Home Mangalorean News Kannada News ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಉಡುಪಿ ಜಿಲ್ಲೆಯಲ್ಲಿ 15583 ವಿದ್ಯಾರ್ಥಿಗಳು

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಉಡುಪಿ ಜಿಲ್ಲೆಯಲ್ಲಿ 15583 ವಿದ್ಯಾರ್ಥಿಗಳು

Spread the love

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಉಡುಪಿ ಜಿಲ್ಲೆಯಲ್ಲಿ 15583 ವಿದ್ಯಾರ್ಥಿಗಳು

ಉಡುಪಿ: ಮಾರ್ಚ್ 30 ರಿಂದ ಆರಂಭಗೊಳ್ಳುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಜಿಲ್ಲೆಯಿಂದ 15583 ವಿದ್ಯಾರ್ಥಿಗಳು ಹಾಜರಾಗಲಿದ್ದು, 52 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ , ಪ್ರಶ್ನೆ ಪತ್ರಿಕೆ ವಿತರಣೆಗೆ 14 ಮಾರ್ಗಗಳನ್ನು ಗುರುತಿಸಲಾಗಿದ್ದು, ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಅವರು ಗುರುವಾರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಎಸ್,ಎಸ್.ಎಲ್.ಸಿ. ಪರೀಕ್ಷೆ ನಡೆಸುವ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಯಾವುದೇ ಅತಿ ಸೂಕ್ಷ್ಮ ಮತ್ತು ಸೂಕ್ಷ್ಮ ಪರೀಕ್ಷಾ ಕೇಂದ್ರಗಳು ಇಲ್ಲ, ಈ ಬಾರಿಯ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಯನ್ನು ಪ್ರತ್ಯೇಕವಾಗಿ ನೀಡಲಾಗುವುದು, ಪರೀಕ್ಷಾ ಕೇಂದ್ರದಲ್ಲಿ ಸಿಬ್ಬಂದಿಗಳು ಮೊಬೈಲ್ ಬಳಕೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ, ನಿಗಧಿತ ಅವಧಿ ಮುಗಿಯುವ ವರೆಗೂ ಯಾವುದೇ ವಿದ್ಯಾರ್ಥಿ ಪ್ರಶ್ನೆ ಪತ್ರಿಕೆಯನ್ನು ಹೊರಗೆ ಕೊಂಡೊಯ್ಯುವಂತಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಎಲ್ಲಾ ಪರೀಕ್ಷೆಗಳು ನಿಗಧಿತ ಸಮಯಕ್ಕೆ ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳು 9.15 ರ ಒಳಗೆ ಪರೀಕ್ಷಾ ಕೇಂಧ್ರದಲ್ಲಿರಬೇಕು, 9.30 ರ ನಂತರ ಪರೀಕ್ಷ ಕೇಂದ್ರದ ಒಳಗೆ ಪ್ರವೇಶ ಇರುವುದಿಲ್ಲ, ದೂರದ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ನಿಗಧಿತ ಅವಧಿಯೊಳಗೆ ಪರೀಕ್ಷಾ ಕೇಂದ್ರಕ್ಕೆ ಬರಲು ಸಹಾಯವಾಗುವಂತೆ ಅಗತ್ಯವಿರುವಡೆ ಕೆ.ಎಸ್.ಆರ್.ಟಿ.ಸಿ ಬಸ್ ಗಳನ್ನು ಓಡಾಟಕ್ಕೆ ವ್ಯವಸ್ಥೆ ಮಾಡುವಂತೆ ಆರ್.ಟಿ.ಓ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಅಂತಹ ಗ್ರಾಮೀಣ ಪ್ರದೇಶಗಳ ವಿವರಗಳನ್ನು ನೀಡುವಂತೆ ಡಿಡಿಪಿಐ ಗೆ ಸೂಚಿಸಿದರು.

ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಸಿಸಿಟಿವಿ ಯನ್ನು ಅಳವಡಿಸಲಾಗಿದ್ದು, ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಹಾಗೂ ಸಮೀಪದ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಆದೇಶ ನೀಡಲಾಗುವುದು ಎಂದು ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.

ಪರೀಕ್ಷೆಗಳಲ್ಲಿ ನಕಲು ಮಾಡುವುದು ಮತ್ತು ನಕಲು ಮಾಡಲು ಸಹಕರಿಸುವುದು ಸಹ ಅಪರಾಧವಾಗುತ್ತದೆ, ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ವೀಕ್ಷಕರನ್ನು ಹಾಗೂ ಸ್ಕ್ವಾಡ್ ಗಳನ್ನು ನೇಮಕ ಮಾಡಲಾಗುವುದು , ಪರೀಕ್ಷೆಗಳು ಆರಂಭವಾಗುವ 1 ಗಂಟೆ ಮುಂಚೆ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ತೆಗೆಯಲಾಗುವುದು ಎಂದು ಡಿಡಿಪಿಐ ದಿವಾಕರ ಶೆಟ್ಟಿ ತಿಳಿಸಿದರು.

ಸಭೆಯಲ್ಲಿ ಡಯಟ್ ನ ಪ್ರಾಂಶುಪಾಲ ಶೇಖರ್, ಖಜಾನೆ ಇಲಾಖೆಯ ಉಪ ನಿರ್ದೇಶಕ ಮಾಧವ ಹೆಗೆಡೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲೆಗಳು ಮುಖ್ಯೋಪಧ್ಯಾಯರು ಉಪಸ್ಥಿತರಿದ್ದರು.


Spread the love

Exit mobile version