ಎಲ್ಲಾ ಧರ್ಮದವರನ್ನು ಸಮಾನವಾಗಿ ಕಾಣುವುದು ನನ್ನ ಗುಣ, ಜನತೆ ನನ್ನ ಅಭಿವೃದ್ದಿ ಕೆಲಸ ಗುರುತಿಸಿದ್ದಾರೆ; ಸೊರಕೆ

Spread the love

ಎಲ್ಲಾ ಧರ್ಮದವರನ್ನು ಸಮಾನವಾಗಿ ಕಾಣುವುದು ನನ್ನ ಗುಣ, ಜನತೆ ನನ್ನ ಅಭಿವೃದ್ದಿ ಕೆಲಸ ಗುರುತಿಸಿದ್ದಾರೆ; ಸೊರಕೆ

ಉಡುಪಿ : ಉಡುಪಿ ಜಿಲ್ಲೆ ಜಾತ್ಯತೀತ ಜಿಲ್ಲೆ. ನಾವೆಲ್ಲರೂ ಒಂದೇ ಎಂದು ಬಾಳುತ್ತಿದ್ದೇವೆ. ಆದರೂ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಇದಕ್ಕೆ ನಾವೆಲ್ಲರೂ ತಕ್ಕ ಉತ್ತರ ನೀಡಬೇಕಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಪು ಕ್ಷೇತ್ರದಲ್ಲಿ ನನ್ನ ಜಯದ ಹಿಂದೆ ಸಮಸ್ತ ಮತದಾರರೊಂದಿಗೆ ಅಲ್ಪಸಂಖ್ಯಾತರು ನನ್ನನ್ನು ಬೆಂಬಲಿಸಿದ್ದರು . ಅಲ್ಪಸಂಖ್ಯಾತರ ಮತ ವಿಭಜನೆ ಗೊಳ್ಳಲು ವಿರೋಧ ಪಕ್ಷದವರು ಬಹಳಷ್ಟು ಕೆಲಸವನ್ನು ಮಾಡುತ್ತಿದ್ದಾರೆ. ಆದರೂ ಕೂಡ ನನ್ನನ್ನು ಅಲ್ಪಸಂಖ್ಯಾತರು ಬಿಟ್ಟು ಕೊಡಲಿಲ್ಲ. ನಾನು ಎಲ್ಲಾ ಧರ್ಮದವರನ್ನು ಒಂದೇ ರೀತಿಯಾಗಿ ಕಾಣುತ್ತೇನೆ . ಯಾವುದೇ ಕಷ್ಟದಲ್ಲಿದ್ದರೂ ನಾನು ನಿಮ್ಮೊಂದಿಗಿದ್ದೇನೆ ಎಂದು ಶಾಸಕ ವಿನಯ್ ಕುಮಾರ್ ಸೊರಕೆ ಅವರು ತಿಳಿಸಿದರು.

ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪದಗ್ರಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಸಕನಾದ ಬಳಿಕ ನನಗೆ ಸಚಿವ ಸ್ಥಾನ ಸಿಕ್ಕಿತು. ಅದಕ್ಕೆಲ್ಲ ನಿಮ್ಮ ಆಶೀರ್ವಾದ ಕಾರಣ. ಈ ಬಾರಿಯೂ ತಮ್ಮೆಲ್ಲರ ಸಹಕಾರ ನನಗೆ ಅಗತ್ಯವಿದೆ. ನಾನು ನನ್ನ ಅಭಿವೃದ್ಧಿ ಕೆಲಸಗಳಿಗೆ ಪ್ರಚಾರವನ್ನು ಕೊಡುವುದಿಲ್ಲ. ಜನತೆ ನನ್ನ ಅಭಿವೃದ್ಧಿ ಕೆಲಸಗಳನ್ನು ಗುರುತಿಸಿದ್ದಾರೆ . ನೀವು ನನ್ನ ಮೇಲೆ ಇಟ್ಟ ನಿರೀಕ್ಷೆಯನ್ನು ಬಹಳಷ್ಟು ಈಡೇರಿಸಿದ್ದೇನೆ . ಮುಂದೆಯೂ ನನಗೆ ಅವಕಾಶ ಕೊಡಿ ಎಂದು ವಿನಂತಿ ಮಾಡಿಕೊಂಡರು .

ಅಲ್ಪಸಂಖ್ಯಾತ ಉದ್ಯಾವರ ಘಟಕದ ನೂತನ ಅಧ್ಯಕ್ಷರಾಗಿ ಮಹಮ್ಮದ್ ಇರ್ಫಾನ್ ಅವರು ಶಾಸಕರಿಂದ ನೇಮಕಾತಿ ಆದೇಶವನ್ನು ಸ್ವೀಕರಿಸಿದರು.

ಪ್ರಧಾನ ಕಾರ್ಯದರ್ಶಿಗಳಾಗಿ ಸಾದಿಕ್ , ರುಡಾಲ್ಫ್ ಮಚ್ಚಾದೋ , ರಾಯ್ಸ್ ಫರ್ನಾಡಿಸ್ ಸಹಿತ ಇಪ್ಪತ್ತ್ ಒಂಬತ್ತು ಪದಾಧಿಕಾರಿಗಳು ಶಾಸಕರಿಂದ ವಿವಿಧ ಹುದ್ದೆಗಳನ್ನು ಸ್ವೀಕರಿಸಿದರು .

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾದ ಗುಲಾಂ ಅಹ್ಮದ್ , ರಾಜ್ಯಸಭಾ ಸದಸ್ಯರಾದ ಆಸ್ಕರ್ ಫೆರ್ನಾಡಿಸ್ ಅವರ ಕಾರ್ಯದರ್ಶಿ ನಾಗೇಶ್ ಕುಮಾರ್ ಉದ್ಯಾವರ , ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಕುಮಾರ್ ,ರಾಷ್ಟ್ರೀಯ ಮೀನುಗಾರರ ಕಾಂಗ್ರೆಸ್ ಕಾರ್ಯದರ್ಶಿ ಕಿರಣ್ ಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹೆಲೆನ್ ಫರ್ನಾಡಿಸ್, ಹಿರಿಯ ಕಾಂಗ್ರೆಸ್ಸಿಗ ಲಾರೆನ್ಸ್ ಡೇಸಾ ವೇದಿಕೆಯಲ್ಲಿ ಉಪಸ್ಥಿತರಿದ್ದರು .

ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಉತ್ತರ ವಲಯದ ಅಧ್ಯಕ್ಷ ರಿಯಾಜ್ ಪಳ್ಳಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರ್ವಹಿಸಿದರು .


Spread the love