ಎಸ್ಕೆಪಿಎ ಕಾಪು ವಲಯದ ಮಹಾಸಭೆ ; ಬಾಲಕೃಷ್ಣ, ಸಚಿನ್ ಶೆಟ್ಟಿ, ಖುಷಬ್ ರಾಜ್ ಗೆ ಸನ್ಮಾನ
ಕಾಪು: ಕಪ್ಪು ಬಿಳುಪು ಯುಗದಲ್ಲಿ ಒಮ್ಮೇಲೆ ಕಲರ್ ಲ್ಯಾಬ್ಗಳು ತಲೆಎತ್ತಿ ಛಾಯಾ ಗ್ರಾಹಕರಿಗೆ ತೊಂದರೆ ಕೊಡಲು ಪ್ರಾರಂಭಿಸಿದಾಗ ನಾವೆಲ್ಲ್ಲಾ ಛಾಯಾಗ್ರಾಹಕರು ಒಟ್ಟಾಗಿ ಸೌತ್ ಕೆನರಾ ಫೋಟೋ ಗ್ರಾಫರ್ಸ್ ಎಸೋಶಿಯೇಶನ್ ಸಂಸ್ಥೆಯನ್ನು ಸ್ಥಾಪಿಸಿದ್ದೇವೆ ಎಂದು ಉಡುಪಿ ಮಂಗಳೂರು ಜಿಲ್ಲಾ ಸಂಚಾಲಕ ವಿಠಲ ಚೌಟ ಹೇಳಿದ್ದಾರೆ.
ಅವರು ಶನಿವಾರ ಕಾಪು ಜೆಸಿಐ ಭವನದಲ್ಲಿ ಸೌತ್ ಕೆನರಾ ಫೋಟೋ ಗ್ರಾಫರ್ಸ್ ಸಂಘದ ಕಾಪು ವಲಯದ ಮಹಾಸಭೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮೊದಲಿಗೆ ಕೇವಲ 13 ಜನರಿಂದ ಪ್ರಾರಂಭಗೊಂಡ ಸಂಸ್ಥೆ ಈಗ 14 ವಲಯಗಳಲ್ಲಿ ಸುಮಾರು ಮೂರು ಸಾವಿರ ಸದಸ್ಯರನ್ನೊಳಗೊಂಡು ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿದೆ. ಎಲ್ಲಾ ಸದಸ್ಯರ ನೋವು ನಲಿವುಗಳಿಗೆ ನಾವು ಸ್ಪಂದಿಸುತ್ತಿದ್ದೇವೆ ಎಂದು ಹೇಳಲು ಅತ್ಯಂತ ಸಂತಸ ಆಗುತ್ತಿದೆ ಎಂದು ವಿಠಲ ಚೌಟ ಹೇಳಿದ್ದಾರೆ.
ಎಸ್. ಕೆ. ಪಿಎ ಸಂಸ್ಥೆಯ ಸಹಕಾರಿ ಸಂಘದ ಅಧ್ಯಕ್ಷ ಕೆ. ವಾಸುದೇವರಾವ್ ಮಾತನಾಡಿ, ಸಂಸ್ಥೆಯ ಯಾವ ಸಭೆಗೂ ಪ್ರತಿಷ್ಠಿತರನ್ನು ಕರೆದಾಗ, ಛಾಯಾಗ್ರಾಹಕರ ಕಾರ್ಯಕ್ರಮ ಎಂದರೆ ಶಿಸ್ತಿನ ಕಾರ್ಯಕ್ರಮ ಎಂದು ಅತ್ಯಂತ ಸಂತೋಷದಿಂದ ಭಾಗವಹಿಸುತ್ತಾರೆ. ಸಮಾಜದಲ್ಲಿದ್ದ ಉತ್ತಮ ಭಾವನೆಗಳನ್ನು ನಾವು ಉಳಿಸಿಕೊಂಡು ಹೋಗುವ ಜವಬ್ದಾರಿ ನಮ್ಮ ಮೇಲಿದೆ ಎಂದೂ ಅವರು ಹೇಳಿದರು.
ಈ ಸಂದರ್ಭ ಪ್ರತಿಷ್ಠಿತ ಕಾಪು ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಆಯ್ಕೆಗೊಂಡ ಬಾಲಕೃಷ್ಣ ಪೂಜಾರಿ ಉಚ್ಚಿಲರವರನ್ನು, ಇತ್ತೀಚೆಗೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ತಮ್ಮ ಬೈಕಿನಲ್ಲಿ ಸಂಚರಿಸಿ ಸಾಹಸಗೈದ ಕಾಪು ಸಚಿನ್ ಶೆಟ್ಟಿ ಮತ್ತು ಇತ್ತೀಚೆಗೆ ಕರಾಟೆಯಲ್ಲಿ ಚಿನ್ನದ ಪಡೆದ ಖುಷಬ್ ರಾಜ್ ಕೋಟ್ಯಾನವರನ್ನು ಕಾಪು ವಲಯದ ವತಿಯಿಂದ ಸನ್ಮಾನಿಸಲಾಯಿತು.
ಇದೇ ಸಂದರ್ಭ ಸಂಘದ ಅಶಕ್ತ್ತ ಸದಸ್ಯರಿಗೆ ಸಹಾಯಧನ ಹಾಗೂ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ವೇದಿಕೆಯಲ್ಲಿ ಕಾಪು ವಲಯಾಧ್ಯಕ್ಷ ಉದಯ್ ಕುಮಾರ್ ಮುಂಡ್ಕೂರು, ಎಸ್ ಕೆ.ಪಿಎ- ಉಡುಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಜಗನ್ನಾಥ ಶೆಟ್ಟ್ಟಿ, ಪ್ರಧಾನ ಕಾರ್ಯದರ್ಶಿ ಮಧು ಮಂಗಳೂರು, ರಜತ ಸಮಿತಿಯ ಗೌರವಾಧ್ಯಕ್ಷ ರವಿಕುಮಾರ್, ಗೌರವಾಧ್ಯಕ್ಷ ಕೃಷ್ಣರಾವ್, ಕಾರ್ಯದರ್ಶಿ ವೀರೆಂದ್ರ ಎಸ್ ಪೂಜಾರಿ, ಕೋಶಾಧಿಕಾರಿ ಸಂತೋಷ್ ಕಾಪು, ಸುರೇಶ್ ಎರ್ಮಾಳ್, ಮನೋಹರ್ ಕುಂದರ್, ಸಚಿನ್ ಉಚ್ಚಿಲ,ಪ್ರಕಾಶ್ ಕಾಪು, ಮತ್ತಿತರರು ಉಪಸ್ಥಿತರಿದ್ದರು.