗೂ ಸಹ ವಿಸ್ತರಿಸಲಾಗಿದ್ದು, ಎನ್.ಎಸ್.ಎಸ್ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರು ಸ್ಫೂರ್ತಿಯಾಗಲಿ, ಮಹಾತ್ಮ ಗಾಂಧಿ ಚಿಂತನೆಗಳು ಬೆಳೆಯಲಿ, ಡಾ.ಬಿ.ಆರ್ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅರಿಯಲು ವಿಚಾರಸಂಕಿರಣಗಳನ್ನು ಏರ್ಪಡಿಸಲು ನಿರ್ಧರಿಸಲಾಗಿದ್ದು ಇದಕ್ಕಾಗಿ ತಲಾ 30 ಲಕ್ಷ ರೂ ಗಳ ಅನುದಾನವನ್ನು ಮೀಸಲಿಡಲಾಗಿದೆ ಎಂದರು.

ದೇಶಕ್ಕೆ ಕೊಡುಗೆ ನೀಡಿದ ಮಹನೀಯರನ್ನು ವಿದ್ಯಾರ್ಥಿಗಳನ್ನು ಮರೆಯಬಾರದು, ಯುವ ಜನತೆಯ ಖಿನ್ನತೆಯಿಂದ ಹೊರಬಂದು ಆತ್ಮ ವಿಶ್ವಾಸ ವೃದ್ದಿಸಿಕೊಳ್ಳಲು ಅನುಕೂಲವಾಗುವಂತೆ ಯುವ ಸ್ಪಂದನ ಯೋಜನೆಯನ್ನು ನಿಮ್ಹಾನ್ಸನೊಂದಿಗೆ ರಾಜ್ಯಾದ್ಯಂತ ವಿಸ್ತರಿಸಲಾಗಿದೆ. ಎನ್.ಎಸ್.ಎಸ್ ವಿದ್ಯಾರ್ಥಿಗಳಿಗಾಗಿ 800 ತರಬೇತಿ ಕ್ಯಾಂಪ್ ಮಾಡಲಾಗಿದೆ. ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.

ಈ ರಾಜ್ಯಮಟ್ಟದ ರಾಷ್ಟ್ರೀಯ ಸೇವಾ ಯೋಜನೋತ್ಸವದಲ್ಲಿ 20 ವಿಶ್ವ ವಿದ್ಯಾಲಯಗಳ ಸುಮಾರು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಗವಹಿಸಿದ್ದು, ಬೋರ್ಡ್ ಹೈಸ್ಕೂಲ್ ನಿಂದ ಪುರಭವನದ ವರೆಗೆ ಜಾಥಾ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಡಾ. ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಜಗದೀಶ್ ರಾವ್, ಪ್ರಾಧ್ಯಾಪಕರಾದ ರಾಮರಾಯ ಆಚಾರ್ಯ, ಜಯಲಕ್ಷ್ಮಿ, ಲಯನ್ಸ್ ಕ್ಲಬ್ ಪರ್ಕಳ ಅಧ್ಯಕ್ಷ ಹರೀಶ್ ಉಪಸ್ಥಿತರಿದ್ದರು.

ರಾಜ್ಯ ಎನ್.ಎಸ್.ಎಸ್ ಅಧಿಕರಿ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಪದನಿಮಿತ್ತ ಸರಕಾರದ ಜಂಟಿ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ವಂದಿಸಿದರು, ಪ್ರಾಧ್ಯಾಪಕ ಪ್ರೊ. ಪ್ರಕಾಶ್ ಕ್ರಮಧಾರಿ ನಿರೂಪಿಸಿದರು.


Spread the love

Exit mobile version