ಎಸ್‍ಐಓದಿಂದ ಸಹೋದರತೆಗಾಗಿ ಬಂಟ್ವಾಳ ತಾಲೂಕು ಮಟ್ಟದ ಮ್ಯಾರಥಾನ್
ಬಂಟ್ವಾಳ: ನಮ್ಮಲ್ಲಿ ಇಂದು ಹಲವಾರು ರೋಗಕ್ಕೆ ಔಷಧಿ ಕಂಡು ಹಿಡಿಯುತ್ತಿದ್ದೇವೆ. ಆದರೆ ನಮ್ಮ ಮನಸ್ಸಿನ ಸಂಕುಚಿತತೆಯಿಂದ ಇಂದು ಜನರ ನಡುವೆ ದ್ವೇಷ ಹೆಚ್ಚಾಗುತ್ತಿದೆ. ಆದ್ದರಿಂದ ಧರ್ಮದ ಹೆಸರಿನಲ್ಲಿ ನಡೆಯುವ ದ್ವೇಷದ ರೋಗಗಳಿಗೆ ಸೌಹಾರ್ದತೆಯೇ ಔಷಧಿ ಎಂದು ಬಂಟ್ವಾಳ ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ನ್ಯಾಯವಾದಿ ಜಯರಾಮ್ ರೈ ಹೇಳಿದರು.
ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್‍ಐಓ) ಬಂಟ್ವಾಳ ತಾಲೂಕು ವತಿಯಿಂದ ಸಹೋದರತೆಯ ಭಾವನೆಯನ್ನು ಮೂಡಿಸಲು ‘ಹಲವಾರು ಧರ್ಮ: ಒಂದು ಭಾರತ’ ಎಂಬ ವಾರ್ಷಿಕ ಅಭಿಯಾನದ ಅಂಗವಾಗಿ ಬಂಟ್ವಾಳ ತಾಲೂಕು ಮಟ್ಟದಲ್ಲಿ 5ರಿಂದ 10ನೇ ತರಗತಿಯ ಮಕ್ಕಳಿಗಾಗಿ ಬಿ.ಸಿ.ರೋಡ್ ಕೈಕಂಬ ಜಂಕ್ಷನ್ ನಲ್ಲಿರುವ ಪೊಳಲಿ ದ್ವಾರದಿಂದ ಬಿ.ಸಿ.ರೋಡ್ ರೈಲು ನಿಲ್ದಾಣದವರೆಗೆ ಹಮ್ಮಿಕೊಳ್ಳಲಾಗಿದ್ದ ಮ್ಯಾರಥಾನ್ ಅನ್ನು ಉದ್ಘಾಟಿಸಿ ಮಾತನಾಡಿದರು.
ಸೌಹಾರ್ದತೆಯ ಭಾವನೆ ಎಲ್ಲಿಂದ ಆರಂಭವಾಗಬೇಕಿತ್ತೋ ಅದು ಇಂದು ಅಲ್ಲಿಂದ ಆರಂಭವಾಗುತ್ತಿಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಸಹೋದರತೆಯ ಭಾವನೆಯನ್ನು ಮೂಡಿಸಲು ಇಂತಹಾ ಕಾರ್ಯಕ್ರಮ ಶ್ಲಾಘನೀಯ ಎಂದವರು ಅಭಿಪ್ರಾಯಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಗೂಡಿನಬಳಿ ಸ.ಪ.ಪೂರ್ವ ಕಾಲೇಜಿನ ಉಪನ್ಯಾಸಕ ಸಹೋದರತೆಯು ಸಮಾಜದ ಅಡಿಗಲ್ಲು. ಸಹೋದರತೆಯ ಬೀಜವನ್ನು ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಮನೆಯಲ್ಲಿ ಮತ್ತು ಮನದಲ್ಲಿ ಬಿತ್ತಲು ಕೈಗೊಂಡ ಈ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಮಹೇಶ್ ಪ್ರಥಮ, ಸರ್ಫರಾಝ್ ದ್ವಿತೀಯ:
ಮ್ಯಾರಥಾನ್‍ನಲ್ಲಿ ದೀಪಿಕಾ ಪ್ರೌಢಶಾಲೆ ಮೊಡಂಕಾಪುವಿನ ವಿದ್ಯಾರ್ಥಿಗಳಾದ ಮಹೇಶ್ ಕುಮಾರ್ ಪ್ರಥಮ ಬಹುಮಾನ ಪಡೆದರೆ, ಸರ್ಫರಾಝ್ ಶಾಂತಿಅಂಗಡಿ ದ್ವಿತೀಯ ಬಹುಮಾನ ಪಡೆದುಕೊಂಡರು.
ಎಸ್ ಐ ಓ ಕರ್ನಾಟಕ ಸಂಘಟನಾ ಕಾರ್ಯದರ್ಶಿ ಮುಹಮ್ಮದ್ ದಾನಿಶ್ ಪಾಣೆಮಂಗಳೂರು ಮಾತನಾಡಿದರು.
ಎಸ್ ಐ ಓ ಜಿಲ್ಲಾಧ್ಯಕ್ಷರಾದ ತಲ್ಹಾ ಇಸ್ಮಾಯೀಲ್, ಎಂ.ಫ್ರೆಂಡ್ಸ್ ನ ಕಾರ್ಯದರ್ಶಿ ಸಾಮಾಜಿಕ ಕಾರ್ಯಕರ್ತ ರಶೀದ್ ವಿಟ್ಲ, ಜಮಾಅತೆ ಇಸ್ಲಾಮೀ ಹಿಂದ್ ನ ಮುಖ್ತಾರ್ ಅಹ್ಮದ್, ಶಾಹುಲ್ ಹಮೀದ್, ಇಬ್ರಾಹೀಂ ಚೆಂಡಾಡಿ, ಎಸ್ ಐ ಓ ಪಾಣೆಮಂಗಳೂರು ಅಧ್ಯಕ್ಷ ತಮೀಝ್ ಅಲಿ ಕಾರಾಜೆ, ಸೋಲಿಡಾರಿಟಿ ಯೂತ್ ಮೂಮೆಂಟ್ ನ ಪದಾಧಿಕಾರಿಗಳು ಭಾಗವಹಿಸಿದ್ದರು.